Sunday, 23 November 2014

ಮೊದಲ ಕವನದ ಗುಂಗಲ್ಲಿ

ಬರೆದ ಮೊದಲ
ಮುರುಕಲು ಕವಿತೆಯನ್ನ
ಚಡ್ಡಿಯ ಜೇಬಿನಲ್ಲೇ ಬಿಟ್ಟು ...

ವರ್ಷಗಳೇ ಕಳೆದು
ಮೊನ್ನೆಯಷ್ಟೇ ಸಿಕ್ಕಿತು;

ಚಡ್ಡಿ ನಡುವಿಗೆ ಹತ್ತಲಿಲ್ಲ
ಕವಿತೆ ತಲೆಗೆ ಹತ್ತಲಿಲ್ಲ!!


ನೀಲಿ ಶಾಯಿಯ ಗೀಟಿನಲ್ಲಿ
ಮುಗ್ಧತೆಯ ಕೊಂಬು
ನೋವು ಕೊಡದ ಒತ್ತು
ಪರಿಯಿಲ್ಲದ ಶೈಲಿ
ನಡುಕದ ವರ್ತುಲ
ತಿರುವಿಲ್ಲದ ತಿರುವು
ಎಲ್ಲವೂ ಅಪ್ರತಿಮ;


ಬರೆದದ್ದು ನಾನಲ್ಲವೆಂಬ
ಅಹಂಕಾರದ ಹುಸಿ ನಿಲುವು;
ನಂತರ
ನನ್ನದೇ ಎಂಬ ಸಮಜಾಯಿಶಿ!!

ಯಾತಕ್ಕಾಗಿ ಬರೆದೆನೋ
ನೆನಪಿಲ್ಲದಷ್ಟು ಹಳೆಯದೇನಲ್ಲ;
ಸುಮಾರು ಐದು ವರ್ಷದ ಹಿಂದಿನ
ವಿಷಾದಮಯ ಕವಿತೆ;


ಓದಿಗೆ ಎಟುಕಿದ್ದು ಮಾತ್ರ
ನೆನಪಿನ ಸಿಹಿ ತಿನಿಸು ಡಬ್ಬಿ!!

ಅಂದಿನ ತಪ್ಪುಗಳಿಗೆ ಹೋಲಿಸಿದರೆ
ಇಂದಿನವುಗಳಿಗೆ ಎಗ್ಗಿಲ್ಲ;
ಖಾಲಿ ಅಕ್ಷರಗಳೇ ವಿನಹ
ಚೆಲ್ಲಿಕೊಂಡರೂ ಸದ್ದಿಲ್ಲ!!


ಅದು ವಿಜಿಟಿಂಗ್ ಕಾರ್ಡಿನ ಹಿಂದೆ
ಸಣ್ಣ ಚೌಕದೊಳಗೆ ಅರಳಿದ
ಕಾಡು ಮಲ್ಲಿಗೆಯಂಥ ಚೆಲುವು;

ಶೀರ್ಷಿಕೆಗಾಗಿ ಕಾಯದ
ಅದ್ಭುತ ಕಾವ್ಯ


ನನ್ನ ಬೆರಳು ಹಡೆದ
ಮೊದಲ ಕೂಸು
ಇನ್ನೂ ಉಸಿರಾಡುತ್ತಿದೆ;
ಈಗ ಅದಕ್ಕೊಂದು ಶೀರ್ಷಿಕೆ ಕೊಟ್ಟು
ಅಂದವ ಮೊಟಕುಗೊಳಿಸಲಾರೆ!!


                               -- ರತ್ನಸುತ

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...