Sunday, 23 November 2014

ಹಸಿವಿನ ಹೋರಾಟದಲ್ಲಿ

ಚಿತ್ರಸಂತೆಯಲ್ಲಿ ನನ್ನದೊಂದು ಚಿತ್ರ ಮಾರಾಟಕ್ಕಿದೆ,
ಅಲ್ಲಿ ಕೋರೆ ಹಲ್ಲಿನ ಮುದುಕ
ಬೀಡಿ ಸೇದುತ್ತ ಬೋಳು ಮರದಡಿ ಕುಳಿತು...

ಬಣ್ಣ ಬಣ್ಣದ ಕನಸು ಕಾಣುತ್ತಿದ್ದಾನೆ!!


ಕನಸನ್ನ ಬಿಡಿಸುವಷ್ಟು ಕಲೆಗಾರ ನಾನಲ್ಲ,
ಮುದುಕನ ಕಣ್ಣಲ್ಲಿ ನಿಮಗದು ಕಂಡರೆ
ನೀವೇ ಅಪ್ರತಿಮ ಕಲೆಗಾರರು;
ಬೆಲೆ ಕೇವಲ ನಿಮ್ಮ ಒಪ್ಪೊತ್ತಿನ ಊಟದಷ್ಟು,
ಅದರೊಟ್ಟಿಗೆ ನನ್ನ ನಗುವನ್ನೂ ಫ್ರೀಯಾಗಿ ಪಡೆದುಕೊಳ್ಳಿ!!


ಅರೆರೆ, ಜೋರು ಗಾಳಿ ಬೀಸಿ
ಮರ ಅಲುಗಾಡುತ್ತಿದೆ
ಮೊದಲೇ ಮುಪ್ಪಿನ ಮರ
ಹಿಂದೆಯೇ ಜೋರು ಮಳೆ ಬೇರೆ;
ಮಣ್ಣು ಶಿಥಿಲಗೊಳ್ಳುತ್ತಿದೆ
ಈಗಲೋ-ಆಗಲೋ ಮರ ಉರುಳ ಬಹುದು!!


ಬೀಡಿ ಖಾಲಿಯಾಗುವನಕ ಅಲ್ಲೇ ಕೂರಲು
ಮುದುಕನಿಗೇನು ಬೆಪ್ಪೇ?
ಆತನಿಗೂ ಮರದ ಅರ್ಧದಷ್ಟು ವಯಸ್ಸಾಗಿದೆ;
ಏನು ಮಾಡಬೇಕಿತ್ತೋ ಅದನ್ನೇ ಮಾಡಿದ,
ಮನೆ ಕಡೆ ಓಡಿದ!!


ಅವ ಅತ್ತ ಓಡಿದಂತೆ
ಮರ ಧೊಪ್ಪನೆ ನೆಲಕ್ಕುರುಳಿತು;
ಇದ ಕಂಡು ಸುಮ್ಮನೆ ಬಿಟ್ಟಾರೇ ಮಂದಿ?
ಮಳೆಯನ್ನೂ ಲೆಕ್ಕಿಸದೆ
ವಾರಸುದಾರರ ಸೋಗಿನಲಿ ಬಂದು
ಹರಿದು ಹಂಚಿಕೊಂಡು
ಗುರುತಿಗಾದರೂ ಏನನ್ನೂ ಉಳಿಸದಂತೆ ದೋಚಿದ್ದಾರೆ!!


ಇನ್ನೆಲ್ಲಿ ಕಂಡಾನು ಮುದುಕ?
ಮನೆಯಲ್ಲೇ ಕೊನೆ ಉಸಿರೆಳೆದಿರುತ್ತಾನೆ;
ಕೊನೆಗೆ ಉಳಿದಿರುವುದು ನಿರ್ಭಾವುಕ ಮಣ್ಣು,
ಬಿಟ್ಟರೆ ಅದನ್ನೂ ದೋಚುವವರಿದ್ದಾರೆ;
ಬೇಗ ಕೊಂಡುಕೊಳ್ಳಿ ನನ್ನ ಚಿತ್ರವನ್ನ,
ನಿಮ್ಮ ಒಪ್ಪೊತ್ತಿನ ಊಟದ ಬೆಲೆಗೆ!!


                                                       -- ರತ್ನಸುತ

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...