Sunday, 20 December 2015

ಹುಟ್ಟು ಹಬ್ಬ

ಹೊಸತೇನೂ ಇಲ್ಲ ಗೆಳತಿ
ಇದೂ ಮತ್ತೊಂದು ವಾರಾಂತ್ಯವಷ್ಟೇ
ತಡವಾಗಿ ಮಲಗಿ, ಬಡವಾಗಿ ಎದ್ದು
ಬಿಡುವಾಗಿ ಕಾಲಹರಣ ನಡೆಸೋ ದಿನ!!


ಇಷ್ಟೇ ಆಗಿದ್ದರೆ ಇಷ್ಟರಲ್ಲೇ ಸಾಗುತ್ತಿದ್ದೆ
ಆದರೆ ಇಂದು ನಿನ್ನ ಜನ್ಮ ದಿನ,
ನಿನ್ನ ಕಣ್ಣೊಳಗೆ ನಿರೀಕ್ಷಾ ಶಿಖರಗಳ
ದೂರದಿಂದಲೇ ಗ್ರಹಿಸಿ
ಏರಿಳಿಯುವ ಸಾಹಸಕ್ಕೆ ಕೈ ಹಾಕದೆ
ಬೆಚ್ಚಿ ಉಳಿದಿದ್ದೇನೆ


ನಿನ್ನ ಅಚ್ಚರಿಗೊಳಿಸುವ ಅಸ್ತ್ರಗಳೆಲ್ಲ
ಪ್ರಯೋಗಕ್ಕೂ ಅರ್ಹವಲ್ಲ ಎಂದು ತಿಳಿದಾಗ
ಶರಣಾಗಿ ನಿನ್ನನ್ನೇ ಸಲಹೆ ಕೇಳಿದಾಗ
ನೀ ಮುನಿಸಿಕೊಳ್ಳಲು ಅರ್ಥವಿದೆ


ಬಿಡಿಗಾಸಿನುಡುಗೊರೆಗೆ ಬೆರಗಾಗಿ
ಬಿಗಿದಪ್ಪಿ "ಇಷ್ಟೇ ಸಾಕು ಇನಿಯ" ಅಂದಾಗ
ನನ್ನ ಅಲ್ಪತನದ ಶ್ರೀಮಂತಿಕೆಗೆ
ಹಿಡಿ ಮಣ್ಣು ಹಾಕುವಷ್ಟು ಸಿಟ್ಟು
ಇನ್ನೂ ಹೆಚ್ಚಿನದ್ದೇನಾದರೂ ನೀಡಬೇಕೆಂಬ  ಖಯಾಲಿ


ಎಲ್ಲ ಸಂದರ್ಭಕ್ಕೂ ಕವಿತೆ ಸಲ್ಲ
ಆದರೂ ಕಿರುಗವಿತೆಯೊಂದನ್ನು
ಕಾಡಿ ಬೇಡಿ ಗೀಚಿಕೊಂಡರೆ
ಅದರ ತುಂಬೆಲ್ಲ ಅಕ್ಷರ ದೋಷಗಳೇ,
ಅಷ್ಟಾಗಿಯೂ ಮೆಚ್ಚುವ ನಿನ್ನ ನಾ ಮೆಚ್ಚಿದ್ದೇ
ಇಷ್ಟರವರೆಗಿನೊಳಗಿನವುಗಳಲ್ಲಿ ಪುಣ್ಯದ ಕೆಲಸ


ನಾನೇ ನಿನ್ನ ಉಡುಗೊರೆಯೆಂದು ಹೇಳುವ
ನನ್ನ ಅಸಹಾಯಕತೆಯಲ್ಲಿಯ ಪ್ರೇಮವನ್ನೂ ಒಪ್ಪುವ ನಿನ್ನಲ್ಲಿ
ನಾ ಬೆರೆಯುವಾಗೆಲ್ಲ ಒಂದು ತೃಪ್ತ ಭಾವ,
ಅದ ನಿನಗೆ ತಿಳಿಪಡಿಸುವ ಪ್ರಯತ್ನಕ್ಕೆ
ಜಯ ಸಿಗಲೆಂದು ಪ್ರಾರ್ತಿಸುವ ನಿನಗೆ
ದಕ್ಕಿದ ನಾನೇ ಧನ್ಯನೆಂದು ಬೀಗುತ್ತೇನೆ!!


ಇಂದು ನಿನ್ನ ಹುಟ್ಟು ಹಬ್ಬ ಗೆಳತಿ
ನಾನೂ ಹೊಸದಾಗಿ ಹುಟ್ಟಿದ ಸಂತಸ
ಇಬ್ಬರಿಗೂ ಆಚರಿಸಿಕೊಳ್ಳಲು ಕಾರಣಗಳಿವೆ
ನಾ ನಿನಗೆ, ನೀ ನನಗೆ ಕಾರಣ


                                           - ರತ್ನಸುತ

No comments:

Post a Comment

ಹೃದಯವ ನೀಡಲೇ

ಹೃದಯವ ನೀಡಲೇ ಹೇಳದ ಮಾತಿವೆ ನೂರಾರು ಆಲಿಸು ಈಗಲೇ ಪಾಲಿಸಿ ನಿನ್ನಯ ನೆರಳನು ಹೃದಯವ ನೀಡಲೇ ಹೊಂಗನಸ ಅಂಗಳದಿ ಅರಳಿರುವ ಚಂದಿರ ನೀ  ಯಾರಿರದ ತೀರದಲಿ ಅಲೆಗಳಲೂ ನಿನ್ನ ದನಿ  ...