Tuesday, 22 December 2015

ಸಾವಿಲ್ಲದವು

ಸಾವಿರ ಸುಳ್ಳಿನ ನಡುವೆ
ನಿಜವಾದ ಬದುಕೊಂದು
ತನ್ನ ಸಾಚಾತನವನ್ನ ಸಾರುತ್ತ
ಸುಳ್ಳಿನ ಬಣ್ಣ ಹಚ್ಚುತ್ತಲೇ
ಸುಳ್ಳನ್ನು ಸುಳ್ಳಾಗಿಸುವ ಹಾದಿಯಲಿ
ಬಹಳ ಬೇಗ ಕೊನೆಗಾಣುತ್ತಿದೆ



ಬಿತ್ತಿದ ಬೀಜದ ಸತ್ಯದಲಿ
ಹೆಮ್ಮರವಾಗುವಷ್ಟು ತೂಕ
ಸುಳ್ಳು ತಾನಾಗಲೇ ಕಳಚಿಕೊಂಡ ತೇವ,
ಈಗ ಬೀಜಕ್ಕೆ ಹೆಮ್ಮರವಾಗುವ ಆಸ್ತೆಗಿಂತ
ತೇವಾಂಶ ಗಿಟ್ಟಿಸಿಕೊಳ್ಳುವ ತವಕ



ಮೋಡದ ನಿಧಾನ ಗತಿಯಲ್ಲಿ
ಹುನ್ನಾರವುದುಗಿಹುದೆಂದನಿಸಿ
ಮಣ್ಣು ಸತ್ತಂತೆ ನಟಿಸಿದರೆ
ಅನುಕಂಪಕ್ಕೆ ಜಲಪ್ರಳಯವಾಗಬಹುದು,
ಸುಳ್ಳಾಡುವಲ್ಲಿ ಎಚ್ಚರಿಕೆಯ ನಡೆಯಿಟ್ಟರೆ
ಸತ್ಯದ ಬಾಯಿ ಮುಚ್ಚುವುದು ಖಾಯಂ



ಕನಸಿನ ಹಸಿ ಸತ್ಯ ಇಷ್ಟಪಟ್ಟವರು
ಚಿರನಿದ್ದೆಯ ಮೊರೆ ಹೋಗಿ
ಗುರುತೇ ಇಲ್ಲದಂತಾಗಿರುವುದ
ಕಪಟಿಗಳು ಒತ್ತಿ ಒತ್ತಿ ಹೇಳುವಾಗ
ನಂಬಿಕೆಗಳು ಒಂದೊಂದಾಗಿ
ಸೋತು ಶರಣಾಗುತಿವೆ



ನೆರಳು ಸುಳ್ಳಾಗದಿರಲು
ಮೂಲ ಸುಳ್ಳಾಗದಿರಬೇಕೆಂದು
ಪ್ರತಿಪಾದಿಸುವ ಆಕಾರಗಳದೆಷ್ಟು ಸತ್ಯ?
ಎಲ್ಲವೂ ಸುಳ್ಳೆಂದು ಭಾವಿಸಿದರೆ
ಕೆಲವಾರು ನಿಜದಿಂದ ನಿಟ್ಟುಸಿರು ಬಿಡಬಹುದು
ಅನ್ಯತಾ ಭಾವಿಸಿದೊಡೆ
ನಮ್ಮತನಗಳೇ ನಮ್ಮನ್ನು ದೂರಬಹುದು!!



ಸತ್ಯಕ್ಕೆ ಸಾವಿಲ್ಲ
ಅಂತೆಯೇ ಸುಳ್ಳಿಗೂ...

                                     - ರತ್ನಸುತ

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...