Monday, 21 December 2015

ತಿಂಗಳ ಕೊನೆ

ತಿಂಗಳ ಕೊನೆಯ ಬಿಲ್ಲೆಗಳೆ
ಸದ್ದೇ ಮಾಡದೆ ಎಲ್ಲಿ ಉಳಿದಿರಿ?
ಎಂದೋ ಗೂಟಕೆ ಜೋತ ಪ್ಯಾಂಟಿನ
ಜೇಬಿನ ತೂತಿಗೆ ಮುನಿದರೆ ಹೇಗೆ?


ಚಿಲ್ಲರೆಯಿಲ್ಲದೆ ಬಿಟ್ಟುಕೊಟ್ಟಿದ್ದೆ
ಅಂಗಡಿಯವನಿಗೆ ಗುರುತೇ ಇಲ್ಲ
ಲೆಕ್ಕದ ಪುಸ್ತಕ ತೋರುವ ಅಂಕಿಗೆ
ತಿಂಗಳ ಖರ್ಚು ಹೊಂದುತಲಿಲ್ಲ


ಸಾಲವ ಕೊಟ್ಟ ಸ್ನೇಹಿತರೆಲ್ಲ
ಸ್ನೇಹಿತರಲ್ಲದೆ ಉಳಿದರು ದೂರ
ಕೊಟ್ಟು ವಾಡಿಕೆಯಾಗಿದೆ ಅಲ್ಲದೆ
ಕೇಳುವುದಾದರೆ ಕೇಳಲಿ ಯಾರ?


ಎಲ್ಲೋ ಮರೆತು ಇರಿಸಿದ ಕಾಸು
ಥಟ್ಟನೆ ಕಣ್ಣಿಗೆ ಕಂಡರೆ ಹೇಗೆ?
ಅಷ್ಟೋ ಇಷ್ಟೋ ದಕ್ಕಿಸಿಕೊಂಡರೂ
ಕ್ಷಣದಲೇ ಮಾಯ ದೇವರ ಹಾಗೆ


ಬಾಧಿಸುವವುಗಳು ಬದಿಯಲೇ ಉಳಿದವು
ತಿಂಗಳು ಕೊನೆಗೊಳ್ಳುವ ಅವಧಿಯಲಿ
ಸಂಬಳದ ಸವಿ ಸವಿಯುವ ಮುನ್ನವೇ
ಸವೆವುದು ಮೊದಲ ವಾರದ ಕಡೆಯಲಿ


ಉಳಿತಾಯ ಖಾತೆಯಲ್ಲುಳಿವುದಿಲ್ಲ
ಕೇಡುಗಾಲಕಾಗುವಷ್ಟಾದರೂ
ಸಾಲ ಕೊಂಡರೆ ಬಡ್ಡಿಯ ಗೋಳು
ಕಟ್ಟಲೇ ಬೇಕು ಸತ್ತಾದರೂ!!


                                - ರತ್ನಸುತ

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...