Friday, 21 February 2020

ತೋಚಿದಂತೆ ಗೀಚಿಕೊಳ್ಳಲೇ ಒಲೆಯ

ತೋಚಿದಂತೆ ಗೀಚಿಕೊಳ್ಳಲೇ ಒಲೆಯ 
ಬಾಚಿ ಬಳಸಿ ಕಟ್ಟಿ ಕಳಿಸಲೇ ಮಲ್ಲೆಯ 
ದಾರಿ ತಪ್ಪಿ ಬಂದೆ ಇಲ್ಲಿಗೆ ಎನ್ನುತ 
ಹೋಗಿ ಬರಲೇ ನೆಟ್ಟು ಮನದಲಿ ನಲ್ಮೆಯ 

ಕಟ್ಟ ಕಡೆಯ ಆಸೆ ನನ್ನದು ಇಂದಿಗೆ 
ಇನ್ನು ಮೇಲೆ ನಿನ್ನ ಆಸರೆ ಬಾಳಿಗೆ 
ತಾಕುವಂತ ನೋಟ ನಿನ್ನದು ಆದರೂ 
ತಾಕಿ ಹೋಗು ಒಮ್ಮೆ ಇಲ್ಲವೇ ಪೇಚಿಗೆ

ಹಗ್ಗ ಜಗ್ಗುವಾಟ ನಡುವಲಿ ಪ್ರೇಮವು 
ಅತ್ತ ನೀನು, ಇತ್ತ ಬಿಕ್ಕಿದ ಪ್ರಾಣವು 
ನಾನು ಸೋತು ನೀನೂ ಸೋತರೆ ಅಲ್ಲಿಗೆ 
ಪ್ರೇಮಕೆ ತಲೆಯ ಬಾಗಿತು ಎಲ್ಲವೂ 

ಎಲ್ಲದಕ್ಕೂ ಕೊನೆಯೊಂದಿದೆ ಕಂಡೆನು 
ಕಂಡ ಕೊನೆಯೇ ಕೊನೆಯಲ್ಲದ ಬಲ್ಲೆನು 
ಮತ್ತೆ ಮತ್ತೆ ಕೊನರುವಂಥ ಈ ಪ್ರೇಮವೇ 
ಕೊನೆಗೆ ಕೊನೆ ಎಂಬ ಸತ್ಯವ ಅರಿತೆನು 

ದೂರ ದೂರ ಸುರುಳಿ ಗೂಡನು ಕಟ್ಟುವ 
ಅರ್ಧ ನಿಮಿಷ ಕತ್ತಲಲ್ಲಿಯೇ ಬಾಳುವ 
ರೆಕ್ಕೆ ಮೂಡಿ ಬಂದ ಕ್ಷಣವನು ಮೆಲ್ಲುತ 
ಎತ್ತೆತ್ತರಗಳ ಮೀರುತ ಹಾರುವ.... 

No comments:

Post a Comment

ಹೃದಯವ ನೀಡಲೇ

ಹೃದಯವ ನೀಡಲೇ ಹೇಳದ ಮಾತಿವೆ ನೂರಾರು ಆಲಿಸು ಈಗಲೇ ಪಾಲಿಸಿ ನಿನ್ನಯ ನೆರಳನು ಹೃದಯವ ನೀಡಲೇ ಹೊಂಗನಸ ಅಂಗಳದಿ ಅರಳಿರುವ ಚಂದಿರ ನೀ  ಯಾರಿರದ ತೀರದಲಿ ಅಲೆಗಳಲೂ ನಿನ್ನ ದನಿ  ...