Tuesday, 11 February 2020

ಉಕ್ಕಿ ಬಂದ ನದಿಯ

ಉಕ್ಕಿ ಬಂದ ನದಿಯ
ದಕ್ಕಿಸಿಕೊಂಡಿತು ಕಡಲು
ಬಿಕ್ಕಿ ಅಳುವ ಸಮಯ
ಹಗುರ ಆಯಿತು ಮುಗಿಲು
ಪಾತ್ರಗಳೆಲ್ಲ ಮೊದಲಾಗಿ 
ರೂಪಾಂತರಗೊಳ್ಳುವ ಗಳಿಗೆ
ಸೂತ್ರವೇ ಇರದೆ ಮುನ್ನಡೆದ
ನಾಟಕವು ಎಲ್ಲಿಯವರೆಗೆ?
ಬತ್ತಿದ ನದಿಗೂ, ಖಾಲಿ ಬಾನಿಗೂ ಇನ್ನೂ ಕಾತರವೇ 
ತಮ್ಮನು ತಾವು ಮತ್ತೆ ಕಟ್ಟಲು ಎದುರು ನೋಡುತಿವೆ 

ಒಡೆದ ಕನ್ನಡಿ ಒಡಲಲ್ಲಿ 
ನೂರಾರು ನಕಲು ಬಿಂಬವಿದೆ 
ಕಡಿದ ಮರದ ಬುಡವಿನ್ನೂ 
ಬೇರನ್ನೇ ನೆಚ್ಚಿ ಬದುಕುತಿದೆ 
ಎಲ್ಲ ಮುಗಿದಂತೇನಲ್ಲ 
ಮುಗಿದಂತೆ ಭ್ರಮಿಸಲು ನಮ್ಮೊಳಗೆ 
ಕಳುವಾದಲ್ಲೇ ಸುಳುವೊಂದ 
ಬಿಡಬೇಕು ಮರಳುವ ಸಾಧ್ಯತೆಗೆ 
ಕುಡುಗೋಲಂಚಿಗೆ ಬಿಡುಗಡೆಯಿಲ್ಲ ಬೀಸುವ ಕೈಯ್ಯಿರಲು 
ಕಿವಿಗೊಡಬಾರದು ಆದ ಗಾಯಕೆ ಎಲ್ಲ ಮುಗಿದಿರಲು... 

ಬದುಕಿನ ಆಳದ ನಳಿಕೆಯಲಿ 
ಇಳಿಬಿಟ್ಟೆ ಹಗ್ಗದ ಕೊನೆಯನ್ನು 
ಮತ್ತೆ ಮೇಲಕೆ ಸೇದಿದರೆ 
ಮೊಳದಷ್ಟೇ ಮರಳಿದ ಗುಟ್ಟೇನು?
ನಾಳೆಯ ಹಿಡಿಯಲು ಹೊರಟಾಗ 
ಈಗಿರುವವು ಆದವು ನೆನ್ನೆಗಳು 
ಗಡಿಯಾರಕ್ಕೆ ಗುರಿಯಿಟ್ಟ
ಬಂದೂಕಿಗೂ ಸಮಯ ಮೀರಿರಲು 
ಕಟ್ಟಿದ ಗೋಡೆ ಬೀಳುವ ವೇಳೆ ಪ್ರಶ್ನೆಗಳುಳಿದಿಲ್ಲ 
ಚಿತ್ತದ ದೂರ ಹೆಚ್ಚಿದ ಹಾಗೆ ನಿಲ್ಲಲು ಮನಸಿಲ್ಲ... 

No comments:

Post a Comment

ಹೃದಯವ ನೀಡಲೇ

ಹೃದಯವ ನೀಡಲೇ ಹೇಳದ ಮಾತಿವೆ ನೂರಾರು ಆಲಿಸು ಈಗಲೇ ಪಾಲಿಸಿ ನಿನ್ನಯ ನೆರಳನು ಹೃದಯವ ನೀಡಲೇ ಹೊಂಗನಸ ಅಂಗಳದಿ ಅರಳಿರುವ ಚಂದಿರ ನೀ  ಯಾರಿರದ ತೀರದಲಿ ಅಲೆಗಳಲೂ ನಿನ್ನ ದನಿ  ...