Friday, 17 October 2014

ಕ್ಷಮಾಪಣೆ

ಕ್ಷಮಿಸಿಬಿಡವ್ವ
ನನ್ನ ಕಣ್ಣೀರಿಗೆ ನಿನ್ನ ಕಣ್ಣೀರೊರೆಸೋ
ಶಕ್ತಿಯಿಲ್ಲವೆಂದು ತಿಳಿದೂ
ಅಳುವುದಷ್ಟೇ ನನ್ನ ಪಾಲಿಗುಳಿದ
ಅಂತಿಮ ಆಯ್ಕೆ!!
ಅತ್ತು ಬಿಟ್ಟೆ,
ಬೆಟ್ಟದಷ್ಟು ದುಃಖದಡಿ ಹುಲ್ಲನ್ನೂ
ತೇವಗೊಳಿಸಲಾಗದೆ ಹೋದೆ;
ತುತ್ತ ತುದಿಯನ್ನು ಮುಟ್ಟಿದಾಕೆ
ಇನ್ನೆಷ್ಟು ಅತ್ತೆಯವ್ವ ನೀನು?!!
ಬತ್ತಿ ಹೋಗಿರಬೇಕು
ಬಿರುಕು ಬಿಟ್ಟಿರಬೇಕು ಕಣ್ಗಳು
ಮರೆಸಬೇಡವ್ವ, ತೋರು
ಕಂಡು ಈ ಪಾಪಿ ಕಣ್ಗಳು
ಸತ್ತು ಹೋಗಲಿ!!
ಕುರುಡನಾದರೆ
ನಿನ್ನ ವೇದನೆಯ ಊಹೆ
ಚೂರು ಸಹ್ಯವೆನಿಸಬಹುದು,
ಈಗಿನ ನರಕವ ನೋಡಲಾರೆ!!
ಕ್ಷಮಿಸವ್ವ
ರಕ್ಷಿಸಿಕೊಳ್ಳಬಹುದಾದಾಗ
ಹೇಡಿಯಂತೆ ತಪ್ಪಿಸಿಕೊಂಡೆ
ಈಗ ಪರಿತಪಿಸುತ್ತಿರುವೆ
ಕಾಲ ಚಕ್ರವ ಹೊರಳಿ
ಮತ್ತೆ ಗತಕಾಲಕ್ಕೆ ಒಯ್ದು
ಎಲ್ಲವನ್ನೂ ಅಂದುಕೊಂಡಂತೆ ಸಿಂಗರಿಸುವಾಸೆ;
ಆ ಆಸೆ ಪಡಲಿಕ್ಕೂ ನಾ ಯೋಗ್ಯನಲ್ಲ!!
                                         -- ರತ್ನಸುತ

1 comment:

  1. "ಕ್ಷಮಿಸವ್ವ
    ರಕ್ಷಿಸಿಕೊಳ್ಳಬಹುದಾದಾಗ
    ಹೇಡಿಯಂತೆ ತಪ್ಪಿಸಿಕೊಂಡೆ
    ಈಗ ಪರಿತಪಿಸುತ್ತಿರುವೆ"
    ಯಾಕೋ ತಮ್ಮ ಈ ಸಾಲುಗಳನ್ನು ಓದಿ ಮನಸು ಮ್ಲಾನವಾಯಿತು.

    ತಾವು ಯಾವ ಉದ್ದೇಶದಿಂದ ಈ ಕವನ ಬರೆದಿದ್ದರೂ ಸಹ ನನಗೆ ಎರಡು ಆಯಾಮಗಳಲ್ಲಿ ಹೂರಣ ತಟ್ಟಿತ್ತು.
    ೧. ಭ್ರಷ್ಟಾಚಾರ ಮತ್ತು ಅನಾಚಾರದ ಕೂಪವಾಗಿರುವ ಮಾತೃ ಭೂಮಿಯ ಅಳಲು.
    ೨. ಅತ್ಯಾಚಾರ ಮತ್ತಿತರ ಶೋಷಣೆಗಳಿಂದ ನಲುಗಿದ ಸ್ರೀ ಸಮಾಜ.

    ReplyDelete

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...