Saturday, 14 March 2020

ದಿಯಾ

ಅವಳ ಬಲಗಿವಿಯ ಕೆಳಗೊಂದು ಮಚ್ಚೆ
ಬೀಳುವ ಮೊದಲೇ ಎಲ್ಲ ಖುಷಿಯ ಕದ್ದು ಆಲಿಸಿ
ಪುಳಕಿತಗೊಂಡು ನಂತರ ಮನಸಿಗೆ ತಲುಪಿಸಿತ್ತು

ಅವಳ ಬಲಗಿವಿಯ ಕೆಳಗೊಂದು ಮಚ್ಚೆ
ಆರ್ತನಾದಕೆ ತಾ ಮೊದಲು ವಿಚಲಿತಗೊಂಡು
ಆನಂತರ ಕಣ್ಣ ಹನಿಯ ಉರುಳಿಸುತ್ತಿತ್ತು

ಮೊಡವೆ ಕಲೆಯನ್ನೂ ಅಂದಗಾಣಿಸಲು ಬಲ್ಲವಳು
ಖುಷಿಗೂ, ದುಃಖಕ್ಕೂ ಹಾಗೆ ಅರಳಿ ಮೊಗ್ಗಾಗುವ
ಮೂಗಿನಂಚಿನ ಕೆಂಪು ಗಲ್ಲಕ್ಕೂ ಹಬ್ಬಿಸಿದ್ದಳು

ಸದಾ ಹೊಸತನ ಬಯಸುವ ಬೈತಲೆ
ಸೀಳಿನ ನಡುವೆ ಅಲ್ಲಲ್ಲಿ ಬಿಳಿಗೂದಲು
ಅದನ್ನು ಮರೆಮಾಚದೆ ಉಳಿಸಿದ್ದಳಲ್ಲ
ಅದೂ ನನ್ನ ಕಣ್ಮನ ಸೆಳೆದು ಬಿಟ್ಟಿತ್ತು

ಭಾರವನ್ನೇ ಹೊತ್ತ ಬಿರುಸಾದ ಹೆಜ್ಜೆ
ಕೈ ತರಚಿದ ಗೋಡೆಗೂ ಆದ ಗಾಯದ ಗುರುತು?
ಅದ ಗಮನಿಸದೆ ಅವಳನ್ನೇ ಹಿಂಬಾಲಿಸಿ ಹೊರಟೆ

ಅವಳು ಅಲೆಗಳೊಂದಿದೆ ಮಾತಾಡುತ್ತಾಳೆ
ಬೆನ್ನ ಹಿಂದೆ ಅವಿತು ಕೇಳುವಾಸೆ
ಅವಳು ಕಣ್ಣರಳಿಸಿ ಮೌನ ತಾಳುತ್ತಾಳೆ
ಮುಂಗುರುಳಿಗೆ ಬೆರಳ ಚಾಚುವಾಸೆ

ಹಚ್ಚದೆ ಬೆಳಕಾಗಿ ಉಳಿದು ಬಿಟ್ಟಳು
ಬೆಚ್ಚದೆ ಭಯವನ್ನು ತುಂಬಿ ಹೊರಟಳು
ಪದವಿಲ್ಲದೆ ಪರದಾಡಿ ರಾತ್ರಿ ಕಳೆದ ಮೇಲೆ
ಮರುದಿನ ಮೊಗಸಾಲೆಯಲ್ಲಿ ಶರಣಾದಂತೆ ನಿಂತಳು 
ಅವಳ ನೆರಳೀಗ ನನ್ನ ನೆರಳಿಗೆ ಆಪ್ತ..

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...