Thursday, 2 July 2020

ಪ್ರೇಮ-ಕಾಮ

ಕಣ್ಣು ಮುಚ್ಚಿ ಒಪ್ಪಿಸು 
ಕೊನೆಯ ಕ್ಷಣಕೆ ತಪ್ಪಿಸು 
ಸಮಯ ಇನ್ನೂ ಮುಂದಿದೆ 
ಸರಿದು ಬಿಡಲಿ ಕಾಯಿಸು 
ಏಕೆ ಇಷ್ಟು ಆತುರ?
ತೊದಲುವಂತೆ ಅಧರವು 
ಅರ್ಧ ಹಸಿವು ನೀಗಿದ 
ದುಂಬಿ ಮಾತಿಗಿಳಿದವು 

ಕಡಿದ ಬೆಣ್ಣೆ ಗಡಿಗೆಯ 
ಬಿಟ್ಟು ಬರದ ಕೋಲಿದೆ
ಕುಚ್ಚು ಕಳಚಿಕೊಳ್ಳುತ
ನುಲಿಯುವಂಥ ನೂಲಿದೆ 
ಬೆಳ್ಳಿ ಕಪ್ಪಗಾಯಿತು 
ಬೆಣ್ಣೆ ತುಪ್ಪವಾಯಿತು 
ಸಂಜೆ ಹೊತ್ತು ಕಾಯದೆ 
ಮುಂಜಾವನು ಅಪ್ಪಿತು 

ಧೂಪ ದಾಟುವಂತೆಯೇ 
ಕಟ್ಟಿಕೊಂಡೆ ತುರುಬನು 
ನೆಟ್ಟು ನೋಡು ನೋಟವ 
ನಾನೂ ಕರಗ ಬಲ್ಲೆನು 
ಮೀಸೆ ಹೊತ್ತ ಮಾತ್ರಕೆ 
ನಾಚಬಾರದೇತಕೆ
ಈಗ ನೀನೇ ಗಂಡಸು 
ನಾನು ಹೆಣ್ಣ ಪಾತ್ರಕೆ 

ಬಾಗಿಲಿನ್ನೂ ಮುಚ್ಚಿದೆ 
ಪಾತ್ರದಲ್ಲಿ ತೊಡಗುವ 
ಸಂಭಾಷಣೆಯಿಲ್ಲದೆ 
ಮಂತ್ರಮುಗ್ಧರಾಗುವ 
ಎಷ್ಟು ಬಿಡಿಸಿಕೊಂಡರೂ 
ಇನ್ನೂ ಸಿಕ್ಕು ಪ್ರೇಮವು
ಉಸಿರಿನಷ್ಟೇ ಸುಲಭಕೆ 
ದಕ್ಕಿದಂತೆ ಕಾಮವು 

No comments:

Post a Comment

ಹೃದಯವ ನೀಡಲೇ

ಹೃದಯವ ನೀಡಲೇ ಹೇಳದ ಮಾತಿವೆ ನೂರಾರು ಆಲಿಸು ಈಗಲೇ ಪಾಲಿಸಿ ನಿನ್ನಯ ನೆರಳನು ಹೃದಯವ ನೀಡಲೇ ಹೊಂಗನಸ ಅಂಗಳದಿ ಅರಳಿರುವ ಚಂದಿರ ನೀ  ಯಾರಿರದ ತೀರದಲಿ ಅಲೆಗಳಲೂ ನಿನ್ನ ದನಿ  ...