ಅಮ್ಮ ನಿನ್ನ ಕಂದ ನಾನು
ಅಳುವ ಶಬ್ಧ ಕೇಳಿಸದೇ?
ನೀನೇ ಎಲ್ಲ ಅಂದುಕೊಂಡೆ
ಬೇರೆ ದಾರಿ ಕಾಣಿಸದೆ
ತಪ್ಪು, ಸರಿ ಕಲಿಸು ನೀನೇ
ಶ್ರದ್ಧೆಯಿಂದ ಕಲಿಯುವೆ
ಕಣ್ಣಾ ಮುಚ್ಚೆ ಆಟದಲ್ಲೂ
ಸೋತು ನಿನ್ನ ಗೆಲ್ಲಿವುವೆ
ಉಸಿರು ಕೊಟ್ಟ ದೇವತೆ ನೀನು
ನನ್ನನ್ನು ಒಂಟಿ ಮಾಡದಿರು
ಗೀಚಿದ ಹಣೆ ಬರಹವನ್ನೂ
ತಿದ್ದುವ ಹಾಗೆ ಶಕ್ತಿ ಕೊಡು
ಬಿನ್ನಹಗಳ ಪಟ್ಟಿ ಇಲ್ಲಿದೆ, ಒಮ್ಮೆ ಓದೆಯಾ
ಮುದ್ದಿಸುತ ನನ್ನ ಜೊತೆ ಮಾತನಾಡೆಯಾ?
*****************
ಮಳೆಯಂಬ ಹೆತ್ತ ತಾಯ ಉಸಿರು ನಿಲ್ಲುವ ವೇಳೆ
ಹನಿಯೀಗ ಭೂ ತಾಯಿಯ ಮಡಿಲಲ್ಲಿ
ದೇವಕಿಯ ಪ್ರೀತಿಯ ಸವಿದ ಕಂದಳಿಗೆ
ಯಶೋಧೆಯ ತೊಟ್ಟಿಲಲಿ ಜೋಗುಳದ ಲಾಲಿ
ಸಾಕು ಮಾಗಳಿಗೆ ಎರಡು ತಾಯಂದಿರು
ಮೋಡವೆಂಬ ತಾಯಿ ಹೆತ್ತು ಉಸಿರು ಬಿಟ್ಟಳು
ಹನಿಗಳೀಗ ಭೂಮಿ ತಾಯಿಯ ಮಡಿಲಲ್ಲಿ
ದೇವಕಿಯ ಪ್ರೀತಿಯ ಸವಿದ ಕಂದಮ್ಮಳಿಗೆ
ಯಶೋಧೆಯ ತೊಟ್ಟಿಲಲಿ ಜೋಗುಳದ ಲಾಲಿ
******************
ದೇವಕಿ, ಯಶೋಧ
ಇಬ್ಬರ ಪ್ರೀತಿಯ ಹಾಡು ಬಾಳು ಪೂರ್ಣವಾಲು
ಹುಟ್ಟಿರಲಿ, ತುತ್ತಿರಲಿ
ಹೆರುವ, ಉಣಿಸುವುದರಲ್ಲಿ ಅಮ್ಮಂದಿರ ಪಾಲು
ಹೆತ್ತು, ಹೊತ್ತು, ಉಣಿಸುವಲ್ಲಿ ಅಮ್ಮಂದಿರ ಪಾಲು
ಉಸಿರು ಸೋಕಿದಲ್ಲಿ ಅಳುವ ನಿಲ್ಲಿಸಿ ಮಗು
ನಿಂತ ಉಸಿರ ಪಾಪ ಪತ್ತೆ ಹಚ್ಚದಾಯಿತು
ಜೋಳಿಗೆಯಿಂದ ಮಡಿಲ ತುಂಬುವ ಗಳಿಗೆ
ಅಮ್ಮನ ಕೈಯ್ಯ ಬೆರಳ ನಿದ್ದೆಯಲ್ಲೂ ಹುಡುಕಿತು
ನಾಳೆಗಳ ನೇಯುವಲಿ
ಚಂದಗಾಣಿಸುವಲ್ಲಿ ಅಮ್ಮಂದಿರದೇ ಪಾಲು
****************************** ****************************** *******
ಎತ್ತಣ ಹೆರುವವಳೋ, ಎತ್ತಣ ಪೊರೆವವಳೋ
ಇಬ್ಬರಲ್ಲೂ ತಾಯಿ
ಒಬ್ಬಳಾದ ಮಾಯೆ ಕಂಡೆಯಾ
ಎತ್ತಣದ ಅಳುವೋ, ಎತ್ತಣದ ಹಸಿವೋ
ಎರಡೂ ಒಮ್ಮೆಲೆ ನೀಗುವ ಶಕ್ತಿ ಧಾಮ ವಿಸ್ಮಯ
ಸದಾ ತರುಣ ಮರಣ ಢಮರು, ನಾದ ಢಮ್ಮ ಢಕ್ಕದೆದುರು
ನಾನು ಎಂಬುದೆಷ್ಟು ಸಣ್ಣ ಅಣುವಿನಂತೆ ಅಲ್ಲವೇ
ಕಣ್ಣು ಬಿಟ್ಟ ಮಗುವಿಗಿಲ್ಲಿ ಕಂಡದ್ದೆಲ್ಲ ಹೊಚ್ಚ ಹೊಸತು
ಮುತ್ತು ಕೊಡಲು ಹೆತ್ತ ಕರುಳಿಗಿಲ್ಲದಾಯ್ತು ಪ್ರಾಣವೇ!
ದಿಕ್ಕು ದಿಕ್ಕಿನಲ್ಲೂ ತೆಕ್ಕೆಗಿಳಿಸಿಕೊಳ್ಳುವಂತೆ ಮುಗಿಲು
ಭೂಮಿಗಪ್ಪಳಿಸುತಿರಲು ಮಿಂಚು ಸಿಡಿಲ ಸಪ್ಪಳ
ನಿಂತ ಮಳೆಗೆ ಮರದ ಎಲೆಯು ಜಾರಿ ಬಿಟ್ಟ ಹನಿಗಳಿಂದ
ಇನ್ನೂ ಹೆಚ್ಚು ನೆನೆಯುವಂತೆ ಬಿರಿದ ನೆಲದ ಹಂಬಲ
ವಿಧಿಯ ಬರಹದಂತೆ ಎಲ್ಲ ನಮ್ಮದೇನೂ ಇಲ್ಲವಂತೆ
ಪಾತ್ರಧಾರಿಗಳಿಗೆ ಬೇರೆ ದಾರಿಯಿಲ್ಲ ನಟಿಸದೆ
ಮನುಜರಾಗಿ ಹುಟ್ಟಿ ಬಂದ ಎಲ್ಲರಿಗೂ ಹೆಚ್ಚು ಕಡಿಮೆ
ನಲಿವಿನಷ್ಟೇ ನೋವೂ ಕೂಡ ಬದುಕ ಪಾಠ ಕಳಿಸಿದೆ
*****
ತಲೆಯ ಎತ್ತಿ ನಡೆದರೆ, ಕಡಿಯುವವರ ಕೊಡಲಿಯು
ತಗ್ಗಿ ಬಗ್ಗಿ ಉಳಿದರೆ, ನೆರಳು ಸತ್ತ ವರದಿಯು
ಎದ್ದ ದನಿಯ ಹೊಸಕಿದೆ, ಘೋರವಾದ ಶಬ್ಧವು
ಗಾಯಕಿನ್ನೂ ತಟ್ಟಿದೆ ಕ್ರೂರವಾದ ಶಾಪವು
ದುಷ್ಟ ಶಕ್ತಿ ಮುಷ್ಠಿಗೆ, ಎಲ್ಲ ತ್ರಾಣ ಮೀಸಲು
ಯಾವ ದೇವರುಳಿದನೋ ಇನ್ನು ನ್ಯಾಯ ಕೇಳಲು
ತಲೆಗಳುರುಳಿ ಬಿದ್ದರೆ ಭೂಮಿ ಭಾರ ತಣಿವುದು
ಹತ್ತು ತಲೆಯ ರಾವಣಾಸುರರಿಗೂ ಕಾಲ ಬರುವುದು
ಬಿಸಿಯ ರಕ್ತ ಕೇಳಿತು, ಸಾಲು ಸಾಲು ಪ್ರಶ್ನೆಯ
ಸರಣಿ ಸೋಲು ಕಂಡರೂ, ಇನ್ನೂ ಮೂಡದೇ ಭಯ
ಕಡಿದ ತಲೆಯ ಕಣ್ಣಲೂ ಆರದಂಥ ಕಿಚ್ಚಿದೆ
ಯುದ್ಧ ಮಾಡಿ ಸತ್ತರೆ, ಸಾವೂ ಕೂಡ ಹೆದರಿದೆ
ಮೌನ ಉಳಿದ ಮಾತ್ರಕೆ ಎಲ್ಲ ಮುಗಿದ ಹಾಗೆಯೇ?
ಕಹಳೆ ಮೊಳಗೋ ವೇಳೆಗೆ ಹುದುಗಿ ಕೂತ ಜ್ವಾಲೆಯೇ
ನನ್ನ ನಿನ್ನ ಎದೆಯಲಿ ಸ್ಪೋಟಗೊಳ್ಳಬೇಕಿದೆ
ಅಸುರ ಅಟ್ಟಹಾಸಕೆ ಅಂತ್ಯ ಹಾಡಬೇಕಿದೆ...
***************
ಇನ್ನೂ ಬೆಳಕನು ಕಾಣದ ಚಿಗುರಿಗೆ
ಈ ಪರಿ ಶಿಕ್ಷೆಯ ವಿಧಿಸುವ ದೇವರೇ
ನಿನಗೆ ತಾಯಿಯ ಅಳುವಿನ ಕೂಗು
ಕೇಳಿಸಲಿಲ್ಲವೇ ಈ ವರೆಗೆ
ಇನ್ನೂ ಮಾತು ಕಲಿಯದ ನಾಲಿಗೆ
ನಿನ್ನಯ ಸ್ಮರಣೆಯ ಮಾಡುವ ಹಾಗಿದೆ
ಚುಚ್ಚುವ ಮುಳ್ಳೂ ಪಕ್ಕಕೆ ಸರಿದಿದೆ
ಎಚ್ಚರವಾಗುವುದೇ ನಿನಗೆ
ಒಂದೇ ಬೇರಿನ ಎರಡು ಜೇವ
ನುಂಗುವುದೆಂತು ಈ ಪರಿ ನೋವ
ಎಲ್ಲಕ್ಕೂ ಕೊನೆಯ ಇಟ್ಟಿರುವಂತೆ
ಕಣ್ಣೀರನ್ನೂ ಒರೆಸಲು ಬಾ
ಜೀವವ ಸೃಷ್ಟಿಸುವ ನಿನಗಷ್ಟೇ
ಜೀವವ ಹೊತ್ತ
******************
ಭೂಮಿಯ ಸಹನೆಯನ್ನು ಕಣ್ಣಿನಲ್ಲಿ ಹೊತ್ತಳು
ಅರಳಿದ ಹೂವ ಗರ್ಭಗುಡಿಯಲ್ಲಿರಿಸಿಕೊಂಡಳು
ಆನೆಯ ಹೆಜ್ಜೆ ತೂಕ ಗಾಂಭೀರ್ಯ ನಡೆಯಲು
ಗೆಜ್ಜೆಯ ಸದ್ದಿಗೊಂದು ಭಿನ್ನ ತಾಳ ಕೊಟ್ಟಳು
ದಾರಿ ಮುಳ್ಳು ಕೂಡ ಕೈಯ್ಯ ಮುಗಿದು ಸರಿವ ಹೊತ್ತು
ಸೆರಗ ಅಂಚಿನಲ್ಲಿ ಗಂಟಿನಂತೆ ಚೆಲುವ ಗುಟ್ಟು
ನಾಟ್ಯವೇ ನಾಚುವಂತೆ ಕುಣಿವ ಹೆಣ್ಣು ನವಿಲೀಕೆ
ಸೀಮಂತ ಮಾಡಿ ತೀರಲಿ ಬಸುರಿ ಬಯಕೆ
ನಾದಸ್ವರ ಕರೆಸಿ, ಸೋಬಾನೆ ಪದವ ಬೆರೆಸಿ
ಹಸಿರ ಬಳೆಗಳ ತೊಡಿಸಿ, ಕಾಡು ಮಲ್ಲೆ ಹೂವ ಮುಡಿಸಿ
ಚೌಡಿಕೆ ಮೀಟುತ ಹಾಡಿ, ಹುಳಿ ಮಾವು ಬುಟ್ಟಿ ಜೋಡಿ
ಗಂಧವ ನುಣ್ಣಗೆ ತೀಡಿ, ದೇವಿಯ ಕೆನ್ನೆಗೆ ನೀಡಿ
ಊರೆಲ್ಲ ಡೊಳ್ಳು ಕುಣಿತ, ಕಂಸಾಳೆ ಕಂಚು ಸದ್ದು
ಕೋಲಾಟ ಆಡಿ ಬಂದ ಭಗವಂತ ತಾನೇ ಖುದ್ದು
ಕಪ್ಪು ಮಸಿಯ ಚಿಕ್ಕಿ ಇಡಿ ದೃಷ್ಟಿ ತಾಗದಿರಲಿ
ದೇವರೇ ಹೆತ್ತ ಮಗಳ ಹೆರಿಗೆ ಭಾಗ್ಯ ತರಲಿ
ಊರಿಗೆ ಹಬ್ಬದ ಕಳೆಯ ಸಡಗರ ತಂದ ಹೊತ್ತಲ್ಲಿ
ಎಲ್ಲೆಲ್ಲೂ ಓಕುಳಿ ಚೆಲ್ಲಿ ಮಣ್ಣೇ ಹೆಣೆದ ರಂಗೋಲಿ
************************
ಜನ್ಮವಿತ್ತ ತಾಯೇ ಇಷ್ಟು ಬೇಗ ಉಸಿರು ಬಿಟ್ಟೆಯಾ
ನಿನ್ನ ಕರುಳ ಕುಡಿಯ ಎತ್ತಿ ಮುದ್ದಾಡಲು ಸೋತೆಯಾ
ದಟ್ಟ ಕಾಡಿಯಲ್ಲಿ ನಿನ್ನ ಪುಟ್ಟ ಅಳುವ ಗೊಂಬೆಗೆ
ಹಸಿವು ನೀಗಬೇಕು ಒಮ್ಮೆ ಎದೆಗೆ ಅಪ್ಪು ಮೆಲ್ಲಗೆ
*************************
ಅಮ್ಮ
ಜನ್ಮ ಕೊಟ್ಟ ತಾಯೇ ಇಷ್ಟು ಬೇಗ ಉಸಿರು ಬಿಟ್ಟೆಯಾ
ನಿನ್ನ ಕರುಳ ಬಳ್ಳಿಯನ್ನು ದೂರ ಮಾಡಲು ಹೊರಟೆಯಾ
*************
ಜನ್ಮ ಕೊಟ್ಟ ತಾಯೇ ನಿನ್ನ ಗುಮ್ಮಾ ಹೊತ್ತು ಹೋದನೆ?
ನಿನ್ನ ಕರುಳ ಬಳ್ಳಿಯಿಂದ ದೂರಮಾಡಿ ಬಿಟ್ಟನೇ?
ದಟ್ಟ ಕಾಡಿನಲ್ಲಿ ನಿನ್ನ ಪುಟ್ಟ ಅಳುವ ಕಂದ
ದಿಕ್ಕು ತೋಚುತಿಲ್ಲ ಈಗ ತೆರೆದ ಕಣ್ಣಿನಿಂದ
ಹಸಿವು ನೀಗಬೇಕು ಒಮ್ಮೆ ಹಾಲ ಉಣಿಸಿ ಹೋಗು
ಉಸಿರು ಕೊಟ್ಟ ಹಾಗೆ ಒಂದು ಹೆಸರ ಇಟ್ಟು ಕೂಗು...
ಗರ್ಭ ತಾಳಿ ನನ್ನ ಹೊತ್ತೆ ಜೋಪಾನವಾಗಿ
ಪ್ರಸವ ಬೇನೆ ಕೊಟ್ಟು ಈಗ ಒಂಟಿಯಾದೆ ನಾನು
ಬೆರಳ ಚಾಚಿದಾಗ ಯಾರೂ ಹಿಡಿಯಲಿಲ್ಲವಾಗಿ
ಬೆಚ್ಚಿ ಬೀಳುವಾಗ ನಿನಗೂ ದುಃಖವಾಯಿತೇನು
ಮೆತ್ತಿದ ಕಂಬನಿ ಒರೆಸು ಬಾ
ಮುತ್ತನು ನೀಡುತ ಅರಸು ಬಾ
ಒಮ್ಮೆ ನಿನ್ನ ಮಡಿಲಲ್ಲಿ, ಇರಿಸಿ ಲಾಲಿ ಹಾಡು ಬಾ....
****************************** ****************************** ********
ಲಾಲಿ ಜೋ, ಜೋ ಲಾಲಿ
ಲಾಲಿ ಜೋ, ಜೋ ಲಾಲಿ
ಹುಟ್ಟಿದ ಕೂಸು ಕಣ್ಣೇ ಬಿಟ್ಟಿಲ್ಲ
ಅತ್ತು ಕರೆದದ್ದು ನಿನ್ನ ಮುಟ್ಟಿಲ್ಲ
ಬತ್ತಿದ ಎದೆಯ ಹಾಲು ದಕ್ಕಿಲ್ಲ
ಹಸಿವನ್ನೋದನ್ನ ಕಲಿಸೇ ಬಿಟ್ಟಲ್ಲ
ಬೆತ್ತಲ ಮುಚ್ಚೋಕೆ ಯಾರೂ ದಿಕ್ಕಿಲ್ಲ
ಕತ್ತಲೇ ನಿನ್ನ ಸುತ್ತಿಕೊಂತಲ್ಲ ....
ಲಾಲಿ ಜೋ, ಜೋ ಲಾಲಿ
ಲಾಲಿ ಜೋ, ಜೋ ಲಾಲಿ
ಜೋಳಿಗೆ ಕಟ್ಟಿ ತೂಗೋರು ಇಲ್ಲ
ಏಳಿಗೆಗಾಗಿ ಹರಸೋರೂ ಇಲ್ಲ
ಕೆನ್ನೆಯ ಸವರಿ ಮುತ್ತಿಟ್ಟೋರಿಲ್ಲ
ತಾಯಿನೇ ಬಿಟ್ಟು ಹೊಂಟೇ ಬಿಟ್ಳಲ್ಲ
ನಿನ್ನೋರು ಅಂತ ನಿಂಗ್ಯಾರೂ ಇಲ್ಲಿಲ್ಲ
ದೇವರು ಕೂಡ ಕುರುಡಾದನಲ್ಲ....
ಲಾಲಿ ಜೋ, ಜೋ ಲಾಲಿ
ಲಾಲಿ ಜೋ, ಜೋ ಲಾಲಿ
ಇಲ್ಲಿ ಸಾಕು ತಾಯಿ ಹೆತ್ತ ತಾಯಿಗೂ ಮಿಗಿಲಾದಳು
ಸತ್ತು ಸ್ವರ್ಗ ಸೇರಿ ಅಮ್ಮ ಮೇಲೆಲ್ಲೋ ನಗುತಿರುವಳು
ಒಳ್ಳೆ ಗೊಂಬೆಯಂತೆ ಮುದ್ದು ಮುದ್ದಾಗಿ ಈ ಕಂದನು
ಚಂದ ತುಂಟಾಟವಾಡುತ್ತ ಮನೆಯನ್ನೇ ಬೆಳಗಿಹಳು
ಪ್ರೀತಿ ಮಮತೆಯ ಧಾರೆಯ ಎರೆದಾಕೆ ತಾಯಲ್ಲವೇ
ತಾಯಿ ಮಗುವಿನ ನಡುವಿನ ಮಾತೆಲ್ಲ ಜೋಗುಳವೇ.......
ಲಾಲಿ ಜೋ, ಜೋ ಲಾಲಿ
ಲಾಲಿ ಜೋ, ಜೋ ಲಾಲಿ
No comments:
Post a Comment