ಎಲ್ಲವನ್ನೂ ಪ್ರಶ್ನಿಸುವ ಕವಿತೆಯೊಂದ ಬರೆಯಬೇಕು
ಕವಿತೆಯನ್ನೂ ರಕ್ಷಿಸುವ ಕವಿತೆಯೊಂದ ಬರೆಯಬೇಕು
ದಕ್ಕುವುದು ಮೂರು ಮತ್ತೊಂದು ಪದವೇ ಆದರೂ
ಮನದ ಮಾತ ಪೋಷಿಸುವ ಕವಿತೆಯೊಂದ ಬರೆಯಬೇಕು
ಅಕ್ಷರಗಳು ಬೇಡವಾಗಿ ರದ್ದಿಯಾದ ಹೊತ್ತಿನಲ್ಲಿ
ಕುಲುಮೆಯನ್ನೂ ಹೊತ್ತಿಸುವ ಕವಿತೆಯೊಂದ ಬರೆಯಬೇಕು
ಮುನಿದು ಮಾತು ಬಿಟ್ಟ ಮಗುವ ಮಡಿಲಿಗೆರಗಿಸಿಕೊಂಡು
ನಿದ್ದೆಯುಣಿಸಿ ಮುದ್ದಿಸುವ ಕವಿತೆಯೊಂದ ಬರೆಯಬೇಕು
ಏನೂ ತೋಚದೆ ಖಾಲಿತನವೊಂದೇ ಜೊತೆಗಿರಲು
ಎಲ್ಲವನ್ನೂ ಪ್ರೀತಿಸುವ ಕವಿತೆಯೊಂದ ಬರೆಯಬೇಕು
ನೆಚ್ಚಿ ಕದ್ದ ಸಾಲು ಎರಡು, ಅಲ್ಲಿ ಇಲ್ಲಿ ತಿರುಚಿ ಚೂರು
ಮೂಲ ಕವಿಯ ನಾಚಿಸುವ ಕವಿತೆಯೊಂದ ಬರೆಯಬೇಕು
ಯಾರೇ ಓದಿದರೂ, ಯಾರೂ ಓದದೆ ಹೋದರೂ
ಭವದ ಹಸಿವ ದಾಟಿಸುವ ಕವಿತೆಯೊಂದ ಬರೆಯಬೇಕು..
No comments:
Post a Comment