Thursday 16 July 2020

ಮೋಸಗಾರರ ಸುತ್ತ

ಹೋಮ ಕುಂಡಕೆ ಗಂಧ ಗಡ್ಡಿ ಕರ್ಪೂರವನು
ಸುರಿದು ಕೈ ಮುಗಿದಾಗ ಪಾಪ ಕಳೆಯುವುದೇ?
ಸುಳ್ಳಾಡಿ ನಾಲಿಗೆಯ ಎಳೆದು ದೇವ ಸ್ತುತಿ-
-ಗೈದರೆ ಸುಳ್ಳೆಲ್ಲ ನಿಜವಾಗಿಬಿಡುವುದೇ?

ಅನ್ಯಾಯವ ಪ್ರಶ್ನೆ ಮಾಡುವವರು
ನ್ಯಾಯ ತಮಗಷ್ಟೇ ಅನ್ವಯಿಸುವುದು ಎನ್ನುತಿಹರು
ಮಾಡಿದ್ದ ಉಣ್ಣುವರು, ತೋಡಿಟ್ಟು ಬೀಳುವರು
ಎಂಬ ನಿಜವ ಏಕೋ ಮರೆತುಬಿಟ್ಟಿಹರು

ತೆರೆಮರೆಯ ಆಟದಲಿ ಪ್ರಾವಿಣ್ಯ ಹೊಂದುತಲಿ
ಎದುರಲ್ಲಿ ಬಣ್ಣ ಬಣ್ಣದ ವೇಷ ತೊಟ್ಟರು
ಬೀಸೋ ದೊಣ್ಣೆಯ ಹೇಗೋ ತಪ್ಪಿಸಿಕೊಂಡವರು
ಮಾತು ತಪ್ಪಲು ಸಮಜಾಯಿಷಿ ಕೊಟ್ಟರು

ಆಚೆ ಹುಲ್ಲಿಗೆ ಬೆಂಕಿ ಬಿದ್ದಾಗ ಹೊಯ್ಯದೆ
ಉಚ್ಚೆಯನೂ ತಮ್ಮಲ್ಲೇ ಉಳಿಸಿಕೊಳ್ಳುವರು
ತಮ್ಮ ಬುಡಕೆ ಬಂತೋ, ಎದ್ದು ಬಿದ್ದು ಪಾಪ
ಉರಿಯ ತಾಳದೆ ಹೇಗೆ ಅರಚಾಡುತಿಹರು!

ನಂಬಿಕೆಯ ಮಾರಿಕೊಂಡವರಲ್ಲದೆ ಮತ್ತೆ
ನಂಬಿದವರೇ ಮೂರ್ಖರೆಂದು ಹೆಸರಿಟ್ಟರು
ಕೇಳದವರಾರಿಲ್ಲವಾಗಿ ಮೋಸದ ಕುರಿತು
ಯಾರಿಗೂ ತಿಳಿದಿಲ್ಲವೆಂದು ಭ್ರಮಿಸಿಹರು

ದಾಳಿಕೋರರು ತಾವು ದಾಳಿಗೊಳಗಾಗದಿರೆ
ಕದ್ದ ಕೋಟೆಯ ಸುತ್ತ ಬೇಲಿ ನೆಟ್ಟಿಹರು
ಬರಿಗಳ್ಳತನದಲ್ಲಿ ಗಳಿಸಿದ ಸ್ವತ್ತನ್ನು
ಕಾಪಾಡಿಕೊಳ್ಳಲು ಹೆಣಗಾಡುತಿಹರು

ಕೊನೆಗೊಮ್ಮೆ ಸೋತರೂ, ಸೋಲ ಕಹಿ ಕಿರಿದು
ಕೊಬ್ಬಿ ಗಳಿಸಿದ ಗಬ್ಬು ಸಿಹಿಯ ಎದುರು
ಕಹಿಯಾದರೂ ಪಾಠ ಕಲಿಸಲಿಲ್ಲ ಅದಕೇ
ಸಿಹಿಯ ಸುತ್ತ ಇರುವೆ ಹುತ್ತ ನೂರಾರು!

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...