ಎಲ್ಲ ಅರಿತವರೆದುರು ಏನೂ ಅರಿಯದವ
ಕೂಡಿ ಬೆರೆತವರೊಳಗೆ ದೂರವೇ ಉಳಿದವ
ಯಾರೂ ಕೂಗದ ಹೆಸರ ತನಗಿಟ್ಟುಕೊಂಡವ
ಯಾವ ಸಂತೆಯ ಗದ್ದಲವನೂ ಲೆಕ್ಕಿಸದವ
ಯಾವ ರಂಗಿಗೂ ತಾನು ಅಂಟಿಕೊಳ್ಳಲೊಲ್ಲದವ
ಮೌನವೂ ಸಂಗೀತವೆಂದು ತಲೆದೂಗಿದವ
ಅವರಿವರ ಮಾತಿಗೆ ಕಿವಿಗೊಡದ ಇವ
ತನ್ನ ತಾನರಿಯದವನೆಂದು ತಾನೇ ಹೇಳುವವ
ಭವ-ಬಂಧನದ ಎಲ್ಲ ಭಾವ ಅಭಾವ
ಪರಿಣಮಿಸದಂತುಳಿವುದಿವನ ಸ್ವಭಾವ
ಹಗ್ಗಕ್ಕೂ ಹಾವಿಗೂ ಗಂಟು ಬೆಸೆಯುವವ
ಮೋಹಕ್ಕೂ ಮುಕ್ತಿಗೂ ಅಂತರ ತಿಳಿದವ
ಎಲ್ಲ ಅಂಕಿಯ ದಾಟಿ ಶೂನ್ಯ ಹುಡುಕಿದವ
ಎಲ್ಲ ಅಂಕೆಯ ಮೀರಿ ತಳದಲ್ಲೇ ಉಳಿದವ
ಸ್ಥಿತಿಯಲ್ಲೂ ಇವನ ಕಣ್ಣಿಗೆ ಎಲ್ಲ ಉತ್ಸವ
ಮೆರೆಸುವವರೊಳಗೆ ನೆಲೆಸುವುದು ಅಸಂಭವ
No comments:
Post a Comment