Friday, 22 January 2021

ಆಸೆ ತಿಳಿಸುವುದು ಹೇಗೆ?

ಆಸೆ ತಿಳಿಸುವುದು ಹೇಗೆ

ಮೀಸೆ ತಿರುವಿದರೆ ಹಾಗೆ
ಎದೆ ಸಾಗರದೊಳ ಮುಳುಗುವ ನಿನ್ನ
ಕಾಪಾಡುವ ಭರದಲ್ಲಿ
ನಾ ಮುಳುಗಿಯೇ ಹೆಚ್ಚು ಆನಂದಿಸುವೆ
ನಿನ್ನ ಜೊತೆಯಲ್ಲಿ

ಬೆನ್ನಿಗೆ ಬೆನ್ನು ನೀಡುವ
ಒಂದು ಸಂಜೆ ಜಾರಿ ಹೋಗಲಿ
ಎದುರಾಗಲು ಕಣ್ಣು ತವಕಿಸಿದರೆ
ಹಿಡಿ ಕನ್ನಡಿ‌ ಕೈಯ್ಯಲ್ಲಿ
ನಿನ್ನ ಕಣ್ಣಲಿ ನಾನು ಕಾಣುವೆ
ಮತ್ತೆ ನನ್ನಲಿ ನೀನು
ನೀಲಿ ಎಲ್ಲೋ ಕಳುವಾದಂತಿದೆ
ಬಣ್ಣ ಬಳಿದ ಬಾನು
ಬದುಕಲಿ ಎಲ್ಲ‌ ಚನ್ನಾಗಿತ್ತು
ನೀ ಒಳ ಬರುವ ತನಕ
ಬಹುಶಃ ನೀನೇ ಶಾಶ್ವತ ಮನಕೆ
ಬೇರೆ ಎಲ್ಲವೂ ಕ್ಷಣಿಕ

ಕಣದಲಿ ರಾಗಿಯ ರಾಶಿಯ ಹಾಗೆ
ಮೆರುಗಿದೆ ನಿನ್ನಲ್ಲಿ
ಯುಗಗಳೇ ಸವೆದರೂ ಸವೆಯದ ಹಸಿವು
ಅಡಗಿದೆ ನನ್ನಲ್ಲಿ
ಅಚ್ಚರಿಗಳ ‌ಬೆಲ್ಲದ ಅಚ್ಚನು
ತಂದಿರುವೆ ಏನಂತಿ?
ಜೊತೆಗೆ ಮೆಲ್ಲುಲಿಯ ಎಳ್ಳಿದ್ದರೆ
ಅದುವೇ ಸಂಕ್ರಾಂತಿ
ತೋರಣವಾಗಿಸು ನವ ಸಂವತ್ಸರ
ಹಬ್ಬವೇ ಎಂಬಂತೆ
ಅಂತರವ ಕಳೆಯಲಿ‌‌ ಇಡುವೆಜ್ಜೆ
ಹತ್ತಿರವಾದಂತೆ...

No comments:

Post a Comment

ಹೃದಯವ ನೀಡಲೇ

ಹೃದಯವ ನೀಡಲೇ ಹೇಳದ ಮಾತಿವೆ ನೂರಾರು ಆಲಿಸು ಈಗಲೇ ಪಾಲಿಸಿ ನಿನ್ನಯ ನೆರಳನು ಹೃದಯವ ನೀಡಲೇ ಹೊಂಗನಸ ಅಂಗಳದಿ ಅರಳಿರುವ ಚಂದಿರ ನೀ  ಯಾರಿರದ ತೀರದಲಿ ಅಲೆಗಳಲೂ ನಿನ್ನ ದನಿ  ...