ಬೆಳಕ ಹಿಡಿಯುವ ಆಟವಾಡೋಣಾ?
ಅದು ಇದ್ದ ಬೆಳಕಿಗಿಂತಲೂ ಪ್ರಕಾಶಮಾನವಾಗಿ
ಸೀಮೆಗಳ ದಾಟಿ ನಮ್ಮ ಗೋಡೆಗಂಟಿದೆ
ಹಿಡಿಯೆ ಹೊರಟರೆ ಇದ್ದಲ್ಲಿಂದ ಕಾಲ್ಕಿತ್ತು
ಪಕ್ಕದ ಗೋಡೆಗೆ ಜಿಗಿದು
ಮತ್ತಿನ್ನಾರನ್ನೋ ಆಟಕ್ಕೆ ಸೆಳೆವಂತೆ..
ಬೆಳಕ ಮೂಲ ಯಾರು ಅರಿತವರು?
ಎಲ್ಲರೂ ತನ್ನ ಅಲ್ಪಾಯುಷ್ಯದ ಸೊಬಗ ಸವಿದವರೇ
ಬೇಕೆಂದಲ್ಲಿ ಹರಿಸಿ, ಬೇಡವಾದಾಗ ಬಡವಾಗಿಸಿ..
ಗಾಜಿನ ತಿರುವಲಿ ಬಣ್ಣಗಳು ಬಯಲಾಗಿ
ತಣ್ಣಗೆ ಒಡ್ಡಿಕೊಂಡ ಮೈಗೆ ಮೈ ಊರಿ
ಇನ್ನೆಲ್ಲೋ
ತೀಕ್ಷ್ಣವಾಗಿ, ಕಿಡಿಯಾಗಿ ಸುಡಬಲ್ಲ ಪ್ರಾಬಲ್ಯ
ಒಂದೇ ನಾಣ್ಯದ ಎರಡು ಮುಖ
ನೋಡು, ಆಟವಾಡುವುದ ಮರೆತು
ಪ್ರಯೋಗಕ್ಕೆ ಇಳಿದಿದ್ದೇವೆ
ಹಿಂದೆ ಹೀಗೇ ಬಹಳಷ್ಟು ಮಂದಿ
ಆಟದಲ್ಲಿ ಮೊದಲಾಗಿ, ಚಟಕ್ಕೆ ಬಿದ್ದು
ಅಜ್ಞಾನಿಗಳೋ, ವಿಜ್ಞಾನಿಗಳೋ ಆಗಿದ್ದಾರಂತೆ
ಅವರ ಆತ್ಮ ತಣ್ಣಗಿರಲಿ!
ಇಗೋ ಪೀಠಿಕೆ ಇನ್ನೂ ಮುಗಿದಿಲ್ಲ
ಆಗಲೇ ಇರುಳು ಬಾಗಿಲಲ್ಲಿ ನಿಂತಿದೆ
ಒಂದು, ಒಳಗೆ ಬರಮಾಡಿಕೊಂಡು ಸುಪ್ತವಾಗೋಣ
ಅಥವ ಜ್ಯೋತಿ ಬೆಳಗಿಸಿ ಆಟ ಮುಂದುವರಿಸೋಣ...
No comments:
Post a Comment