Thursday, 14 January 2021

ಹಿಮ ಸುರಿದು ಸಮವಾಗಿ, ನೆಲದೊಡಲ ಸುಮವಾಗಿ















ಹಿಮ ಸುರಿದು ಸಮವಾಗಿ, ನೆಲದೊಡಲ ಸುಮವಾಗಿ

ಬಾನು-ಭುವಿ ಒಂದಾಗುವ ಸಮಯದಲ್ಲಿ 
ಹಸಿರು ತಣ್ಣಗೆ ಕೆಳಗೆ, ಬೆಟ್ಟ ಕಂಪಿಸಿ ಚಳಿಗೆ 
ದಾರಿ ಕಣ್ಮುಚ್ಚಿರಲು ಪಯಣವೆಲ್ಲಿ?!

ಉರುಳು ಕಾಣದ ಹನಿಯು, ಕೊರಳ ಮಾಲೆಯ ಮುತ್ತು 
ಬಿಳಿಯ ಹೊದಿಕೆಯ ಒಳಗೆ ಅಡಗಿ ಮೊಗವು 
ಮನೆ ಮನೆಗೂ ಪಟ್ಟಾಭಿಶೇಕ ನೆರವೇರಿದೆ 
ಬೆಳ್ಳಿ ಕಿರೀಟ ಹೊತ್ತವೇ ಎಲ್ಲವೂ 

ಇಟ್ಟ ಹೆಜ್ಜೆಯನೊಂದು ನೆನಪಾಗಿ ಇರಿಸುತ್ತ -
- ಕೆಲಕಾಲ ಮತ್ತದೇ ಹಾಲ್ನೊರೆಯ ಪದರ 
ಕಡೆಗಣನೆಗೊಳಗಾದವೆಲ್ಲವನೂ ಆವರಿಸಿ 
ಅವುಗಳೊಡನೆಯೇ ಮತ್ತೆ ನಡೆಸಿ ಸಮರ 

ಉದುರಿದಂತೆ ಪಾರಿಜಾತ ದಳಗಳು 
ಅಂಟಿದಂತೆ ಕಿಟಕಿ ಗಾಜಿಗೆ ಕೆಲವು 
ಕುಪ್ಪೆ ಕುಪ್ಪೆ ಮಾಡಿ ಬೊಗಸೆಯಲ್ಲಿಟ್ಟರೆ 
ಮಲಗಿದಂತೆ ಅಲ್ಲಿ ಪುಟ್ಟ ಮೊಲವು 

ಹೀಗೂ ಆಕಾರ ಬದಲಿಸಿ ಮಳೆ ತನ್ನ
ನೆಚ್ಚಿನ ಶಿಲೆ ಮುಡಿಗೆ ಆಯಿತು ಸಿಂಗಾರ 
ಮೊಲ್ಲೆ ದಿಂಡನ್ನು ಹೊಸೆದು ನಲ್ಲೆಗಾಗಿ ಕಾದ 
ಪ್ರಿಯತಮನ ಬೆರಳಿಗೆ ಬಿಳಿ ಹೊನ್ನ ಉಂಗುರ 

ಜೋಮು ಹಿಡಿದ ಮನಸು ಕಾವನು ಬಯಸಿ 
ಕಾಮದಗ್ನಿಯ ಚಿತೆಯ ಹೆಣವಾಗುವ ತುಡಿತ 
ಮದಿರೆ ಹೀರಿದ ತುಟಿಗಳೊಂದಾಗುವ ವೇಳೆ 
ಹೃದಯದಾಳದಿ ಪಾರಮ್ಯ ಮೊರೆತ

ಬಿಸಿಲು ಬಂತೋ ಕರಗಿ ತೊರೆ-ತೊರೆಗಳಾಗಿ 
ಹರಿಯಿತು ನಿರಾಕಾರದ ಆಕಾರಕೆ 
ಅಲ್ಲಲ್ಲಿ ಉಳಿದವು ತಮ್ಮೊಳಗೆ ತಮ್ಮನ್ನು 
ಕೂಡಿಕೊಂಡವು ಪ್ರಕೃತಿಯ ಸಾಕಾರಕೆ.... 

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...