Tuesday, 16 February 2021

ಚಂದಿರನೇ... ಚಂದಿರನೇ...

ಚಂದಿರನೇ ಚಂದಿರನೇ

ಗೆರೆ ದಾಟಿ ಬರುತೀಯಾ?
ಜೊತೆಯಾಗಿ ಆಡೋ ಆಸೆ 
ಗುಟ್ಟು ಮಾಡುತ್ತಲೇ 
ಯಾರಿಗೂ ಕಾಣದೇ  
ನಿನ್ನ ಬೀಳ್ಗೊಡುವೆ ಆಕಾಶಕೆ 

ಇದು ಇರುಳಲ್ಲ, ಬರಿ ಬೆಳಕಲ್ಲ
ತೆಳು ಹೊಂಬಣ್ಣ ರೇಷಿಮೆ ಸೆಲೆಯಂತೆ (೨)
ಮಿರು ಮಿಂಚಲ್ಲಿ, ಸಿಹಿ ಸಂಚಲ್ಲಿ
ಒಳ ಸಂಚಾರ‌ ಮಾಡುತ್ತ ಮಿಂದಂತೆ
ಹೆಣ್ಣೇ, ಹೆಣ್ಣೇ
ಹಿಂದೆಲ್ಲ ಪ್ರೀತೀಲಿ ನನ್ನ ಅಂಕಿ ಸೊನ್ನೆ
ಕಣ್ಣಲ್ಲಿ ಕಣ್ಣಿಟ್ಟು‌ ಗಳಿಸಿಕೊಟ್ಟೆ  ಚನ್ನೆ
ನೀನಾಡೋ‌ ಮಾತು‌ ಆಲಿಸಲು 
ಜೇನನ್ನು ಸವಿದಂತೆ...

ಚಂದಿರನೇ ಚಂದಿರನೇ
ಗೆರೆ ದಾಟಿ ಬರುತೀಯಾ
ಜೊತೆಯಾಗಿ ಆಡೋ ಆಸೆ

ಸದ್ದೇನೂ ಇರದಂತ ಸಂತೆ ಬೀದಿಯ ನಡುವೆ
ಗೆಜ್ಜೆಯ ಕಟ್ಟುವ ಹುಚ್ಚು ಮೋಹಿತ ನೀನಾ?
ಅದು ನಾನೇ ಎಂದು ತಿಳಿಸಲು ಬಯಸುವೆ
ಸದ್ದೇನೂ ಇರದಂತ ಸಂತೆ ಬೀದಿಯ ನಡುವೆ
ಹೆಣ್ಣೇ, ಹೆಣ್ಣೇ
ಹೆಣ್ಣಿನ ಗುಣಗಾನ ಮಾಡೋ ಕಾವ್ಯಗಳಲ್ಲಿ
ಸೋಲನ್ನೂ ಸಮವಾಗಿ ಮೆಚ್ಚಿ ಬರೆವರು ಎಲ್ಲ
ಸೋತಲ್ಲೇ ಗೆಲುವ ಕಾಣುವ ಕಣ್ಣು ಪ್ರೀತೀಗೆ ಇದೆಯಂತೆ...

ಚಂದಿರನೇ ಚಂದಿರನೇ
ಗೆರೆ ದಾಟಿ ಬರುತೀಯಾ
ಜೊತೆಯಾಗಿ ಆಡೋ ಆಸೆ 
ಗುಟ್ಟು ಮಾಡುತ್ತಲೇ 
ಯಾರಿಗೂ ಕಾಣದೇ  
ನಿನ್ನ ಬೀಳ್ಗೊಡುವೆ ಆಕಾಶಕೆ 

ಇದ್ದಂತೆ ಇದ್ದೆ ನಾನು ನೆನ್ನೆ ವರೆಗೆ

ಇದ್ದಂತೆ ಇದ್ದೆ ನಾನು ನೆನ್ನೆ ವರೆಗೆ

ಇದ್ದಕ್ಕಿದ್ದಂತೆ ಬಿದ್ದೆ ನಿನ್ನ ಬಲೆಗೆ
ಇಲ್ಲಿಂದ ಮುಂದೆ ಹೇಗೋ ಏನೂ ತೋಚದಾಗಿದೆ
ನಿನ್ನನ್ನು ಸೇರಿ ಈಗ ದಾರಿ ಕಾಣಬೇಕಿದೆ
ಆಸೆ ಪಟ್ಟ ಗೊಂಬೆ‌ ಸಿಕ್ಕಿ ಅಳುವ ಕಂದ ನಕ್ಕ ಹಾಗೆ
ನಿನ್ನ ಕಂಡ ಮೇಲೆ ಜೇವ ಉಕ್ಕಿ ಬಂದಿದೆ
ಅನಿಸಿದ್ದ ಹೇಳುವೆ ನಾನು ಗುಟ್ಟು ಮಾಡದೇನೆ
ಆಲಿಸು ಬೇಗನೆ..
ಸಿಗುವೆಯಾ, ಸಿಗುವೆಯಾ, ಸಿಗುವೆಯಾ, ಒಂದಿಷ್ಟು ಮಾತನಾಡೋಣ
ಸಿಗುವೆಯಾ, ಸಿಗುವೆಯಾ, ಸಿಗುವೆಯಾ, ಒಂದೊಂದೇ ಆಸೆ ಹೇಳಬೇಕಿದೆ...

ಕದವನ್ನು ನೂಕಿ ಎದೆಯಲ್ಲಿ ಕುಳಿತವಳೇ
ಒಲವೆಂಬ ಪಾಠವ ಮಾಡೆಯಾ 
ಮೊದಲಾದ ಭಾವ ವಿಪರೀತ ಆಗುತಲೇ
ನಿನಗೊಂದು ಪಾಲನು ಕೇಳೆಯಾ
ಕೊಂಚ ದೂರವಾದರೂ ಭಾರವಾದ ನೋವಲಿ
ಗೀಚಿಕೊಂಡ ಸಾಲನೆಲ್ಲ ಓದಲೆಂದು ಕಾಯುವೆನು
ಇಷ್ಟವಾದ ರಂಗನು ತೊಟ್ಟು ನಿಂತ ಬಾನನು 
ನಿನ್ನ ಕೆನ್ನೆಗೋಲಿಸುತ್ತ ನಾಚುವಂತೆ ಮಾಡುವೆ

ಸಿಗುವೆಯಾ, ಸಿಗುವೆಯಾ, ಸಿಗುವೆಯಾ, ಒಂದಿಷ್ಟು ಮಾತನಾಡೋಣ
ಸಿಗುವೆಯಾ, ಸಿಗುವೆಯಾ, ಸಿಗುವೆಯಾ, ಒಂದೊಂದೇ ಆಸೆ ಹೇಳಬೇಕಿದೆ...

ನೆನಪಾದಾಗ ಹುಡುಕಾಡುವೆ ನಿನ್ನ

ನೆನಪಾದಾಗ ಹುಡುಕಾಡುವೆ ನಿನ್ನ

ನನ್ನ ಕಣ್ಣಿನ ಬಿಂಬದಲಿ (೨)
ಬಿಡುವಾದಾಗ ಹೊಸೆದ ಹಾಡು
ಕೇವಲ ನಿನ್ನ ಗುಂಗಿನಲಿ
ನೆನಪಾದಾಗ ಹುಡುಕಾಡುವೆ ನಿನ್ನ
ನನ್ನ ಕಣ್ಣಿನ ಬಿಂಬದಲಿ

ಯಾವ ದಾರಿ ಹಿಡಿದು ಬರಲಿ
ನಿನ್ನ ಮನೆಯ ತಲುಪುವೆ
ಎನೋ ಬರೆಯ ಹೊರಟು ನಿನ್ನ
ಹೆಸರಿನಲ್ಲೇ ಮುಗಿಸುವೆ
ತಾರೆ ನಡುವೆ ಗೆರೆಯ ಎಳೆದು
ರಾತ್ರಿಯೆಲ್ಲ ಕಾಯುವೆ
ತೇಲಿ ಬಂದ ಶಶಿಯ ಮೊಗದಿ
ನಿನ್ನ ರೂಪ ಕಾಣುವೆ

ಬದುಕ  ನೀನೇ ರೂಪಿಸಿರುವೆ-
ಎಂದು ಅನಿಸಿ ಅರಳುವೆ 
ನಿನ್ನ ಅಗಲಿಕೆಯನು ತಂದ 
ಊಹೆಯಲ್ಲೂ ನರಳುವೆ 
ಪ್ರೇಮವೆಂದರೇನು ಎಂದು 
ನೀನೇ ಕಲಿಸ ಬಂದೆಯಾ?
ಬಿರುಕು ಮೂಡಿದಂಥ ತುಟಿಗೆ 
ಮಂದಹಾಸ ತಂದೆಯಾ?

ಹಗಲು ರಾತ್ರಿ ಬೆಸೆಯುತಿರುವೆ 
ಪ್ರೇಮದೋಲೆ ಬರೆಯಲು 
ಮೊದಲ ಪದವೇ ಇಷ್ಟು ಮಧುರ 
ತುಂಬಿ ಬಂತು ಕಂಗಳು 
ನನ್ನ ಒಲವ ಚಿಗುರು ಬಳ್ಳಿ 
ನಿನ್ನ ಹಬ್ಬುವಂತಿದೆ 
ಏನೂ ಬೇಡ ನಿನ್ನ ಉಸಿರು 
ಸೋಕಿ ಹಿಗ್ಗಿತೆನ್ನೆದೆ.... 

ನನ್ನ ನಿನ್ನ ಜಗಳದಲ್ಲಿ

ನನ್ನ ನಿನ್ನ ಜಗಳದಲ್ಲಿ 

ಇಬ್ಬರದ್ದೂ ತಪ್ಪಿಲ್ಲ 
ಹೊರೆಸಿ ಬಿಡುವ ಎಂದರೆ 
ನೆಪದ ಭುಜ ಸಿಗುತಿಲ್ಲ 
ಅದಕಾಗಿಯೇ ನೀ ನನಗೆ 
ಹಾಗು ನಾ ನಿನಗೆ 
ತಪ್ಪಿತಸ್ಥರೆನಿಸಿದೆವು 

ನನ್ನ ನಿನ್ನ ಆಸೆಗಳಲಿ 
ಎಷ್ಟೊಂದು ವ್ಯತ್ಯಾಸ!
ನಿನ್ನದು ಸಾಗದ
ನನ್ನದು ಬರಿಯ ಅಲೆ 
ಆವರಿಸಿ ಬರಲು ನನಗೆ 
ಬೇಕು ಸರತಿ ನೂರು
ಹಾಗಾಗಿ ಜನುಮ ಜನುಮ 
ಪಾಲುದಾರರಾದೆವು 

ಮಿತ ಭಾಷೆ ನನ್ನದು 
ಇದು ಲೋಕ ಅರಿತ ಸತ್ಯ 
ನಿನಗಷ್ಟೇ ತಿಳಿದಿದೆ 
ನನ್ನ ಚೀತ್ಕಾರ-ಕ್ರೌರ್ಯ 
ಮಾತು ಬಿಟ್ಟ ವೇಳೆ 
ಮಾತನಾಡವೇ ಕಣ್ಣು-
-ಕಣ್ಣಲಿಟ್ಟು ನೋಟ 
ಬೆಸೆಯದೆ ತಪ್ಪುವಂತೆ 
ಆಟವಾಡುತಿರುವೆವು 

ಜೇನು ತೇಯ್ದು ಕೊಟ್ಟ 
ಬೆರಳ ಕಚ್ಚಿ ತಿಂದವನ 
ಹಸಿವು ನಿನಗೆ ತಿಳಿದೂ 
ಮತ್ತೆ ಜೇನ ತರುವಾಕೆ 
ಎಂದಾದರೂ ನಿನ್ನ ಹಸಿವ 
ತೋಡಿಕೊಳ್ಳುವಾಗ 
ವಿಮರ್ಶೆಗೆ ಒಳಪಟ್ಟು 
ಸಂದೇಹವು ದುಪ್ಪಟ್ಟು-
-ಮೂಡುವ ಮೊದಲೇ 
ಮಾತು ಕೊಟ್ಟುಕೊಂಡೆವು 

ಮರುಮಾತು ಇನ್ನೇಕೆ, ಮಡಿಲಲ್ಲಿ ಮಗುವಾಗುವೆ

ಮರುಮಾತು ಇನ್ನೇಕೆ, ಮಡಿಲಲ್ಲಿ ಮಗುವಾಗುವೆ 

ಕನಸಲ್ಲಿ ಜೊತೆಯಾಗಿ, ನೆರಳೇ ನಾನಾಗುವೆ 
ತುದಿಗಣ್ಣು ಹೆಣೆದ ಬಲೆಯ ಬೀಸುತಾ 
ಮುಗಿಲನ್ನು ಹಿಡಿದು ನೆಲಕೆ ಹಾಸುವೆ 
ಹಗುರಾದ ಮಾತನ್ನು, ಮಿತವಾಗಿ ಬಳಸೋಣವೇ 
ಬದಲಾಗಿ ಮೌನಕ್ಕೆ ಶರಣಾಗಿ ಹೋಗೋಣವೇ 
ಕಳುವಾಗುವ ಹಾಗೆ, ಮರುದಾರಿ ಹಿಡಿಯೋಣವೇ 
ದಿಗಿಲಾಗುವ ವೇಳೆ, ಬಿಗಿಯಾಗಿ ಬಳಸೋಣವೇ... 

ಹಲವಾರು ತಿರುವಲ್ಲಿ, ಕೆಲವೊಂದೇ ಹಿತವಾದವು 
ನೆನಪಾಗಿ ಉಳಿವ ಸರದಿ 
ಹೂವಾಗಿ ಮನದ ಬನದಿ 
ನುಡಿ ಭಾಷೆ ಮರೆತಾಗ ಉಪ ಭಾಷೆ ಒಲವು 
ಅತಿ ಸಣ್ಣ ಖುಷಿಯಲ್ಲೂ ನವಿರೇಳೋ ಕ್ಷಣವು 
ಬೆಳಗೋ ಮೇಣವು, ಕರಗಿ ಹೋಗಿದೆ 
ಬೊಗಸೆ ಹಿಡಿಯಲ್ಲಿ, ಕೊಡುವೆ ಬೆಳಕನ್ನು... 

ಬಳಿಸಾರಿ ಬರುವಾಗ, ಸರಿ-ತಪ್ಪಿನರಿವಿಲ್ಲದೆ 
ಅನುವಾದಿಸು ಜೀವವೇ 
ಉಸಿರಾಟದ ಪಾಡನು 
ವಿಷವನ್ನೂ ಸಿಹಿಯಾದ ವಿಷಯ ಮಾಡುವ 
ಹಸಿವನ್ನೂ ಮರೆಸುತ್ತ ಹೃದಯ ತುಂಬುವ 
ಗಡಿಬಿಡಿಯಲ್ಲಿಯೂ, ಕುಡಿಯೋಡದಂತಿದೆ 
ಒಲವು ಶುರುವಾಗಿ, ಬೆಳೆದ ಮರವಾಗಿ 

ಮರುಮಾತು ಇನ್ನೇಕೆ, ಮಡಿಲಲ್ಲಿ ಮಗುವಾಗುವೆ 
ಕನಸಲ್ಲಿ ಜೊತೆಯಾಗಿ, ನೆರಳೇ ನಾನಾಗುವೆ 
ತುದಿಗಣ್ಣು ಹೆಣೆದ ಬಲೆಯ ಬೀಸುತಾ 
ಮುಗಿಲನ್ನು ಹಿಡಿದು ನೆಲಕೆ ಹಾಸುವೆ 
ಹಗುರಾದ ಮಾತನ್ನು, ಮಿತವಾಗಿ ಬಳಸೋಣವೇ 
ಬದಲಾಗಿ ಮೌನಕ್ಕೆ ಶರಣಾಗಿ ಹೋಗೋಣವೇ 
ಕಳುವಾಗುವ ಹಾಗೆ, ಮರುದಾರಿ ಹಿಡಿಯೋಣವೇ 
ದಿಗಿಲಾಗುವ ವೇಳೆ, ಬಿಗಿಯಾಗಿ ಬಳಸೋಣವೇ... 

ನೀರಾಗಿ ಹರಿದಂತೆ ನೀ ದೂರಕೆ

ನೀರಾಗಿ ಹರಿದಂತೆ ನೀ ದೂರಕೆ

ಕಣ್ಣೀರ ಪಸೆಯೊಂದೇ ಆಧಾರಕೆ
ಕಣ್ಣಮ್ಮ, ಕಣ್ಣಮ್ಮ ಕಣ್ಣಿಗೆ ಬಾರಮ್ಮ
ಆಗಾಗ ಕವಿದಂಥ ಮಂಜಾಗು ನೀನು 
ನಿನ್ನಲ್ಲೇ ಮರೆಯಾಗಿ ಅಳಬೇಕು ನಾನು
ಕಣ್ಣಮ್ಮ, ಕಣ್ಣಮ್ಮ ಕಣ್ಣಿಗೆ ಬಾರಮ್ಮ


ಒಂದಾಗಿ ಕಂಡ ಕನಸೆಲ್ಲ ಈಗ
ಕೊನೆಗಾಣಲು ಕಾದಿವೆ
ಆತಂಕದಲ್ಲೂ ಒದ್ದಾಡಿ ಬಂದ
ನಗೆ ಬೀರಲು ಸೋಲುವೆ
ಈ ದಾರಿಯಲ್ಲಿ ನಮಗಾಗಿ ಕಾದ
ನೆನಪೊಂದು ಮರವಾಗಿದೆ
ಕತೆಯಲ್ಲೆ ನಾವು ಜೊತೆಯಾಗುವಂತೆ
ಮೊದಲೇನೇ ಬರೆದಾಗಿದೆ

ಆ.. ಆ.. 
ಕಣ್ಣಮ್ಮ, ಕಣ್ಣಮ್ಮ ಕಣ್ಣಿಗೆ ಬಾರಮ್ಮ
ಆಗಾಗ ಕವಿದಂಥ ಮಂಜಾಗು ನೀನು 
ನಿನ್ನಲ್ಲೇ ಮರೆಯಾಗಿ ಅಳಬೇಕು ನಾನು


ಈ ರಾಗದಲ್ಲಿ ನೀ ಭಾಗಿಯಾಗು
ನೆನಪಾಗುವ ಕೂಡಲೇ
ಆಲಾಪದಲ್ಲೇ‌ ಮೊದಲಾದ ನೋವು
ಮನೆ ಮಾಡಿದೆ ನನ್ನಲೇ
ಹೂದೋಟದಲ್ಲಿ ಹೂವೆಲ್ಲ‌ ಖಾಲಿ
ಮುಳ್ಳಂತೆ ಮನಸಾಗಿದೆ
ಮುಕ್ತಾಯ‌ವನ್ನು ಮುಂದೂಡುವಂತೆ 
ಆರಂಭವೇ ಬೇಡಿದೆ


ಕಣ್ಣಮ್ಮ, ಕಣ್ಣಮ್ಮ ಕಣ್ಣಿಗೆ ಬಾರಮ್ಮ
ಆಗಾಗ ಕವಿದಂಥ ಮಂಜಾಗು ನೀನು 
ನಿನ್ನಲ್ಲೇ ಮರೆಯಾಗಿ ಅಳಬೇಕು ನಾನು
ಕಣ್ಣಮ್ಮ, ಕಣ್ಣಮ್ಮ ಕಣ್ಣಿಗೆ ಬಾರಮ್ಮ

ಓ ಚೆಲುವೇ, ಓ ಚೆಲುವೇ.. ಗುಟ್ಟಾಗಿರುವ ಜೇನೇ

ಓ ಚೆಲುವೇ, ಓ ಚೆಲುವೇ

ಗುಟ್ಟಾಗಿರುವ ಜೇನೇ 
ನೀ ಸುರಿಸೋ ಜೇನ್ಮಳೆಗೆ ಸಿಕ್ಕಿಬೀಳುವೆ.. ಮನಸೋತು ನಿಲ್ಲುವೆ  
ಓ ಮರುಳೇ, ಓ ಮರುಳೇ 
ನಿನ್ನ ನೆರಳು ನಾನೇ
ನೀ ಇರುವ ಕಾರಣಕೇ ನಾನು ಅಲ್ಲವೇ.. ಅನುಮಾನ ಇಲ್ಲವೇ..
ಹಿತವಾದ ಸೋನೆ.. ಹಿತವಾದ ಸೋನೆ..

ದೂರಾಗುವ ಭಯವಿಲ್ಲದೆ ಬೀಸೋ ಗಾಳಿಯೇ
ನನ್ನ ಬೆರೆತು, ಮೈಯ್ಯ ಮರೆತು ಮಾತನಾಡೆಯಾ?
ಈ ಆತುರಕ್ಕೆ ಬಳಿದು ಹೋಗು ಸಾವದಾನ ಬಣ್ಣ
ಅದಾದ ಮೇಲೆ ಬೆರಳ ಹಿಡಿದು ನಡೆಸು‌ ನೀನೇ‌ ನನ್ನ
ಮನೆಯೊಂದ ಕಟ್ಟಿರಲು ಗೋಡೆಗಳ ನೆರೆವಿನಿಂದ
ಅದರಾಚೆ ಜಗವನ್ನು ತೋರಿಸು ನೀ ಕಿಟಕಿಯಿಂದ 
ಹಿತವಾದ ಸೋನೆ.. ಹಿತವಾದ ಸೋನೆ..

ಓ ಚೆಲುವೇ, ಓ ಚೆಲುವೇ
ನಿನ್ನ ನೆಲೆಯು ನಾನೇ
ನೀ ಸುರಿಸೋ ಜೇನ್ಮಳೆಗೆ ಸಿಕ್ಕಿಬೀಳುವೆ.. ಮನಸೋತು ನಿಲ್ಲುವೆ  

ಕಾಲ ಸರಿದು ಬಾಳು ಸವೆದು ಪಡೆದ ಆಕೃತಿ
ಆಳಕಿಳಿದ ಮೇಲೆ ಏರದಿರಲು ಅವನತಿ
ಗುಲಾಬಿ ತೋಟದಲ್ಲಿ ಸಿಗುವ ಮುಳ್ಳು ಕೂಡ ಸತ್ಯ
ಶರಾಬಿನಲ್ಲಿ‌ ಕಾಣೋ ಲೋಕವೊಂದು ಚಂದ ಮಿಥ್ಯಾ
ಗುರುತನ್ನು ಕೊಡಬೇಕು ಕನ್ನಡಿಯ ನಗುವ ಬಿಂಬ
ಕೊನೆಯಲ್ಲಿ ನೆನಪೊಂದೇ ಈ ಬಾಳ ಸಂಚಿ ತುಂಬ

ಓ ಚೆಲುವೇ, ಓ ಚೆಲುವೇ
ನಿನ್ನ ನೆಲೆಯು ನಾನೇ
ನೀ ಸುರಿಸೋ ಜೇನ್ಮಳೆಗೆ ಸಿಕ್ಕಿಬೀಳುವೆ.. ಮನಸೋತು ನಿಲ್ಲುವೆ  
ಓ ಮರುಳೇ, ಓ ಮರುಳೇ
ನಿನ್ನ ನೆರಳು ನಾನೇ
ನೀ ಇರುವ ಕಾರಣಕೇ ನಾನು ಅಲ್ಲವೇ.. ಅನುಮಾನ ಇಲ್ಲವೇ..
ಹಿತವಾದ ಸೋನೆ.. ಹಿತವಾದ ಸೋನೆ..

ಯಾರೆಡೆಗಿದೆ, ಯಾರೆಡೆಗಿದೆ ಈ ಸೆಳೆತವು?

ಯಾರೆಡೆಗಿದೆ, ಯಾರೆಡೆಗಿದೆ ಈ ಸೆಳೆತವು?

ಯಾರಿಗೆ ಋಣ ತೀರಿಸಲಿದೆ ಈ ಪಯಣವು?
ದೂರದ ದಡ ಸೇರಲು ದಿನ ಏರಿಳಿತವು 
ದಣಿವೆ ಇರದೇ ಸಾಲಲೆಗಳು ಹಾತೊರೆದವು 
ಅರಿವಿಲ್ಲದ ಹರಿವಲ್ಲಿಯೇ ತೊರೆ ನದಿಯನು ಸೇರಿ 
ಬರಿಗಾಲಲಿ ಹೊರಟಾಗಲೇ ಹದವಾಗುವ ದಾರಿ 
ಹೊಸ ವಿಳಾಸ, ಹೊಸ ವಿಚಾರ ಪ್ರತಿಯೊಂದೂ ಹೊಸತು 
ಹೊಸ ಬಿಡಾರ, ಹೊಸ ಸವಾರಿ ಜೊತೆಯಲ್ಲಿ   

ಯಾರೆಡೆಗಿದೆ, ಯಾರೆಡೆಗಿದೆ ಈ ಸೆಳೆತವು 
ದಣಿವೆ ಇರದೇ ಸಾಲಲೆಗಳು ಹಾತೊರೆದವು 

ಗಾಳಿಯಲಿ ತೇಲುತಿರೋ ಆ ಮೋಡವು 
ಯಾರೊಡಲ ಪಾಲೆಂದು ಬರೆದಾಗಿದೆ 
ನಾಳೆಗಳ ಕೌತುಕದ ಸಹಭಾಗಕೆ 
ನೆನ್ನೆಗಳ ಸಾಲೊಂದು ಬೇಕಾಗಿದೆ 
ಅಲೆವಾಗಲೇ ಸರಿದೂಗಿಸುವ ಬದುಕು ಉರುಳಿ 
ಅಲೆದಾಡಿಸಿ ನೆಲೆಗಾಣಿಸುವ ಅತಿ ಸರಳವಾದ ಒಗಟು
ಒಗಟನ್ನು ಬಿಡಿಸೋದೇ ಬಾಳಲ್ಲವೆ!


ಯಾರೆಡೆಗಿದೆ, ಯಾರೆಡೆಗಿದೆ ಈ ಸೆಳೆತವು 
ಯಾರಿಗೆ ಋಣ ತೀರಿಸಲಿದೆ ಈ ಪಯಣವು
ದೂರದ ದಡ ದಾಟಲು ಇವೆ ಏರಿಳಿತವು 
ದಣಿವೆ ಇರದೇ ಸಾಲಲೆಗಳು ಹಾತೊರೆದವು 
ಕದವಿಲ್ಲದ ಕಣ್ಣರಳಿಸಿ ಕಂಡಾಗಲೇ ಬಣ್ಣ  
ಹಗುರಾಗಿಸುವಂತಾದರೆ ನಗು ಬೀರುವ ಪ್ರಾಣ  
ಹೊಸ ವಿಳಾಸ, ಹೊಸ ವಿಚಾರ ಪ್ರತಿಯೊಂದೂ ಹೊಸತು 
ಹೊಸ ಬಿಡಾರ, ಹೊಸ ಸವಾರಿ ಜೊತೆಯಲ್ಲಿ   

ಯಾರೆಡೆಗಿದೆ, ಈ ಸೆಳೆತವು 
ದಣಿವೆ ಇರದೇ ಸಾಲಲೆಗಳು ಹಾತೊರೆದವು 

ಮರಳಿ, ಮರಳಿ ಬರಲಾರೆಯಾ ಮನವೇ?

 ಹ್ಮ್ಮ್.. ಹ್ಮ್ಮ್.. ಹ್ಮ್ಮ್.. ಹ್ಮ್ಮ್.. 

ಮರಳಿ, ಮರಳಿ 
ಬರಲಾರೆಯಾ ಮನವೇ?
ಮಿಡಿವ ಹೃದಯ 
ನಿನ್ನ ಕೂಗಿದೆ 
ಹೊರಳಿ, ಹೊರಳಿ 
ನೆನಪಾಗುವ ಗಳಿಗೆ 
ಉರುಳೋ ಹನಿಯು 
ಮಿಡುಕಾಡಿದೆ
ಸುಕಾ ಸುಮ್ಮನೆ ಈ ಸೆಣೆಸಾಟವೇಕೆ 
ಇದೋ ಸೋತೆ ನಾನೇ ನಿನ್ನಲಿ ಈಗಲೇ 
ಬಾ ಒಮ್ಮೆ ನೋಡು, ಒದ್ದಾಟವನ್ನು 
ಕರಗಿ ಬಿಡಲಿ ದೂರ.. 
ಹ್ಮ್ಮ್.. ಹ್ಮ್ಮ್.. ಹ್ಮ್ಮ್.. ಹ್ಮ್ಮ್.. 

ಬೀಸಿ ಹೋದೆಯಾ ತಂಪು ಗಾಳಿಯೇ
ಚೇಡಿಸುತ ನನ್ನ ನೇವರಿಸಿ?
ಹೇಗಾದರೂ ಆಲಿಸು ನನ್ನನು 
ಕೊನೆಯಾಗಲಿ ಏಕಾಂಗಿ ಪಯಣ
ಇದುವೇ ಕೊನೆಯ ಮನವಿ

ಮರಳಿ, ಮರಳಿ 
ಬರಲಾರೆಯಾ ಮನವೇ?
ಮಿಡಿವ ಹೃದಯ 
ನಿನ್ನ ಕೂಗಿದೆ 
ಹೊರಳಿ, ಹೊರಳಿ 
ನೆನಪಾಗುವ ಗಳಿಗೆ 
ಉರುಳೋ ಹನಿಯು 
ಮಿಡುಕಾಡಿದೆ
ಸುಕಾ ಸುಮ್ಮನೆ ಈ ಸೆಣೆಸಾಟವೇಕೆ 
ಇದೋ ಸೋತೆ ನಾನೇ ನಿನ್ನಲಿ ಈಗಲೇ 
ಬಾ ಒಮ್ಮೆ ನೋಡು, ಒದ್ದಾಟವನ್ನು 
ಕರಗಿ ಬಿಡಲಿ ದೂರ.. 
ಹ್ಮ್ಮ್.. ಹ್ಮ್ಮ್.. ಹ್ಮ್ಮ್.. ಹ್ಮ್ಮ್

ಗಡಿಪಾರಾಗಿವೆ ಕನಸೆಲ್ಲವೂ

ಗಡಿಪಾರಾಗಿವೆ ಕನಸೆಲ್ಲವೂ 

ಹನಿ ಹನಿ ಜಾರಿದೆ ಮನಸ್ಸಿಲ್ಲದೆ 
ಬತ್ತಿದ ಕಣ್ಣಲಿ ಕಾಣುತ್ತೀರೋ 
ಕತ್ತಲಿಗೆ ಯಾವ ಹೆಸರಿದೆ 
ಕುರುಚಲು ದಾರಿ ನನ್ನೂರಿಗೆ 
ಮಾತೇ ಬಾರದು ನನ್ನೋರಿಗೆ 
ಈ ಮೌನದ ಭಾಷೆ ಕಲಿಯಲು 
ಮರು ಜನ್ಮವೇ ಬೇಕು ಅನಿಸುತಿದೆ 
ಉಸಿರೇ ಸಾಲದು, ಉಸಿರೇ ಸಾಲದು 
ಹಾಡಲು ಕಲಿಯಲು ಸುಖವೇನು 
ಓ.. ವಿಷವ ಹೀರಿದ ಉಸಿರ ಹಿಡಿದು 
ಪದವ ಹಾಡಲು ಬಹುದೇನು 
ಕೋಗಿಲೆಗಳಿಗೂ ಹೇಳಿಬಿಡಿ
ಅತ್ತರೆ ಲಾಭ ಯಾರಿಗಿದೆ?
ಅದೃಷ್ಟದ ಈ ಬದುಕಿನಲಿ 
ದೃಷ್ಟಿ ದೋಷದ ಶಾಪವಿದೆ 

ಸರಿಯೋ ತಪ್ಪೋ ತೀರ್ಮಾನಿಸಲು 
ಹೊರಗಿನ ಸಾಕ್ಷಿ ಏತಕೆ?
ಆತ್ಮ ಸಾಕ್ಷಿಯು ನಾಲಿಗೆ ಕಚ್ಚಿ 
ಸುಮ್ಮನೆ ಉಳಿಯಲು ನಾಚಿಕೆ 
ನೆರಳ ಹಿಡಿದು ಮುಂದಾಗುವೆ ಭ್ರಮೆಯಲ್ಲಿ 
ನಾನೇ ಅದನು ಮುಂದೂಡುವೆ ಕೊನೆಯಲ್ಲಿ 
ಈ ಸಾಗರ ದೂರದ ಜಾತ್ರೆಯ
ಕಳುವಾಗಿರೋ ಕೂಸಿನ ಕೂಗಿಗೆ 
ಕಿವಿಯಾಗುವ ಸಹನೆ ಯಾರಿಗಿದೆ 
ಎಲ್ಲವನ್ನೂ ಸಾವರಿಸಿ 
ಗಾಳಿ ಸದ್ದು ಮಾಡುತಿದೆ 
ನಿಲ್ಲು ಎಂದು ಬೇಡಿದರೂ 
ಕಾಲ ಮುಂದೆ ಸಾಗುತಿದೆ 

ಉಸಿರೇ ಸಾಲದು, ಉಸಿರೇ ಸಾಲದು 
ಹಾಡಲು ಕಲಿಯಲು ಸುಖವೇನು 
ಓ.. ವಿಷವ ಹೀರಿದ ಉಸಿರ ಹಿಡಿದು 
ಪದವ ಹಾಡಲು ಬಹುದೇನು 
ಕೋಗಿಲೆಗಳಿಗೂ ಹೇಳಿಬಿಡಿ
ಅತ್ತರೆ ಲಾಭ ಯಾರಿಗಿದೆ 
ಅದೃಷ್ಟದ ಈ ಬದುಕಿನಲಿ 
ದೃಷ್ಟಿ ದೋಷದ ಶಾಪವಿದೆ 


ಈ ಸಕ್ಕರೆ ಅಣುವಲಿ ಬೆವರಿದೆ 
ತಿನ್ನೋ ಅನ್ನದಲ್ಲಿ ಮಣ್ಣಿನ ಋಣವಿದೆ 
ಖಾಲಿ ತಣಿಗೆಯು ಮಾಡುವ ಸದ್ದಿಗೆ
ಹೊಟ್ಟೆ ಹಸಿವೊಮ್ಮೆಗೆ ಸಾಯುತಿದೆ 

ಎತ್ತರವಾದ ಶಿಖರಕೂ ಕೂಡ 
ಎಚ್ಚರ ನೀಡುವ ಮೋಡವಿದೆ 
ಉತ್ತರವಿರದ ಪ್ರಶ್ನೆಗಳನ್ನು 
ಸುರಿವ ಮಳೆಯು ಕೇಳುತಿದೆ 
ಸಿಗದ ಕೊನೆಯ ಹುಡುಕೋದೇ ಜೀವನವೇ?
ಅಲೆಯ ಎದುರು ಈಜಾಡುವ ಸಾಹಸವೇ?
ಈ ದಟ್ಟಣೆ ಏಕೋ ನೋವಿಗೆ 
ಅಣೆಕಟ್ಟನ್ನು ಕಟ್ಟಲೇ ಬೇಕಿದೆ 
ಎದೆಗೊಡುವ ಬಲವು ಯಾರಿಗಿದೆ 
ಎಲ್ಲವನ್ನೂ ಸಾವರಿಸಿ 
ಗಾಳಿ ಸದ್ದು ಮಾಡುತಿದೆ 
ನಿಲ್ಲು ಎಂದು ಬೇಡಿದರೂ 
ಕಾಲ ಮುಂದೆ ಸಾಗುತಿದೆ 

ಉಸಿರೇ ಸಾಲದು, ಉಸಿರೇ ಸಾಲದು 
ಹಾಡಲು ಕಲಿಯಲು ಸುಖವೇನು 
ಓ.. ವಿಷವ ಹೀರಿದ ಉಸಿರ ಹಿಡಿದು 
ಪದವ ಹಾಡಲು ಬಹುದೇನು 
ಕೋಗಿಲೆಗಳಿಗೂ ಹೇಳಿಬಿಡಿ
ಅತ್ತರೆ ಲಾಭ ಯಾರಿಗಿದೆ?
ಅದೃಷ್ಟದ ಈ ಬದುಕಿನಲಿ 
ದೃಷ್ಟಿ ದೋಷದ ಶಾಪವಿದೆ... 

Tuesday, 2 February 2021

ಕೇಳೈಯ್ಯೋ ಕೇಳಯ್ಯ... ಕೇಳೈಯ್ಯೋ ಕೇಳಯ್ಯ...

ಕೇಳೈಯ್ಯೋ ಕೇಳಯ್ಯ... ಕೇಳೈಯ್ಯೋ ಕೇಳಯ್ಯ... 

ಕೂಡಿಟ್ಟ ಕಾಸು ಎಂದೂ ದಕ್ಕದು 
ಕಾಪಿಟ್ಟ ನೀರು ಎಲ್ಲೂ ನಿಲ್ಲದು 
ಬಚ್ಚಿಟ್ಟ ಬೀಜ ಮೊಳಕೆ ಬಿಟ್ಟರೆ 
ಬಿತ್ತೋದ ಬಿಟ್ಟು ದಾರಿ ಕಾಣದು 
ಕಿತ್ತಾಡಿದಲ್ಲೆಲ್ಲ ಕಿತ್ತಾಟ ಗೆಲ್ಲೋದು 
ಬೀಸಿದಾಗ ಮಾತ್ರ ಕತ್ತಿ ಕೊಲ್ಲೋದು

ಕೇಳೈಯ್ಯೋ ಕೇಳಯ್ಯ... ಕೇಳೈಯ್ಯೋ ಕೇಳಯ್ಯ... 

ಮೋಡನ ಕಟ್ಟಿ ಭೂಮಿ ಕಾಯೋದು 
ಕಾಯುತ್ತ ಒಡಲು ಬಿರುಕು ಮೂಡೋದು 
ಕೊಡುಗೈಯ್ಯ ಹುಣ್ಣು ಕೂಡಿಕೊಂಡರೂ 
ಕನ್ನಡಿ ಕಣ್ಣು ತುಂಬಿ ಬರುವುದು 
ಗಡಿಯಾರ ನಿಂತರು ಭೂಮಿ ಸುತ್ತುವುದು 
ಕಗ್ಗಂಟಿಗೂ ಕೂಡ ಬಿಡುಗಡೆ ಇಹುದು 

ಕೇಳೈಯ್ಯೋ ಕೇಳಯ್ಯ... ಕೇಳೈಯ್ಯೋ ಕೇಳಯ್ಯ... 

ನಾಳೆ ಅನ್ನೋದು ಭರವಸೆ ನೀಡುವ ನೆರಳಿನಂತೆ 
ನೆನ್ನೆ ಮೊನ್ನೆಗಳೆಲ್ಲವೂ ಅನುಭವ ಬೇರಂತೆ 
ಆಳ ಹೊಕ್ಕಷ್ಟೂ ನೆಲೆಯಲ್ಲಿ ನಿಲ್ಲುವ ದೃಢತೆಯಂತೆ
ಕಾಲ ಎಲ್ಲವ ಮುಂದಕ್ಕೇ ದೂಡೋದು ಎಂದಿನಂತೆ 
ನಿದ್ದೆ ನಂತರ ಎಚ್ಚರಗೊಳ್ಳದೆ ಹೋಗುವೆಯಾ 
ದೀಪ ಆರಿದ ಕೂಡಲೇ ಕತ್ತಲೆಂದುಕೊಂಡೆಯಾ? 

ಕೇಳೈಯ್ಯೋ ಕೇಳಯ್ಯ... ಕೇಳೈಯ್ಯೋ ಕೇಳಯ್ಯ... 

ಸೋಲನ್ನು ಒಪ್ಪಿ ತಲೆಯ ಬಾಗೋದು 
ಗೆದ್ದಾಗ ಮತ್ತೆ ಎದ್ದು ನಿಲ್ಲೋದು 
ಗದ್ದುಗೆ ಹಿಡಿದೋನು ಒದ್ದಾಡುತಾನೈಯ್ಯಾ
ದೇವರಿಗೂ ಕಷ್ಟ ಗೊತ್ತು ಕಣಯ್ಯಾ.. 

ಕೇಳೈಯ್ಯೋ ಕೇಳಯ್ಯ... ಕೇಳೈಯ್ಯೋ ಕೇಳಯ್ಯ... 

ಮನಸು ಗಟ್ಟಿ ಮಾಡಿಕೊಂಡು ಎಲ್ಲವ ಎದುರಿಸುವ 
ಕೊಟ್ಟ ಮಾತನ್ನು ಮೀರದ ದಿಟ್ಟತನ ಹೊಂದುವ 
ತೋಳು ಚಾಚುತ್ತ ಒಬ್ಬರಿಗೊಬ್ಬರು ನೆರವಾಗುವ 
ಮೇಲು ಕೀಳನ್ನು ತೊಲಗಿಸಿ ಒಗ್ಗೂಡೋ ಬಲವಾಗುವ 
ನಾಡ ಕಟ್ಟುವ ಕಾರ್ಯವು ಪುಣ್ಯದ ಕಾಯಕವೇ 
ಹಂಚಿ ಬಾಳುವ ಸಾಧನ ಗೆಲುವಿಗೆ ಪೂರಕೆವೇ... 

ಕೇಳೈಯ್ಯೋ ಕೇಳಯ್ಯ... ಕೇಳೈಯ್ಯೋ ಕೇಳಯ್ಯ... 

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...