ನನ್ನ ನಿನ್ನ ಜಗಳದಲ್ಲಿ
ಇಬ್ಬರದ್ದೂ ತಪ್ಪಿಲ್ಲ
ಹೊರೆಸಿ ಬಿಡುವ ಎಂದರೆ
ನೆಪದ ಭುಜ ಸಿಗುತಿಲ್ಲ
ಅದಕಾಗಿಯೇ ನೀ ನನಗೆ
ಹಾಗು ನಾ ನಿನಗೆ
ತಪ್ಪಿತಸ್ಥರೆನಿಸಿದೆವು
ನನ್ನ ನಿನ್ನ ಆಸೆಗಳಲಿ
ಎಷ್ಟೊಂದು ವ್ಯತ್ಯಾಸ!
ನಿನ್ನದು ಸಾಗದ
ನನ್ನದು ಬರಿಯ ಅಲೆ
ಆವರಿಸಿ ಬರಲು ನನಗೆ
ಬೇಕು ಸರತಿ ನೂರು
ಹಾಗಾಗಿ ಜನುಮ ಜನುಮ
ಪಾಲುದಾರರಾದೆವು
ಮಿತ ಭಾಷೆ ನನ್ನದು
ಇದು ಲೋಕ ಅರಿತ ಸತ್ಯ
ನಿನಗಷ್ಟೇ ತಿಳಿದಿದೆ
ನನ್ನ ಚೀತ್ಕಾರ-ಕ್ರೌರ್ಯ
ಮಾತು ಬಿಟ್ಟ ವೇಳೆ
ಮಾತನಾಡವೇ ಕಣ್ಣು-
-ಕಣ್ಣಲಿಟ್ಟು ನೋಟ
ಬೆಸೆಯದೆ ತಪ್ಪುವಂತೆ
ಆಟವಾಡುತಿರುವೆವು
ಜೇನು ತೇಯ್ದು ಕೊಟ್ಟ
ಬೆರಳ ಕಚ್ಚಿ ತಿಂದವನ
ಹಸಿವು ನಿನಗೆ ತಿಳಿದೂ
ಮತ್ತೆ ಜೇನ ತರುವಾಕೆ
ಎಂದಾದರೂ ನಿನ್ನ ಹಸಿವ
ತೋಡಿಕೊಳ್ಳುವಾಗ
ವಿಮರ್ಶೆಗೆ ಒಳಪಟ್ಟು
ಸಂದೇಹವು ದುಪ್ಪಟ್ಟು-
-ಮೂಡುವ ಮೊದಲೇ
ಮಾತು ಕೊಟ್ಟುಕೊಂಡೆವು
No comments:
Post a Comment