Tuesday, 7 March 2023

ಕೂಸೇ, ನನ್ನಪ್ಪ ನೀನು

ಗೊಣ್ಣೆ ಸೋರ್ಸ್ಕೊಂಡ್ ಅಪ್ಪಂಗೇ

ಅಪ್ಣೆ ಮಾಡೋ ಮಗ್ನೇ
ನಿಂಗಿಂತ ವೈಸಲಿ ದೊಡ್ಡೋನು
ಮರ್ಯಾದೆನೇ ಇಲ್ವಲ್ಲೋ

ಕಕ್ಕ ಮಾಡಿ ಅಂಡು ತೊಳ್ಯೋಕೂ
ನನ್ನೇ ಕರೆಯವ್ನು
ಮುತ್ತು ಕೊಟ್ಟಾಗ್ ಮೆತ್ತಿದ್ ಎಂಜ್ಲು
ಗಲೀಜು ಅಂದ್ಯಲ್ಲೋ

ಕೈ ಹಿಡ್ದು ನಡಿಯೋ ಅಂದ್ರೆ
ನೋಡೋರ್ ಮುಂದೆ ಬಿಂಕ
ಬಿದ್ದು ಮಂಡಿ ಗಾಯ ಆದ್ರೆ
ನಂಗೇ ಹೊಡೆದ್ಯಲ್ಲೋ

"ನಾನೇನು ಇನ್ನೂ ಮಗುನಾ?" ಅಂತ
ಜಂಬ ನಿನ್ನಲ್ಲಿದ್ರೂ
ಗುಮ್ಮ ಬಂದ ಅಂದ್ರೆ ಸಾಕು
ಅತ್ತು ಕರ್ದ್ಯಲ್ಲೋ

ಎಲ್ಲ ಗೊತ್ತು ಅಂತೀಯ
ಹೇಳ್ಕೊಡೋಕೋದ್ರೆ ಬೈತೀಯ
ಪ್ರಶ್ನೆ ನಿಂದು, ಉತ್ರ ನಿಂದು
ಜಾಣನಾದ್ಯಲ್ಲೋ

ಆಟ ಆಡ್ಸು ‌ಆಡ್ತೀನಿ
ಏನೇ ಹೇಳು ಮಾಡ್ತೀನಿ
ಮಾತಿಗ್ ಮಾತು ಬೆರ್ಸಿ ನನ್ನ
ಸೋಲ್ಸೇ ಬಿಟ್ಯಲ್ಲೋ

ಕೂಸೇ, ನನ್ನಪ್ಪ ನೀನು
ನಾನಪ್ಪ, ಆದ್ರೂ ಕೂಸು
ನಾವಿಬ್ರೂ ಒಂದೇ ಅಂತ 
ತೋರ್ಸ್ಕೊಟ್ಯಲ್ಲೋ!

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...