Wednesday, 19 August 2015

ಕೂಡುವ ತನಕ

ಅದೆಷ್ಟು ಬರಗೆಟ್ಟ ಸಾಲೂ
ನಿನ್ನ ಹೆಸರ ಕೂಡಿ
ಚಂದವಾದದ್ದು ಸೋಜಿಗ


ನೀ ಬೇಲಿಯ ಹೂ,
ತಿಳಿ ಗಾಳಿಗೂ ತಲೆದೂಗುವ
ಕರುಣಾಮಯಿ


ಅಂಬರದಲ್ಲಿ ನಿನ್ನ ಅಂಬೆಗಾಲು
ಅಲ್ಲಲ್ಲಿ ಹೂ ಬಿಟ್ಟಂತೆ ಮೋಡ
ನಾ ಹಿಂದೆ ಹಬ್ಬಿದ ನೀಲಿ ಮಿಥ್ಯಾಭಾವನೆ


ಗಡಿಬಿಡಿಯ ಗುಡುಗಲ್ಲಿ
ಕೆನ್ನೆ ಹನಿವಾಗೆಲ್ಲ
ಕೊಡೆಯಾದವು ಕುರುಳು,
ನಾ ಏನೂ ಅರಿಯದ
ಮೂಕ ಕಾಮನಬಿಲ್ಲು


ಬೆಳಕಲ್ಲಿ ಮಬ್ಬು ಅಸ್ಪಷ್ಟ
ಮಬ್ಬಲ್ಲಿ ಬೆಳಕು,
ಒಂದರ ಬೆನ್ನಲ್ಲಿ ಮತ್ತೊಂದು
ನನ್ನ ನಿನ್ನಂತೆ


ಬಿಡುವಾಗಿ ಬಿದ್ದಿರುವೆ
ತಡವಾದರೂ ಸರಿಯೇ
ಮರೆಯದೆ ಬಂದುಬಿಡು


ಬಾಕಿ ಉಳಿದ ಮಾತ
ಕೈ ಕುಲುಕಿ ಪರಿಚಯಿಸಿ ನಂತರ
ನಿನ್ನ ದಾರಿ ನಿನ್ನದು
ನನ್ನ ದಾರಿ ನನ್ನದು
ಎರಡೂ ಕೂಡುವ ತನಕ!!


                          -- ರತ್ನಸುತ

No comments:

Post a Comment

ಹೃದಯವ ನೀಡಲೇ

ಹೃದಯವ ನೀಡಲೇ ಹೇಳದ ಮಾತಿವೆ ನೂರಾರು ಆಲಿಸು ಈಗಲೇ ಪಾಲಿಸಿ ನಿನ್ನಯ ನೆರಳನು ಹೃದಯವ ನೀಡಲೇ ಹೊಂಗನಸ ಅಂಗಳದಿ ಅರಳಿರುವ ಚಂದಿರ ನೀ  ಯಾರಿರದ ತೀರದಲಿ ಅಲೆಗಳಲೂ ನಿನ್ನ ದನಿ  ...