Monday, 24 August 2015

ಬೂದಿ ಮತ್ತು ಕವಿತೆ

ಒಲೆಯ ಮೇಲೆ ಹಾಲಿರಿಸಿ
ಕವಿತೆ ಬರೆಯುತ್ತಾ ಕೂತೆ
ಅತ್ತ ಹಾಲೂ ಉಕ್ಕಲಿಲ್ಲ
ಇತ್ತ ಕವಿತೆಯೂ!!


ಒಲೆ ಹಚ್ಚಿದ್ದರೆ ತಾನೆ
ಹಾಲು ಕುದಿಯಲು ಅವಕಾಶ?!!
ಒಳಗೆ ಕಿಚ್ಚಿದ್ದರೆ ತಾನೆ
ಕವಿತೆ ತೆರೆದ ಆಕಾಶ?!!


ಹಾಲ ಬಟ್ಟಲ ಒಳಗೆ
ಬೆರಳೊಂದ ಅದ್ದಿದೆ, ಹಾಲು ಒಡೆಯಿತು
ಬೆರಳೊಲ್ಲದೆ ಲೇಖನಿಯ ಬಿಗಿ ಹಿಡಿದೆ
ಕವಿತೆ ಉಸಿರುಗಟ್ಟಿ ಸತ್ತಿತು!!


ಒಲೆ ಹಚ್ಚಲು ಬಾರದವನು
ಕಾದು ಅಲ್ಲೇ ಸತ್ತೆ
ಕವಿತೆ ಬರೆಯಲಾಗದೆ
ಬಿಕ್ಕಳಿಸುತ ಅತ್ತೆ!!


ಬೂದಿ ಕೆದಕಿದಾಗ ಬಯಲು
ಸಣ್ಣ ಉರಿ ಕೆಂಡ
ಬರೆಯಲಾಗದವನೂ
ಸ್ವಂತ ದಾರಿ ಕಂಡುಕೊಂಡ


ಒಲೆ ಉರಿದಂತೆಲ್ಲ ಹಾಲು
ಉಕ್ಕಿ ಹೊರ ಹರಿಯಿತು
ಮೊದಲಾಗದ ಕವಿತೆಯೊಂದು
ಅಲ್ಲಿಗೆ ಕೊನೆ ಮುಟ್ಟಿತು!!


                          -- ರತ್ನಸುತ

No comments:

Post a Comment

ಹೃದಯವ ನೀಡಲೇ

ಹೃದಯವ ನೀಡಲೇ ಹೇಳದ ಮಾತಿವೆ ನೂರಾರು ಆಲಿಸು ಈಗಲೇ ಪಾಲಿಸಿ ನಿನ್ನಯ ನೆರಳನು ಹೃದಯವ ನೀಡಲೇ ಹೊಂಗನಸ ಅಂಗಳದಿ ಅರಳಿರುವ ಚಂದಿರ ನೀ  ಯಾರಿರದ ತೀರದಲಿ ಅಲೆಗಳಲೂ ನಿನ್ನ ದನಿ  ...