Sunday, 15 September 2019

ಗಾಜಿನ ಮೇಲೆ ಜಾರಿವೆ ಹನಿಗಳು

ಗಾಜಿನ ಮೇಲೆ ಜಾರಿವೆ ಹನಿಗಳು
ಬಿಟ್ಟೂ ಬಿಡದೆ ಗುರುತುಗಳ
ಬಿಡಿಸಿಕೊಂಡ ನೆನಪಿನ ಚಿತ್ರವು
ನಡೆಸಿದೆ ಮಳೆಯೊಡನೊಣ ಜಗಳ

ಬೆರಳು ಕೊಡದು ಅಂಚೆ ವಿಳಾಸ
ಕರಗುವ ರೇಖೆಗೆ ಅಪ್ಪಣೆಯ
ಕುರುಡು ಆಸೆಗೆ ಇಲ್ಲದ ಕಣ್ಣು
ಎದುರು ನೋಡಿದೆ ಕತ್ತಲೆಯ

ನೀಲಿ ನೆನಪಿನ ಖಾಲಿ ಆಗಸ
ಒದ್ದೆ ಕೆನ್ನೆಯ ಭೂ ಚೆಹರೆ
ಸಾಕು ಮಾಡದೆ ತೊಟ್ಟಿಕ್ಕುತಿಹೆ
ಸಂಚಿ ತುಳುಕಿಸಿ ತಂಬೆಲರೆ

ತಡವಾದೀತು ಬುತ್ತಿ ಕಟ್ಟುವ
ಚಂದಿರ ಹಸಿವನು ಸಹಿಸೊಲ್ಲ
ಹಿತ್ತಲ ಹಟ್ಟಿಯ ಇಣುಕಿ ಆಗಿದೆ
ನಮ್ಮ ಕೋಣೆಗೂ ಬರಬಲ್ಲ

ನಿನ್ನ ನೆರಿಗೆಯ ಲೆಕ್ಕ ತಪ್ಪಿದೆ
ಅಚ್ಚರಿ ಪಡುತ ಎಣಿಸಿಬಿಡು
ಬಿಂದಿ ಅಂಟಿದ ಕನ್ನಡಿ ಸಾಕ್ಷಿಗೆ
ಒಪ್ಪುವ ಸುಳ್ಳನು ಬರೆದು ಕೊಡು

ಕಿಟಕಿ ಗಾಜಿನ ಮೋಜಿನ ಮಂಜು
ಒಡಲಾಯಿತು ನಮ್ಮನಿಸಿಕೆಗೆ
ಮಳೆಗೂ ಈಗಲೇ ಮನಸಾದಂತೆ
ಬೇಡಿದೆ ಹೊಸತು ಬರವಣಿಗೆ...

- ರತ್ನಸುತ

No comments:

Post a Comment

ಹೃದಯವ ನೀಡಲೇ

ಹೃದಯವ ನೀಡಲೇ ಹೇಳದ ಮಾತಿವೆ ನೂರಾರು ಆಲಿಸು ಈಗಲೇ ಪಾಲಿಸಿ ನಿನ್ನಯ ನೆರಳನು ಹೃದಯವ ನೀಡಲೇ ಹೊಂಗನಸ ಅಂಗಳದಿ ಅರಳಿರುವ ಚಂದಿರ ನೀ  ಯಾರಿರದ ತೀರದಲಿ ಅಲೆಗಳಲೂ ನಿನ್ನ ದನಿ  ...