Friday, 27 September 2019

ಬೇಡುವವರು ಮತ್ತು ಕೊಲ್ಲುವವರು

ಎರಡು ವರ್ಗದ ಜನರಿದ್ದಾರೆ
ಬೇಡುವವರು ಮತ್ತು ಕೊಲ್ಲುವವರು
ಜೇಬಲ್ಲಿ ಒಂದಷ್ಟು ನಾಣ್ಯಗಳ ತುಂಬಿಕೋ
ಬೇಡುವವರ ನೆರವಿಗೆ
ಕೊಲ್ಲುವವರ ಕರುಣೆಗೆ

ಬೇಡುವವರಿಗೆ ಬೆನ್ನು ಬಾಗಿ ನೀಡು
ಕೊಲ್ಲುವವರಿಗೆ ದೂರದಿಂದಲೇ ಬೀಸು
ಒಂದೋ ಹಸಿವ ನೀಗಿಸು
ಇಲ್ಲ ನೆತ್ತರು ಹರಿಸು

ಮುಂದೊಂದು ದಿನ
ಮತ್ತಾರಿಂದಲೋ ಎಸೆಯಲ್ಪಟ್ಟ ಬಿಲ್ಲೆ
ನಿನ್ನ ತಾಕಿ ರಕ್ತ ಚಿಮ್ಮಬಹುದು
ಆಗ ನೀನೂ ಕಟುಕನೆಂಬುದನರಿತು
ಶಾಂತಿ ಮಾರ್ಗ ಹುಡುಕು

ರಕ್ತ-ಸಿಕ್ತ ಬಿಲ್ಲೆಗಳು
ನಿನ್ನ ಭಿಕ್ಷಾ ಪಾತ್ರೆಯಲ್ಲಿ ಸದ್ದು ಮಾಡಬಹುದು
ಕೊಟ್ಟವರು ಅಷ್ಟಾಗಿ ಬಾಗಿಲ್ಲವಾದರೂ
ಕೊಟ್ಟರೆಂದಷ್ಟೇ ತೃಪ್ತಿ ಪಡು

ನಿನ್ನ ಹೊಟ್ಟೆ ತುಂಬಿದಾಗ
ಅನ್ಯರಿಗೆ ಕೈ ಚಾಚು
ಅಗೋ ಅಲ್ಲಿ ರಕ್ತದ ಮಡುವಿನಲ್ಲಿ
ಚೆಲ್ಲಾಡಿದ ಚಿಲ್ಲರೆಯನ್ನು ಮಣ್ಣಿನಿಂದ ಮುಚ್ಚು
ಗಾಯಗೊಂಡವರ ಎದೆಗೊರಗಿಸಿಕೋ...

No comments:

Post a Comment

ಹೃದಯವ ನೀಡಲೇ

ಹೃದಯವ ನೀಡಲೇ ಹೇಳದ ಮಾತಿವೆ ನೂರಾರು ಆಲಿಸು ಈಗಲೇ ಪಾಲಿಸಿ ನಿನ್ನಯ ನೆರಳನು ಹೃದಯವ ನೀಡಲೇ ಹೊಂಗನಸ ಅಂಗಳದಿ ಅರಳಿರುವ ಚಂದಿರ ನೀ  ಯಾರಿರದ ತೀರದಲಿ ಅಲೆಗಳಲೂ ನಿನ್ನ ದನಿ  ...