Sunday, 15 September 2019

"ಬೆನ್ನಿಗೆ ಮುಖ ಭಾವದ ಕೊರತೆ"

"ಬೆನ್ನಿಗೆ ಮುಖ ಭಾವದ ಕೊರತೆ"
ನೋವಿನ ಗುಟ್ಟು ಅಡಗಿಸಿಟ್ಟು
ತಲೆ ತಗ್ಗಿಸಿ ನಡೆವಾಗ ಎದೆ ಉಬ್ಬಿರಲಾರದು.
ಗೂನಿದ ಭುಜದಡಿ ವಿಸ್ತಾರ ಬೆನ್ನು
ಮಾತನಾಡುತ್ತಲೇ ಮಾತನಾಡಿಸುತ್ತೆ
ಮುಖವಾಡಗಳಿಗದು ಅರ್ಥವಾಗುವುದಿಲ್ಲ
ಬಿನ್ನು ಕೊಟ್ಟು ನಡೆದೆ ಎಂದು ಜರಿವರು

ಹರಕಲು ತೊಟ್ಟರೂ ಬೇಡೆನ್ನದು
ಕನ್ನಡಿಯೆಡೆಗೆ ಬೆನ್ನು ಮಾಡುವಾಗ
ತಲೆ ಹೊರಳಿಸಿ ನೋಡುತ್ತೇನೆ
ಬಿದ್ದ ಮಡತೆ ಹರಕಲನ್ನು ಮರೆಸಿ
ಆಗಿನ್ನೂ ಮೂರು ಸಂವ್ತ್ಸರದ ಹಿಂದೆ
ದೀಪಾವಳಿಗೆ ಕೊಂಡ ಅಂಗಿಯಂತಿರದೆ
ನೆನಪಿನ ಚಿತ್ತಾರ ಹೊತ್ತು ಹೊಸತಾಗೇ ಇತ್ತು

ಹಾಸಿಗೆಗೆ ಆಸೆಗಳ, ಕನಸುಗಳನುಣಿಸಿ
ಬೆಚ್ಚಿ, ಬೆವರಿ, ಕಂಪಿಸಿದ ತೊಗಲಿಗೆ
ಎಂದೂ ಕೈಯ್ಯಾರೆ ಕಲ್ಲು ಕೊಟ್ಟು ತಿಕ್ಕಲಾಗಲಿಲ್ಲ.
ಒರಗಿದ ಗೋಡೆಗೆ ಗುರುತಿಟ್ಟು
ನೆರಳಿನ ಮೇಲೂ ಕಣ್ಣಿಟ್ಟು
ಬಾಯಾರಿದಾಗಲೂ ಬಾಯಿ ತೆರೆಯದಿತ್ತು ಬೆನ್ನು

ಬಳೆ ಸದ್ದು ಉದ್ದಗಲಕ್ಕೂ ಸವರಿ
ಹಸ್ತಕ್ಕೆ ತಾಕಿ ಒರಟುತನ
ಎದೆಗಂಟಿದ ಮೆದು ಮಾಂಸ ಜ್ವಾಲೆ
ಬೆವರ ಹನಿಯನು ಹಡೆದು
ಇಂಗಿದ ಇಂಗಿತಕೆ ಪರಚು ಗಾಯ
ಮಂಗ ಬುದ್ಧಿಯ ಕೈಗೆ ಮಾಣಿಕ್ಯ ಸಿಕ್ಕಂತೆ

ನೊಂದ ಬೆನ್ನಿಗೂ, ಬೆನ್ನ ನೋವಿಗೂ ಅಂತರವಿದೆ
ಗುಣ ಪಡಿಸುವ ವಿಧಾನಗಳೂ ಬಿನ್ನ
ನನ್ನ ಬೆನ್ನಿಗೆ ಕಣ್ಣು, ಕಿವಿ, ಬಾಯಿಲ್ಲ
ಆದರೂ ಆಲಿಸುವುದು, ಗ್ರಹಿಸುವುದು, ಉಲಿವುದು.
ನಾನು ನನ್ನ ಬೆನ್ನ ಆಪ್ತ ಗೆಳೆಯ
ನಾ ಅವನ, ಮತ್ತವ ನನ್ನ ಹೊತ್ತಿರುವ..

No comments:

Post a Comment

ಹೃದಯವ ನೀಡಲೇ

ಹೃದಯವ ನೀಡಲೇ ಹೇಳದ ಮಾತಿವೆ ನೂರಾರು ಆಲಿಸು ಈಗಲೇ ಪಾಲಿಸಿ ನಿನ್ನಯ ನೆರಳನು ಹೃದಯವ ನೀಡಲೇ ಹೊಂಗನಸ ಅಂಗಳದಿ ಅರಳಿರುವ ಚಂದಿರ ನೀ  ಯಾರಿರದ ತೀರದಲಿ ಅಲೆಗಳಲೂ ನಿನ್ನ ದನಿ  ...