Sunday, 15 September 2019

ಬೆಂಕಿಗೆ ದೂಡಬಹುದಿತ್ತು, ಸುಮ್ಮನಿದ್ದಿರಿ

ಬೆಂಕಿಗೆ ದೂಡಬಹುದಿತ್ತು, ಸುಮ್ಮನಿದ್ದಿರಿ
ಮುಳ್ಳು ಚುಚ್ಚಬಹುದಿತ್ತು, ಸುಮ್ಮನಾದಿರಿ
ಬಿದ್ದಾಗ ಕೈ ಹಿಡಿದಿಲ್ಲವಾದರೂ, ಬೀಳಿಸದಿದ್ದಿರಿ
ನಿಮ್ಮವನಲ್ಲನೆನ್ನಬಹುದಿತ್ತು, ಜೊತೆಗೊಂಡಿರಿ

ಧೂಳಿನಂತಾದರೂ ಇರಿಸಿಕೊಂಡಿರಿ ಒದರದೆ
ಹೂವಿನಷ್ಟೇ ಹಗುರಾಗಿ ಎರಗಿ ಎದೆಗೆ
ಬೇಲಿ ಕಟ್ಟಿ, ದೂರವಿಡದೆ ತುತ್ತು ಹಂಚುವಲ್ಲಿ
ನಿಮ್ಮ ಹಾದಿಯತ್ತ ನನ್ನ ನೆರಳ ನಡಿಗೆ

ಇಷ್ಟ ಪಟ್ಟಿರಿ ತುಂಟ-ತರಲೆಗಳ
ಕಷ್ಟ ಕಲ್ಲುರುಳಿಸುವಲಿ ಬೆವರಾದಿರಿ
ಒಂಟಿಯೆನಿಸುವಲ್ಲಿ ಆಗಂತುಕರಾಗಿ
ದಾರಿಯುದ್ದಕೂ ಎದುರುಗೊಂಡು ಮಿಡಿದಿರಿ

ನಾನಿಲ್ಲದ ಹೊತ್ತಲ್ಲಿ ಹುಡುಕಾಡಿದಿರಲ್ಲದೆ
ಇದ್ದಾಗ ಪ್ರಮುಖನೆನದೆ ಸಾಮಾನ್ಯನ ಮಾಡಿದಿರಿ
ಪಲ್ಲಕ್ಕಿಯ ಮೇಲಿಟ್ಟು ಮೆರೆಸುವ ಭ್ರಮೆಯಾಚೆ
ಪಂಜರಗಳ ಮುರಿಯುವ ಸಾಧ್ಯತೆಗಳ ತೆರೆದಿರಿ

ವಕ್ರತೆಯೂ ಕಲೆಯೆಂದು
ವಿಕೃತಿಯೂ ಕೃತಿಯೆಂದು
ಅವಸಾನವೂ ಪ್ರಕೃತಿಯ ರೂಪವೆಂದು
ಬೆರಗು ಬೇರೆಲ್ಲೂ ಇಲ್ಲ
ಬೆಳಗುವುದೇ ಅದರ ಮೂಲ
ಹಚ್ಚಿದಿರಿ ದೀಪವೊಂದ ಮನದಿ ಅಪ್ಪಿಕೊಂಡು

ತಾವರೆಗೊಳದ ಬೇರಿನ ಪರಿಚಯ ನಮ್ಮದು
ಆಗಾಗ ಮಿಂಚಿದೆವು ಪತ್ರೆ ಮೇಲೆ ಹೊರಳಿ
ನನ್ನ ಹೆಸರಿನೊಡನೆ ಕೂಡಿದ ನೆನಪು ಮೂಡುವಾಗ
ತುಟಿ ಅರಳಿಸುವ ಸಣ್ಣ ತುಣುಕು ಇಣುಕಿ ಬರಲಿ..

No comments:

Post a Comment

ಹೃದಯವ ನೀಡಲೇ

ಹೃದಯವ ನೀಡಲೇ ಹೇಳದ ಮಾತಿವೆ ನೂರಾರು ಆಲಿಸು ಈಗಲೇ ಪಾಲಿಸಿ ನಿನ್ನಯ ನೆರಳನು ಹೃದಯವ ನೀಡಲೇ ಹೊಂಗನಸ ಅಂಗಳದಿ ಅರಳಿರುವ ಚಂದಿರ ನೀ  ಯಾರಿರದ ತೀರದಲಿ ಅಲೆಗಳಲೂ ನಿನ್ನ ದನಿ  ...