Friday, 20 September 2019

ಹಾಡಾಗು, ಹಾಲ್ಗಡಲಾಗು

ಹಾಡಾಗು, ಹಾಲ್ಗಡಲಾಗು
ಮಳೆಯಾಗು, ಮಳೆಬಿಲ್ಲಾಗು
ಕಣ್ಣಾಗು, ಕಣ್ಮಣಿಯಾಗು
ನೆರಳಾಗು, ನೀ ಜೊತೆಯಾಗು
ಆಗುವುದಾದರೆ ದೇವರೇ ಆಗು ನನ್ನ ಪಾಲಿಗೆ
ಕಾತರದಲ್ಲೇ ತುಂಬಿಸು ನನ್ನ ಪ್ರೀತಿ ಜೋಳಿಗೆ     (1)

ಸಂಶಯವೊಂದು ಹೆಗಲೇರಿದರೆ
ಇರಿದೇ ಕೊಲ್ಲುವೆ ಕಣ್ಣಲ್ಲಿ
ಕಂಚಿನ ಕಂಠದಿ ಬೈಯ್ಯುವ ನಿನಗೆ
ನನ್ನ ಖುಷಿಯಲಿ ಪಾಲಿರಲಿ
ಕೊಡುವುದನ್ನೆಲ್ಲ ಇಂದೇ ಕೊಟ್ಟರೆ
ಖಾಲಿ ಆಗುವ ಭಯದಲ್ಲಿ
ಉಳಿಸಿಕೊಳ್ಳುವೆ ಚೂರು ಭಾವನೆ
ನಾಳೆ ಸಿಗುವ ನೆಪದಲ್ಲಿ

ಎಲ್ಲ ಚಿಂತೆಗೂ ಅಂಟಿಕೊಂಡು ಕೂರಬೇಡ
ತಂಟೆ ಇಲ್ಲದ ಪ್ರೀತಿ ಎಲ್ಲಿದೆ
ಎಲ್ಲ ಹುಡುಗರು ಒಂದೇ ಅಂತ ಹೇಳಬೇಡ
ಏನೂ ತೋಚದ ಜೀವ ಇಲ್ಲಿದೆ                (2)

ಹಗಲುಗನಸಲಿ ನನಗೂ ನಿನಗೂ
ನಿತ್ಯವೂ ನಡೆವುದು ಕಲ್ಯಾಣ
ಹೀಗೇ ಆದರೆ ಆಸೆಗಳೆಲ್ಲಕೂ
ಹೇಗೆ ಹಾಕಲಿ ಕಡಿವಾಣ 
ಹುರಿದುಂಬಿಸುವ ಬೆಳದಿಂಗಳಲಿ 
ಹೂ-ದುಂಬಿಗಳೇ ಆಗೋಣ
ಮೆಲ್ಲುಸಿರಿಂದ ಮೂಡೋ ಇಂಪಿಗೆ
ಸೇರಿಸು ನಿನ್ನ ಸಾಲನ್ನ 

ಲೆಕ್ಕ ಮೀರುವ ನನ್ನ ಹುಚ್ಚಾಟಗಳನು
ನಿನ್ನ ಲೆಕ್ಕಕೆ ಚುಕ್ತಾ ಮಾಡಿಕೋ
ಇಷ್ಟು ಹೇಳಲು ನನ್ನ ಮಾತನ್ನು ತಡೆದು
ಒಂದೋ ಎರಡೋ ಮುತ್ತ ನೀಡಿಕೋ..    (3)

No comments:

Post a Comment

ಹೃದಯವ ನೀಡಲೇ

ಹೃದಯವ ನೀಡಲೇ ಹೇಳದ ಮಾತಿವೆ ನೂರಾರು ಆಲಿಸು ಈಗಲೇ ಪಾಲಿಸಿ ನಿನ್ನಯ ನೆರಳನು ಹೃದಯವ ನೀಡಲೇ ಹೊಂಗನಸ ಅಂಗಳದಿ ಅರಳಿರುವ ಚಂದಿರ ನೀ  ಯಾರಿರದ ತೀರದಲಿ ಅಲೆಗಳಲೂ ನಿನ್ನ ದನಿ  ...