Thursday, 21 November 2019

ಹೊಸತನ

ಹೊಸ ಪೊರಕೆಗೆ ಮನೆಯೆಲ್ಲ ಹೂವು 
ಹೊಸ ಎಕ್ಕಡ ಕಾಲ ಕಚ್ಚಿದವು 
ಹೊಸ ಮಡಿಕೆಯ ನೀರು ನೀರಸ 
ಹೊಸ ಒಲೆಗೆ ಸೌದೆ ಪಾಯಸ 
ಹೊಸ ಪಾತ್ರೆಯೂ ತಳ ಹಿಡಿಯಿತು 
ಹೊಸ ಮನೆಯಲೂ ಕಸ ಹೊಕ್ಕಿತು 

ಹೊಸ ಅಕ್ಕಿ ಮುದ್ದೆ ಕಟ್ಟಿತು 
ಕೆಂಪು ರಾಗಿ ಗಂಟು ಬಿಗಿಯಿತು
ಹೊಸ ಬಣ್ಣ ಬಳಿದ ಗೋಡೆಗೆ 
ಹಳೆ ಕನ್ನಡಿ ಜೋತುಕೊಂಡಿತು 
ಹೊಸ ಜೋಡಿಗೆ ಮರದ ಬಾಗಿಲು 
ಹಳೆ ಸೇರು ಹೊಸ್ತಿಲಾಯಿತು  

ಹೊಸ ಬೆಳಕು ಛಾಯೆ ಮೂಡಲು 
ಹೊಸ ಋಜುವು ಕನಸ ಕಾಣಲು 
ಹೊಸ ನಾಳೆಗೆ ಅದೇ ಕಣ್ಣು 
ಹೊಸತನವನು ಪಸರೋ ಮಣ್ಣು 
ಹಳೆ ಕಿಸೆಯಲಿ ಹೊಸ ಕಾಸು 
ಹಳೆ ಕಾಸಿಗೆ ಹೊಸ ಅಂಗಿ 

ಹಳೆ ಪದ್ಯಕೆ ಹೊಸ ರಾಗ 
ಹಳೆ ಹಕ್ಕಿಗೆ ಹೊಸ ಚಿಗುರು 
ದಾರಿ ತಿರುವಲಿ ಹೊಸ ಪರಿಚಯ 
ಹೊಸ ಒಲವು ಪ್ರತಿ ಸಲವೂ 
ಕೈ ತುತ್ತಿಗೆ ರುಚಿ ಇಮ್ಮಡಿ 
ಹುಸಿ ತೇಗು, ಹೊಸ ಹಸಿವು 

ಕಸಿಗೊಂಡರೆ ಹೊಸ ಮೊಗ್ಗು 
ಪಕಳೆ ಕೆನ್ನೆಗೆ ಹೊಸ ಸಿಗ್ಗು 
ಮುತ್ತು ಹಳೆಯದು ಮತ್ತು ಹೊಸತು 
ನಲ್ಮೆ ಬಾಳ್ಮೆಗೆ ಒಲಿದ ಸ್ವತ್ತು 
ಮಮತೆ, ಕರುಣೆ ಒಲುಮೆ ರೂಪ 
ನುರಿತ ಸಮಯಕೆ ನಾಳೆ ಹೊಸತು.... 

No comments:

Post a Comment

ಹೃದಯವ ನೀಡಲೇ

ಹೃದಯವ ನೀಡಲೇ ಹೇಳದ ಮಾತಿವೆ ನೂರಾರು ಆಲಿಸು ಈಗಲೇ ಪಾಲಿಸಿ ನಿನ್ನಯ ನೆರಳನು ಹೃದಯವ ನೀಡಲೇ ಹೊಂಗನಸ ಅಂಗಳದಿ ಅರಳಿರುವ ಚಂದಿರ ನೀ  ಯಾರಿರದ ತೀರದಲಿ ಅಲೆಗಳಲೂ ನಿನ್ನ ದನಿ  ...