Friday, 8 November 2019

ಬರೆದು ಕೆಟ್ಟವರದೆಷ್ಟೋ ....

ಪೋಣಿಸಿ ಅರೆಬೆಂದ ಪದ್ಯ
ನಿನ್ನ ಓದಿಗೆ ಕೊಟ್ಟೆ 
ನೀನೋ ಗೀಚುಹೊತ್ತಿಗೆ ಕಸಿದು 
ಒಡೆದ ಸಾಲುಗಳನ್ನು ಮರು ಜೋಡಿಸಿಕೊಂಡು 
ನಿನಗೆ ತೋಚಿದ ಹಾಗೆ ಅರ್ಥ ಕಲ್ಪಿಸಿಕೊಂಡೆ 

"ವ್ಯರ್ಥ ಸಮಯ ಏಳು ಕತ್ತಲಾಯಿತು" 
ದೀಪ ಹೊನಲಿಗೆ ನಿನ್ನ ನೆರಳು ಉತ್ತರಿಸಿತು 
"ನನ್ನ ಕಲ್ಪಿಸಿಕೊಂಡವನ ಕಲ್ಪನೆಯ ಸುತ್ತ 
ನನ್ನ ಮೀರಿದ ವ್ಯಾಪ್ತಿಯಾಳ ಅರಿವಾಯಿತು!"

ಅನುಮಾನ ಎಲ್ಲೆಲ್ಲೂ, ಒಮ್ಮೊಮ್ಮೆ ಹಿಗ್ಗು 
ಇನ್ನೆಲ್ಲೋ ತೋಚದೆ ಸಂಕೋಚ, ಸಿಗ್ಗು 
ಏನೋ ಗೊಂದಲ, ಪ್ರಶ್ನೆಗಳ ಗದ್ದಲ 
ಕಣ್ಣ ಬಾಷ್ಪಗಳೆಲ್ಲಕೂ ಸಮಾನ ಉತ್ತರ 

ಮೊನಚಿನ ಮೊಂಡು ಹಿಡಿ ಬಿಗಿದು 
ಝಳಪಿಸಿದಂತೆ ಕಣ್ಣ ಪ್ರಭೆಗೆ 
ದಿಗ್ಭ್ರಮೆಗೊಂಡು ನಿದ್ದೆ ಬರದಿರಲು 
ಗಂಟಲೊಣಗಿ ಭಯವ ನುಂಗಿಕೊಂಡೆ 

ಖಾಲಿ ಬಿಟ್ಟ ಪುಟಗಳಿಗಿಂತ 
ಹರಿದು ಗೊಬ್ಬರವಾದವುಗಳೇ ಲೇಸು 
ಇತ್ತ ಏದುಸಿರು ಬಿಡುತ್ತ 
ನನ್ನತ್ತ ದಿಟ್ಟಿಸುತ್ತಿವೆ ಒತ್ತ(ಡ)ಕ್ಷರಗಳು  

ಪದ್ಯ ಬಿಡಿಸಿ ಹೇಳಲಾಗದು 
ಹಾಗೆಂದು ಕಟ್ಟಿ ಹಾಕಲೂ ಕೂಡದು 
ಕೆಟ್ಟು ಬರೆದವರೆಷ್ಟು ಮಂದಿಯೋ 
ಬರೆದು ಕೆಟ್ಟವರದೆಷ್ಟೋ .... 

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...