ಕಳೆದು ಹೋದ ನೆನ್ನೆಗೆ
ನಾಳೆಯ ಬಲಿ ಕೊಡುವುದೇ?
ಸರಿದು ಹೋದ ಕ್ಷಣಗಳು
ನೆನಪು ತಾಳಿವೆ ಮರೆಯದೆ
ಹಾಡಬೇಕೆಂಬ ಬಯಕೆಗೆ
ಬೇಡಿ ಹಾಕಲು ಏತಕೆ?
ಹಾಳೆ ಹರಿದರೆ ಹೊರಳಿಸಿ
ಓದು ಬದುಕನು ಮುಂದಕೆ..
ಎಲ್ಲೋ ಗೂಡ ಕಟ್ಟುವ ಹಕ್ಕಿ
ಇನ್ನೆಲ್ಲೋ ಗುಟುಕ ಅರಸಿದಂತೆ
ಹಗಲು ಕನಸು ಕಾಣೋ ಚುಕ್ಕಿ
ರಾತ್ರಿ ವೇಳೆ ಮಿನುಗುವಂತೆ
ನಿನಗೂ ಒಂದು ಕಾಲ ಬಂದೇ ಬರುವುದು
ಅರಿವು ನಿಂತ ನೀರು ಆಗಲೇ ಬಾರದು
ನಿನಗೆ ನೀನೇ ಬೇಲಿ ಹಾಕೋ
ಹುಚ್ಚು ಕವಿಯೋ ಮುನ್ನ ಬೇಗ
ಎಚ್ಚರವಾಗು.. ಕನಸುಗಳು ಕಮರಿ ಹೊಗದಂತೆ..
ಕವಲು ದಾರಿ ಎದುರಾದರೇನು
ಗುರಿಯತ್ತ ಗಮನ ಹರಿಸು ನೀನು
ಎಡವಿ ಬೀಳುತ ಕಲಿತ ಪಾಠ
ತರುವ ಆತ್ಮವಿಶ್ವಾಸವನ್ನು
ಗಳಿಸು ಹಂಚುವಂತೆ ಎಲ್ಲವ ಎಲ್ಲೆಡೆ
ನಗುವೇ ನಿನ್ನ ಸ್ವಂತ ಸವಿದು ಮುನ್ನಡೆ
ತಿರುವು-ಮರುವು ದಾಟಿದಂತೆ
ಗೆಲುವು ಎದುರು ನೋಡುವಂತೆ
ಸಾಗರವಾಗು... ಅಲೆಗಳೆ ಒಲಿದ ಚಪ್ಪಾಳೆಯಂತೆ...
No comments:
Post a Comment