ಕೊನೆಯ ತುತ್ತು ಬೇಡವೆಂದಾಗ
ಕರಿಬೇವಿನ ಜೊತೆ ಉಣಿಸಿದ ಕೈ
ಆಟದಲ್ಲಿ ಬಿದ್ದು ಗಾಯಗೊಂಡಾಗ
ಸೋತ ಬೆನ್ನ ನೀವಿದ ಕೈ
ಅಂಜಿದ ಇರುಳಿಗೆ ಬೆಳಕಿನ ಅಂಬಲಿ
ರಕ್ಷೆಯ ಕಂಬಳಿ ಹೊದಿಸಿದ ಕೈ
ನಡು ನೀರಲಿ ಈಜಲು ಕಲಿಸಿ
ಖಾಲಿ ಕಿಸೆಯನು ಹೊರೆಸಿದ ಕೈ
ಒಲ್ಲದ ಬದುಕಿನ ಬಾಗಿಲ ತೆರೆಸಿ
ಸಾಕ್ಷ್ಯ ರೂಪವ ಬಿಡಿಸಿದ ಕೈ
ಬಸಿದ ಕನಸಿಗೆ ಕರಗಿದ ಕಣ್ಣಿಗೆ
ಬೊಗಸೆ ಒಡ್ಡಿದ ಕರುಣೆಯ ಕೈ
ಆತ್ಮದ ತತ್ವದ ಸತ್ವವ ಸಾರಿ
ಬಿಂಬವ ಬೀರಿದ ಕನ್ನಡಿ ಕೈ
ನಿಲ್ಲದ ಕಾಲವ ನವೀಕರಿಸಿ
ಕಾಲಾನುಸಾರ ನಡೆಸಿದ ಕೈ
ಬೆಳೆಗೂ ಕಳೆಗೂ ಕುಡುಗೋಲಿಗೂ
ಕಡಿವಾಣದ ಪಾಠವ ಕಲಿಸಿದ ಕೈ
ಹೊತ್ತಿದ ಉರಿಗೆ ಮೆತ್ತಿದ ಮಸಿಯಲಿ
ಚಿತ್ತಾರವನು ಬಿಡಿಸಿದ ಕೈ
ನಿರ್ದಯಿ ದೇವರ ಮಾಡಲು ಕೈ
ನಿರ್ಮಲ ರಕ್ಕಸಳಾಗಲೂ ಸೈ
ಬಳೆಗಾರನ ಬೆಲೆಬಾಳುವ ಕೈ
ಬಲಹೀನನ ಬಲವರ್ಧನ ಕೈ
No comments:
Post a Comment