Friday, 29 November 2019

ನನ್ನ ದೇವರು ನೀನು..ನಿನ್ನ ದೇವರ ಹುಡುಕು

ದಿನಗಳುರುಳಿ ದುರುಳ ರಾತ್ರಿಗಳು
ಹೊದ್ದ ಕಂಬಳಿಯೊಳಗೆ ಹೆಗ್ಗಣಗಳಂತೆ
ಮೈಯ್ಯೆಲ್ಲ ಪರಚಿ ಗಾಯವಾಗಿಸಿವೆ.
ಹತೋಟಿಗೆ ಸಿಗದ ಕನಸೊಂದರ ನೆರಳು
ಕಣ್ಣಿಗೆ ಕಟ್ಟಿದಂತೆ ಪಸೆಯ ಗುರುತು..
ಸೂಜಿಯಾಕಾರದ ಬಿಸಿಲು ಚಪ್ಪರ ಸೀಳಿ
ಮೀಟಿ ಎಚ್ಚರವಾದಾಗ
ನಿಜ ಲೋಕವೂ ಸಜೆಯೊಂದಿಗೆ ಸಜ್ಜಾಗಿತ್ತು

ಅಮಾನುಷ ದಾರಿಯಲ್ಲಿ ಸಾಗಿ
ಗುಡಿ ತಲುಪಿ ಕೈ ಮುಗಿವಷ್ಟರಲ್ಲಿ
ದೇವರು ತಮಾಷೆಯಂತೆಯೂ
ಹೂವು ಕುರೂಪವಾಗಿಯೂ ಕಂಡು
ನಾಸ್ತಿಕರ ಗುಂಪಲ್ಲಿ ಭಜನೆಗೆ ಕೂತೆ..
ಅಸಲಿಗೆ ಇಲ್ಲವೆಂಬಲ್ಲೇ ಹೆಚ್ಚು
ಇರುವನೆಂಬಲ್ಲಿ ಕಡಿಮೆ ಕಾಲ ಕಳೆವನಂತೆ..
ಊರಾಚೆ ನೆಟ್ಟ ಕಲ್ಲಿನ ಸೊಲ್ಲು

ರಾಕ್ಷಸನ ಅಂಗರಕ್ಷಕನ ಶತ್ರು ಯಾರು?
ಹಸಿದವರ ಪಾಲಿನ ದೇವರಾರು?
ರೂಪ ತಾಳುವ ಭ್ರಮೆಗಳ ಉಪಮೆಗೆ
ರುಚಿಗಿಷ್ಟು ಉಪ್ಪು ಸಿಕ್ಕಂತೆ ಏಕಾಂತ,
ಯಾವ ದಡ ತಲುಪಿಸುವುದೋ..
ಅಲೆಗಳಿಗೂ ಕಾಡಿದ ಪ್ರಶ್ನೆ!
ದೂರ ತೀರದ ನೀರವ ನೊಗಕೆ
ಜೋಡಿಯಾಗಲೊರಟಂತೆ ಸುಳುವು?

ಎಲ್ಲ ಇದ್ದವರಿಗಿಲ್ಲದಿರದವುಗಳ ಚಿಂತೆ
ಏನೂ ಇಲ್ಲದವರಲ್ಲಿ ಎಲ್ಲವೂ ಇದ್ದಂತೆ
ನಿನ್ನ ಕಿಸೆಯಿಂದ ನಾ ಕದ್ದ ನಿದ್ದೆಗೆ
ಬದಲಿ ನನ್ನ ಭ್ರಮೆಗಳ ಭಾರ ಹೊರೆಸುವೆ
ಆದರೆ ಸಹಿಸು, ಅಥವ ಮುಂದೆ ದಾಟಿಸು
ನನ್ನ ದೇವರು ನೀನು..
ನಿನ್ನ ದೇವರ ಹುಡುಕು..

No comments:

Post a Comment

ಈ ಬಿರು ಬಿಸಿಲಲ್ಲೂ ಕಂಗೊಳಿಸುವೆಯಲ್ಲ

ಈ ಬಿರು ಬಿಸಿಲಲ್ಲೂ ಕಂಗೊಳಿಸುವೆಯಲ್ಲ ನೀ ಖಂಡಿತ ಈ ಗ್ರಹದವಳಲ್ಲ ನಕ್ಷತ್ರಗಳ ಊರು? ಬಂಗಾರದ ಸೂರು? ಅಷ್ಟಲ್ಲದೆ ನಿನ್ನ ಹಾಗೆ ಕಾಣುವವರಿಲ್ಲ ಆಗೋ ಆ ಹಣೆಯಲ್ಲಿ ಬೆವರು ಜಿನು...