Monday, 23 December 2019

ದಿನಕೊಂದು ಕಥೆಯಂತೆ ಎಷ್ಟಾಗಿರಬಹುದು?

ದಿನಕೊಂದು ಕಥೆಯಂತೆ ಎಷ್ಟಾಗಿರಬಹುದು?
ಲೆಕ್ಕವೇ ಇಲ್ಲ ಮಂಪರಿನ ಸಹಚಾರಿ 
ಒಂದು ಕಾಡು, ಒಬ್ಬ ರಾಜ, ಒಂಟಿ ಮುದುಕಿ 
ಹೀಗೆ, ಒಂದೊಂದೇ ಕೂಡಿ ನೂರಾರು ಪಾತ್ರ 

ಥಟ್ಟನೆ ಆ ರಾತ್ರಿ ಯಾವುದೋ ಕಥೆಗೆ 
ನೀ ಪಟ್ಟು ಹಿಡಿದಿದ್ದೆ, ನೆನಪಾಗಲಿಲ್ಲ 
ನೆಪಕೊಂದು ಉಪಕಥೆ ಕೊಡಲಿಲ್ಲ ಹಿತವ 
ನಿನ್ನ ವ್ಯಥೆಗೆ ಎದೆ ಬಿರಿದದ್ದು ಸುಳ್ಳಲ್ಲ 

ಹೇಳುತ್ತಾ ಹೋದಂತೆ ಮಾಳಿಗೆಗೆ ನೆಟ್ಟ 
ಕಣ್ಣುಗಳು ಬೆರಗಾಗಿ ಊಹಿಸಿದವೇನೇನೋ 
ಕಲ್ಪನೆಯ ಸೂರಿನಡಿ ಸೃಷ್ಟಿಸಿದ ಚಿತ್ತಾರ 
ಕಾಡದೆ ಬಿಡಲಿಲ್ಲ ನಿನ್ನೊಡನೆ ನನ್ನನ್ನೂ 

ರೆಪ್ಪೆ ಮುಚ್ಚಿದೆಯೆಂದು ನಿಲ್ಲುವಂತಿಲ್ಲ 
ಮುಂದುವರಿಸದೆ ನಿದ್ದೆ ಮೂಡುವಂತಿಲ್ಲ 
ಕಂಪಿಸುವೆ ಅರೆಕ್ಷಣ ತಂಪಿನಲೂ ಬೆವರುತ 
ಬಿಟ್ಟಲ್ಲಿಂದಲೇ ಮತ್ತೆ ಶುರು ಮಾಡುವೆ 

ಏಕಮುಖವಾಗಿತ್ತು ಭಾವಗಳ ವಿಲೇವಾರಿ
ಈಗ ನನ್ನ ಪದಕೆ ನಿನ್ನ ದ್ವಿರುಕ್ತಿ 
ಎಚ್ಚರವಹಿಸುವ ಇರುಳಲಿ ಇಬ್ಬರಲೂ 
ಒಂದೇ ಕನಸನು ಕಾಣುವ ಶಕ್ತಿ....  

No comments:

Post a Comment

ಹೃದಯವ ನೀಡಲೇ

ಹೃದಯವ ನೀಡಲೇ ಹೇಳದ ಮಾತಿವೆ ನೂರಾರು ಆಲಿಸು ಈಗಲೇ ಪಾಲಿಸಿ ನಿನ್ನಯ ನೆರಳನು ಹೃದಯವ ನೀಡಲೇ ಹೊಂಗನಸ ಅಂಗಳದಿ ಅರಳಿರುವ ಚಂದಿರ ನೀ  ಯಾರಿರದ ತೀರದಲಿ ಅಲೆಗಳಲೂ ನಿನ್ನ ದನಿ  ...