Friday 13 December 2019

ಮರ ಕಡಿವಾಗ ದೂರವಿರಿ

ಮರ ಕಡಿವಾಗ ದೂರವಿರಿ
ಕಾರು, ಬೈಕು ಇತ್ಯಾದಿಗಳ ದೂರವಿಡಿ
ಮಲಗಿರುವವರ ಕೂಗಿ ಎಚ್ಚರಿಸಿ
ಕಡಿವವ ತನ್ನ ಕರ್ತವ್ಯ ನಿಭಾಯಿಸುತ್ತಾನೆ
ಅಸಂಬದ್ಧ ಪ್ರಶ್ನೆ ಕೇಳಿ ಕೆಣಕದಿರಿ
ಸಾಕು ನಾಯಿಗಳು, ಬೀದಿ ನಾಯಿಗಳು
ಅತ್ತ ಸುಳಿಯದಂತೆ ನೋಡಿಕೊಳ್ಳಿ
ಕರೆಂಟು ತೆಗೆಯಬಹುದು
ಎಲ್ಲಕ್ಕೂ ಮುಂಚೆಯೇ ಪ್ರಿಪೇರಾಗಿ
ಕಡಿವಾಗ ಚಕ್ಕೆಗಳು ಚಿಮ್ಮಿ
ಕಣ್ಣು ಘಾಸಿಗೊಳ್ಳಬಹುದು, ಎಚ್ಚರ ವಹಿಸಿ
ಆ ಮರದ ಜೊತೆಗೆ
ನಿಮ್ಮ ನಿಮ್ಮ ಕೆತ್ತನೆಯ ಪ್ರೇಮ ಗುರುತುಗಳು
ಇಂದಿಗೆ ಸಮಾಧಿಯಾಗುತ್ತವೆ
ಒಂದು ಫೋಟೋ ತೆಗೆದಿಟ್ಟುಕೊಳ್ಳಿ
ಉಯ್ಯಾಲೆಯ ಹಗ್ಗದ ಗುರುತು
ಗಾಯದ ಗಂಟಿನಂತೆ ಉಳಿದಿತ್ತು
ಸಾಧ್ಯವಾದರೆ ಒಮ್ಮೆ ಮರವೇರಿ ಕಂಡು ಬನ್ನಿ
ಎಷ್ಟೋ ಸಲ ಪಿಕ್ಕೆಗೆ ಗುರಿಯಾಗಿದ್ದಿರಿ
ಆಗ ಹಿಡಿ ಶಾಪ ಕೊಟ್ಟಿದ್ದಿರಿ
ಶರತ್ಕಾಲದಲ್ಲಿ ಎಲೆಗಳುದುರಿ
ಸಾರಿಸಿದ ಮನೆಯಂಗಳವ ಛೇಡಿಸಿತ್ತು
ಹೋದರೆ ಹೋಗಲಿ ಕ್ಷಮಿಸಿ ಬಿಡಿ
ನೆನೆಪಿಗೆ ಒಂದು ರಂಗೋಲಿ ಬಿಡಿಸಿ
ಗೂಡು ಕಟ್ಟಿದ್ದ ಹಕ್ಕಿಗಳು
ಬಾಡಿಗೆ ವಸತಿಗೆ ನಿಮ್ಮ ಛಾವಣಿಗೆರಗಬಹುದು
ಸಜ್ಜ ಸಾಲಿಗೆ ಮುಳ್ಳ ನೆಡಿ
ಸಿನ್ಟೆಕ್ಸಿನ ಮುಚ್ಚಳ ಬಿಗಿಗೊಳಿಸಿ
ಒಣ ಹಾಕಿದ ಸಂಡಿಗೆಗೆ ಕಾವಲಿರಿ
ಅಥವಾ ತಗಡಿನ ಡಬ್ಬಿ ಬಾರಿಸುತ ಕೂರಿ
ಮರ ಕಡಿದು ಹೋದವರು
ಬೇರೊಂದು ಮರದ ಕೆಳಗೆ ವಿರಮಿಸಿರುತ್ತಾರೆ
ಒಂದು ಚೊಂಬು ನೀರು ಕೊಟ್ಟು ಕೇಳಿ
ಸ್ವಾಮಿ ಕರೆಂಟು ಇವತ್ತೇ ಬರುತ್ತಾ?
ನೆಕ್ಸ್ಟು ಯಾವ್ ಮರ ಕಡಿತೀರಿ? ವಗೈರೆ .. ವಗೈರೆ ..
ಯಾವುದೋ ದೇಶದ ಕಾಡ್ಗಿಚ್ಚು
ನಮ್ಮ ದೇಶದತ್ತ ಹಬ್ಬುವ ಟಿ.ವಿ ಸುದ್ದಿಗೆ
ವಿಚಲಿತರಾಗುತ್ತಾ ಊಟ ಮುಗಿಸಿ
ಮದ್ದು-ಮಾತ್ರೆ ನುಂಗಿ
ಎಚ್ಚರವಿರದೆ ನಿದ್ದೆಗೆ ಜಾರಿ
ಬೆಳಿಗ್ಗೆ ತಿಂಡಿ ಕಾಫಿ ಮುಗಿಸಿ
ಇಸ್ತ್ರಿ ಮಾಡಿದ ಬಟ್ಟೆ ತೊಟ್ಟು
ಗಾಡಿ ಏರಿ, ಹೆಲ್ಮೆಟ್ ಏರಿಸುವ ಮುನ್ನ
ಮಾಸ್ಕ್ ಧರಿಸಿ ಆಫೀಸ್ಗೆ ಹೊರಡಿ
ಬೆಂಗ್ಳೂರ್ ತುಂಬ ಹೊಗೆಯೋ ಹೊಗೆ....

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...