Monday, 23 December 2019

ಗಡಿಗೆಯ ಸದ್ದಲ್ಲಿ ತುಂಬಿರದ ದುಃಖವಿದೆ

ಗಡಿಗೆಯ ಸದ್ದಲ್ಲಿ ತುಂಬಿರದ ದುಃಖವಿದೆ
ತುಂಬಿಯೇ ಇದ್ದರದು ಅಳುತಿರಲಿಲ್ಲ
ಒಂದೊಂದೇ ಹನಿ ಕೂಡಿ ತುಂಬೋದು ಸಹಜನೆ
ಕೂಡಿ ಬಾಳೋಕಲ್ಲಿ ಮನಸಿರಲಿಲ್ಲ
ತಂಬೂರಿ ಮೀಟುವ ಬೆರಳಿಗೆ ಮುನಿಸಂತೆ
ತಂತಿಗೂ ಬೆರಳಿಗೂ ಸರಿ ಹೊಂದಲ್ಲ
ಸ್ವರವೊಂದು ಒಲಿದಾಗ ಹಾಡೊಂದು ಚಿಗುರೀತು
ಪದಕಿನ್ನೂ ಪರದಾಟ ಮುಗಿದಂಗಿಲ್ಲ.. ಜಂಗಮನು ಇನ್ನೂ ಎಚ್ಚರವಾಗಿಲ್ಲ..
ಇರುವಂತೆ ಇರುವೆವು ಬಂದಂತೆ ನಡೆದೇವು
ಇರಿಸು-ಮುರಿಸು ಮರೆತು ಬೆರೆತೋರಲ್ಲ
ಇರುಳ ದಾಟಿ ನಾಳೆ ಬರುವಂತೆ ಹೊಸತನ್ನ
ಬೆರಗಾಗಿ ಕಾಣೋಕೂ ಪುರುಸೊತ್ತಿಲ್ಲ
ಮುಳ್ಳಿರೋ ಗಡಿಯಾರ ಗೋಡೆಗೆ ತಗಲಾಕಿ
ಸಮಯಕ್ಕೆ ಸರಿಯಾಗಿ ನಡೆದೋರಲ್ಲ
ಕಲ್ಲ ಕೆತ್ತಿ ಎಲ್ಲ ಅದರ ತಲೆಗೆ ಹೊರೆಸಿ
ನಮ್ದೇನೂ ನಡಿಯೊಲ್ಲ ಅಂತೀವಲ್ಲ.. ಇದ್ರೆ ಆ ದೇವ್ರಾದ್ರೂ ನಗುತಾನಲ್ಲ...
ಬತ್ತದ ಗದ್ದೆಲಿ ಗುದ್ದಾಡಿ ಗೆದ್ದೋನು
ಬಿತ್ತಿ ಬೆಳೆದಾಗಷ್ಟೇ ಸತ್ಯ ಮಾತು
ನಾವೇನೇ ಅಂದ್ಕೊಂಡ್ರೂ ಆಗೋದೇ ಆಗೋದು
ಸೋಲು ಗೆಲುವು ಎರಡೂ ಬಾಳ ಸೇತು
ನನ್ನಂತೆ ನೀನಿಲ್ಲ , ನಿನ್ನಂತೆ ಅವನಿಲ್ಲ
ಅವನಿಗೆ ನಾನ್ಯಾರೋ ಗೊತ್ತೇ ಇಲ್ಲ
ಹುಟ್ಟು ಸಾವಿನ ಪಾಠ ಹೇಳೋ ಹಣ್ಣೆಲೆಯನ್ನ
ಒಪ್ಪುವ ಗುಣ ಮನುಜ ಕಲಿತೇ ಇಲ್ಲ.. ಅರಿತೋನಿಗರಿವೇನೇ ಖುಷಿಯ ಮೂಲ...

**ಹಾಡು**

https://soundcloud.com/bharath-m-venkataswamy/izgfwgl4b9cx

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...