Thursday, 19 December 2019

ಬಾ ಕೋಗಿಲೆ ಮಾತಾಡುವ

ಬಾ ಕೋಗಿಲೆ ಮಾತಾಡುವ
ತಾಯೊಬ್ಬಳು ಅಳುತ್ತಿರುವಾಗ ಹಾಡುವುದಾ?
ಬಾ ಮಾತಾಡುವ
ಅವಳ ನೋವ ಪರಿಹರಿಸುವ ಬಗ್ಗೆ
ದುಃಖ ಸಾಗರಕೆ ಎರಗಿ
ಅಂತರಾಳದ ಗುದ್ದಾಟವ ಅರಿತು
ಹೊತ್ತು ಮೀರುತ ಮಾತಾಡುವ



ಏನೆಂದು ಕೇಳಿದರೆ ಸುಳ್ಳಾಡುವಳು
ಮಾತಲ್ಲಿ ತಡೆದಿಟ್ಟ ಸಂಕಟ
ಕಣ್ಣಲ್ಲಿ ಉಮ್ಮಳಿಸಿದಾಗ ನಿತ್ರಾಣಳಾಗಿ
ಕುಸಿದು ಬಿದ್ದಾಗ ಮೇಲೆತ್ತುವ ಬಗ್ಗೆ
ಬಿಗಿದಿಟ್ಟ ಉಸಿರನ್ನು ತಿಳಿಗೊಳಿಸೋ ಬಗ್ಗೆ
ಮಾತಾಡುವ ಬಾ

ಒಲೆಯ ಕಿಡಿ ಹಾರಿ ಹಣೆ ಸುಟ್ಟಾಗ
ಹಿಟ್ಟು ತೊಳಸುತ ಕೈ ಬೊಬ್ಬೆ ಹೊಡೆದಾಗ
ಬಚ್ಚಲ ಸಾರಿಸಿ ಪಾದ ಬಿರಿದಾಗ
ಹಬ್ಬದ ಸೀರೆ ಬಣ್ಣ ಬಿಟ್ಟಾಗಲೂ
ಇಷ್ಟು ನೊಂದಿರಲಿಲ್ಲ ಈಕೆ

ಇದ್ದ ಮನೆಯ ಕಷ್ಟ ದಿಬ್ಬಗಳ ಹೊತ್ತು
ಬಿದ್ದ ಕಂದನ ತರಚು ಗಾಯವ ಮರೆತು
ನೆರೆಹೊರೆಯವರ ಕೊಂಕು
ಕೈ ಹಿಡಿದವನ ಚಟಕೂ
ಚಿಟಿಕೆಯಲಿ ಪರಿಹಾರ ಹುಡುಕಿದ ಈಕೆ
ಅಳುವುದೆಂದರೆ ಹೇಗೆ?

ಮೂಖಿಯಾದಳು ದೂರಲು ಯಾರೊಬ್ಬರನ್ನೂ
ಬಾಕಿ ಏನೇ ಇರಲಿ ಅವಳಂತೆ ತಾನು
ಸಹಜವಾಗಿ ನಗುವ ನಟನಾ ಪ್ರವೀಣೆ
ಒಗ್ಗರಣೆ ಡಬ್ಬಿಯೇ ಉತ್ತಮ ಉಪಮೆ
ಯಾರನ್ನೂ ಬಾಧಿಸದ ಈಕೆ
ಮರುಗುತಿಹಳೆಂದರೆ ಹೇಗೆ?

ಹಸಿದಾಗ ಘರ್ಜಿಸಿದ ಕೋಣೆಯಲಿ
ಮುನಿದು ಯುದ್ಧವಗೈದ ಅಂಗಳದಲಿ
ಪಟ್ಟವೇರಿ ಮೆರೆದ ಕೋಟೆಯಲಿ
ಪಟ್ಟು ಹಿಡಿದು ಗೆದ್ದ ರಂಗದಲ್ಲಿ
ದಿಟ್ಟವಾಗಿ ಬೆಳೆದ ಮಣ್ಣಿನಲಿ
ಥಟ್ಟನೆ ಮನಸಾಗೋ ಸ್ವರ್ಗದಲಿ
ಸೂಜಿಯಂಚಿನಷ್ಟು ಘಾಸಿಯಾದರೆ
ಶಿಖರಕ್ಕೆ ಏಕಿಷ್ಟು ಶೋಕವೆಂಬ
ಒಗಟನ್ನು ಬಿಡಿಸೋಕೆ ಉಪಕರಿಸು ಬಾ

ಮೌನ ಬಿಡು ಕೋಗಿಲೆ
ಮಾತನಾಡು ಈಗಲೆ
ಶಕ್ತಿ ಮಾತೆ ಮಡಿಲಿಗೆ
ಧಾವಿಸ ಬೇಕು ಕೂಡಲೆ.....

No comments:

Post a Comment

ದೂರದಲ್ಲಿ ಯಾರೋ ನನ್ನ ಕೂಗಿದಂತಿದೆ

ದೂರದಲ್ಲಿ ಯಾರೋ ನನ್ನ ಕೂಗಿದಂತಿದೆ  ಹತ್ತಿರದಲ್ಲಿ ಬಂದು ಕೂತುಕೊಂಡ ಹಾಗಿದೆ  ಯಾವ ಮಾತಿಲ್ಲದೆ, ಮೌನವೇ ಸಾಗಿದೆ  ಹೋಗಿ ಬಂದು ನಿಲ್ಲಲಿಲ್ಲ  ಎಚ್ಚರಿಸಿ ಕೇಳಲಿಲ್ಲ ನನ್ನಂತ...