Tuesday, 12 August 2025

ಮರೆತು ಬಿಡು ಮಗನೇ

ಮರೆತು ಬಿಡು ಮಗನೇ

ಅಪ್ಪನ ಪೆಟ್ಟನ್ನು
ಮರೆಸಿಡು ತಾ ಬಿಟ್ಟ
ಬೆರಳಿನ ಅಚ್ಚನ್ನು

ಯಾರಿಗೂ ಅರ್ಥವಾಗದ ನೀನು
ನನಗೂ ಅರ್ಥವಾಗಿಲ್ಲವೆಂದರೆ
ತಪ್ಪು ನನ್ನದೇ ಕಂದ
ತಪ್ಪಾಯ್ತು ನನ್ನಿಂದ

ನಿನ್ನ ವಯಸ್ಸಿಗೆ
ಸರಿದೂಗುತ್ತಿಲ್ಲ ನನ್ನ ಜಾಣ್ಮೆ
ನಿನ್ನ ಹುಮ್ಮಸಿಗೆ
ತಾಳೆಯಾಗುತ್ತಿಲ್ಲ ನನ್ನ ತಾಳ್ಮೆ

ಯಾವ ತುಂಟತನ ನನ್ನ ಹಿಗ್ಗಿಸಿತ್ತೋ
ಅದು ತಲೆ ತಗ್ಗಿಸೀತು ಎಂದು ಭ್ರಮಿಸಿ
ನೆರೆದವರು ಎಲ್ಲಿ ಚಿವುಟುವರೋ ಎಂದು
ಎಲ್ಲಕೂ ಮುನ್ನ ನಾನೇ ಥಳಿಸಿದೆ

ನೀನಿಲ್ಲದೆ ಮನೆ ಬಿಕೋ ಅನ್ನುವುದು
ಚೀರಾಟಕೆ ಮಾತ್ರ ಏಕೆ ಸಿಟ್ಟು ಬರುವುದು?
ಲೋಪ ನನ್ನಲ್ಲೇ ಇದೆ ನಿಜ
ನೀ ನನಗೆಂದೂ ನಿಲುಕದ ಕ್ಷಿತಿಜ

ಎಲ್ಲ ನಡೆದ ಮರು ನಿಮಿಷ
ಏನೂ ಆಗಿಲ್ಲವೆಂಬಂತೆ ನನ್ನ ತಬ್ಬಿದೆ
ನನ್ನ ಅಹಂ ಪಾತಾಳಕ್ಕೆ ಕುಗ್ಗಿದೆ
ಎದೆ ಭಾರವಾಗಿ ತಗ್ಗಿದೆ

ನೀನೂ ನನ್ನಂತೆ ಒಳಗೊಳಗೇ ಚೂರಾಗಿ
ಮತ್ತೆ ಜೋಡಣೆಗೊಂಡ ಪಟವಾದೆಯಾ?
ಮೆತ್ತಿದರೆ ಸಹಜತೆಗೆ ಹತ್ತಿರವಾಗದು ನಿಜ
ವಿರೂಪದಲೂ ಸ್ವರೂಪವ ಕಂಡುಕೊಂಡೆಯಾ?

ಕನ್ನಡಿಯ ಎದುರಲ್ಲಿ ನಿಂತಾಗಲೆಲ್ಲ
ಕಣ್ಣೀರು ತರಿಸಿದ ಆ ಕರಾಳ ನೆನಪು
ಕ್ಷಮೆಯಿಲ್ಲದ ತಪ್ಪು ಆಗಿದೆ ನನ್ನಿಂದ
ಕಷ್ಟವಾದರೂ ಸರಿಯೇ, ನನಗೆ ಶಿಕ್ಷೆ ವಿಧಿಸು!

No comments:

Post a Comment

ಹೃದಯವ ನೀಡಲೇ

ಹೃದಯವ ನೀಡಲೇ ಹೇಳದ ಮಾತಿವೆ ನೂರಾರು ಆಲಿಸು ಈಗಲೇ ಪಾಲಿಸಿ ನಿನ್ನಯ ನೆರಳನು ಹೃದಯವ ನೀಡಲೇ ಹೊಂಗನಸ ಅಂಗಳದಿ ಅರಳಿರುವ ಚಂದಿರ ನೀ  ಯಾರಿರದ ತೀರದಲಿ ಅಲೆಗಳಲೂ ನಿನ್ನ ದನಿ  ...