Thursday, 1 August 2013

ಸಿಹಿ-ಹುಳಿ-ಘಾಟು ಹನಿಗಳು !!

ಆಕೆ
ನಾನು ಸೀನಿದಾಗೆಲ್ಲಾ
ತಿರುಗುತಿದ್ದಳು ಮುಗುಳ್ನಕ್ಕು
ಅನುಮಾನಾಸ್ಪದ ನೋಟ ಬೀರಿ
ನಾನು
ನರಳುತ್ತಿದ್ದೆ ನೆಗಡಿಗೆ
ಮೂಗು ಸೊರಿತ್ತು ಒಂದೇ ಸಮನೆ
ಕಳುವಾಗಿತ್ತೆಲ್ಲೋ ಕೈ ವಸ್ತ್ರ ಜಾರಿ
****
ಗಂಟೆಗಟ್ಟಲೆ ಕಾದು
ಬೇಸರದಲ್ಲಿ ಹನಿ ಜಿನುಗಿದಾಗ
ದೂರದಲ್ಲೆಲ್ಲೋ ನೀ ಬರುವುದ ಕಂಡೆ
ತುಟಿ ಮೇಲೆ ಮುಜುಗರದ ನಗೆಯ ಹೊತ್ತು

ಅರಳಿಸಿದೆ ಎನ್ನೆದೆಯ, ಜೊತೆಗೆ ತುಟಿಗಳನೂ
ಕೆನ್ನೆ ತೋಯ್ದು ಹನಿ ತುಟಿ ಹೊಕ್ಕಿತು
ಉಪ್ಪುಪ್ಪು ಕಂಬನಿಗೆ ರುಚಿ ಹೆಚ್ಚಿತು....
****
ಹಂಚಿಕೊಂಡ ಗುಟ್ಟುಗಳ
ಮೌನದಲೇ ಆಲಿಸಿ
ಜಾರಿದ ಕಣ್ಣೀರನು
ಮೆಲ್ಲಗೆ ಒರೆಸಿ
ಕನಸಿನೂರಿನ ಬಸ್ಸಿಗೆ
ಚೀಟಿ ಕೊಡಿಸಿ
ವೆಚ್ಚಕೆ ಜೇಬಿನಲಿ
ಬಣ್ಣಗಳ ಇರಿಸಿ
ತಲೆಗೆ "ಡೀ" ಕೊಟ್ಟು
ಬರಿಸಿದನು ಕೊಂಬು
ಅವನೇ ಆತ್ಮೀಯ
ಗೆಳೆಯ "ತಲೆ ದಿಂಬು"
****
ಹೆಣ್ಣಿನ ಏಟಿಗೆ ಸೋತವನು
ಎಣ್ಣೆ ಏಟಿಗೂ ಸೊಲುವನು
ಸ್ವರ್ಗಕೆ ಏಣಿಯ ಹಾಕುವನು
ನರಕದ ಬಾಗಿಲ ತಟ್ಟುವನು
ನಾಯಿಗೆ ರೊಟ್ಟಿಯ ಹಾಕುವನು
ಪ್ರೇಯಸಿ ಹೆಸರಲೇ ಕರೆಯುವನು
ಒಂದೇ ಗುಟುಕಿಗೆ ಎತ್ತುವನು
ಉಪ್ಪಿನಕಾಯಿ ನೆಕ್ಕುವನು
****
ಸಾವಿನ ಮನೆಯಲಿ ಫೋನು ರಿಂಗಾಯ್ತು
ಎಲ್ಲಿದೆ? ತಿಳಿಯುವಷ್ಟರಲ್ಲಿ ಸಾಕಾಯ್ತು
ಆಯಿತು ಚೂರು ಹೆಣವು ಶೇಕು
ಇದ್ದವರಿಗೆಲ್ಲಾ ಒಂದೇ ಶಾಕು
ಹೆಣದ ಜೇಬಿನಲಿತ್ತು ಫೋನು
ಕಾಲ್ ರಿಸೀವು ಮಾಡಿದೆ ನಾನು
ಆ ಬದಿ ಇಂಪಿನ ಹೆಣ್ದನಿ ಕೇಳಿತು 
"ಕ್ರೆಡಿಟ್ ಕಾರ್ಡು ಕೊಳ್ಳುವಿರೇನು ??"


                                --ರತ್ನಸುತ 

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...