ಅದ್ದಿಕೊಂಡು ಕಣ್ಗಾಡಿಗೆಯ ಬರಣಿಯಲಿ
ಬಿಗಿದಪ್ಪಿಕೊಂಡ ಕುಂಚವ ಎಳೆದು ಕಣ್ಣಿಗೆ
ಏರು ಪೇರಾದ ರೇಖೆಯ ಸರಿಪಡಿಸಲು
ಕಿರು ಬೆರಳ ಅಂಚನು ನೇವರಿಸಿ ಮೆಲ್ಲಗೆ
ಮೆಲ್ಲುಸಿರ ಊದಿ, ರೆಪ್ಪೆಗಳು ಬಡಿಯಲು
ಕಣ್ಣಂಚಿನಿಂದ ಹೊಮ್ಮುವ ಹನಿಯ ತಡೆದು
ಮತ್ತೆ ತೆರೆದ ಕಣ್ಣಿನ ಸೀಮೆ ಕೆದರಿರಲು
ಮತ್ತೊಮ್ಮೆ ಕುಂಚ ಹಿಡಿವ ತುಂಟ ತವಕ
ರವಿಕೆಯ ಕೊನೇ ಕೊಂಡಿಗೆ ಕೈ ಎಟುಕದೆ
ಒಬ್ಬಳೇ ಒದ್ದಾಡುವುದ ಕದ್ದು ನೋಡಿ
ಯಾರೂ ಇರದುದ್ದ ಖಾತರಿ ಪಡಿಸಿ
ನಿನ್ನ ಹುಡುಕಾಟದ ಕಣ್ಣಿಗೆ ಸಿಕ್ಕಿ
ಸನ್ನೆಯಲೇ ಅಪ್ಪಣೆಯ ಕೊಟ್ಟು ಬೆನ್ತೋರಲು
ಸನಿಹಕೆ ಒಂದೇ ಉಸಿರಲ್ಲಿ ಓಡಿ
ಕೊನೆ ಹೆಜ್ಜೆಯ ಸುಧಾರಿಸುತ ಇಟ್ಟು
ಕಂಪಿಸಿ ಕೊಂಡಿಯನು ಸಿಕ್ಕಿಸುವ ತವಕ
ಎಂಜಲು ಮಾಡಿದ ಗಾಜಿನ ಲೋಟದ
ಕೆನೆಗಟ್ಟಿದ ಹಾಲ ನಿನ್ನ ತುಟಿ ಸೋಕಿಸಿ
ಒತ್ತಾಯಿಸಿ ಕುಡಿಸಿ, ಕೊನೆ ತೊಟ್ಟನು ಉಳಿಸಿ
ಹಾಲ ಮೀಸೆಯ ನೀ ಒರೆಸುವ ವೇಳೆ
ತುಟಿ ಲೇಪದ ಅಚ್ಚಿಗೆ ತುಟಿಯ ಒತ್ತಿ
ಲೋಟವನು ಮೆಲ್ಲಗೆ ಮೇಲಕ್ಕೆ ಎತ್ತಿ
ತಳದ ತಳಮಳದ ಆ ಕೊನೆಯ ಹನಿಯ
ಮಂದ ಗತಿಯಲಿ ಹಿಡಿದು ಹೀರುವ ತವಕ
ಏಕಾಂತ ಇರುಳ, ನೀಳ ಮೌನ ವಿಹಾರ
ದೋಣಿಯ ಆಚೆ ತುದಿಯಲಿ ನಿನ್ನ ಮುಂಗೋಪ
ಗುಮ್ಮ ಕಥೆಗಳ ಬೇಡದ ಕಿವಿಗೆ ಊದಿರಲು
ಬೆದರಿ ನೀ ನಡುಗಲು ಆಯ ತಪ್ಪಿತು ದೋಣಿ
ಇಬ್ಬರನು ತಂದು ನಿಲ್ಲಿಸಿತು ಅದರ ಮಧ್ಯ
ಅಂತರವೇ ಇರದಂತೆ ಅಧರಗಳ ಮಧ್ಯ
ಮುಂದುವರೆಯುವ ಮುನ್ನ, ನಡುವ ಮೆಲ್ಲ ಚಿವುಟಿ
ಬೈಗುಳದ ಹರಿವಿಗೆ ಕಿವಿಯಾಗುವ ತವಕ
ಒಂದೇ ದಿಂಬಿಗೆ, ಒಂದಾದ ಇಬ್ಬರು
ಪಿಸುಗುಡುತ ಸಾರಿದ ಪ್ರೇಮ ಸಂದೇಶಗಳ
ಇದ್ದಲ್ಲಿ ಉಳಿಯದ ಚಾದರವು ಕದ್ದು
ಕೇಳಿಸಿಕೊಳ್ಳುವ ಪ್ರಯಾಸವನು ಅರಿತು
ಮತ್ತಷ್ಟು ಗುಟ್ಟುಗಳ ಮೆಲ್ಲ ರಟ್ಟಾಗಿಸಿ
ಇದ್ದಷ್ಟು ತವಕವನು ಮತ್ತಷ್ಟು ಹೆಚ್ಚಿಸಿ
ಕೂಡಿ ಪಡೆದ ಗೆಲುವಿಗೆ ಇಬ್ಬರೂ ಸೋತು
ಗೆದ್ದ ಬಳಿಕ ಸಿಗ್ಗು ತರಿಸುವ ತವಕ
--ರತ್ನಸುತ
No comments:
Post a Comment