Wednesday, 21 August 2013

ಮನದಾಸೆ ನೂರಾರು, ಬರೆದುಕೊಂಡೆ ಚೂರು!!

ಆ ಕಣ್ಣುಗಳು ಹುಡುಕಾಡಿದ ರೀತಿಗೆ 
ನನ್ನನ್ನೇ ನಿರೀಕ್ಷಿಸಿರಬೇಕೆಂದು ಹುಸಿ ಭಾವಿಸಿ 
ನೋಟಕೆ ಎದುರಾಗಿ 
ಒಂದಿಷ್ಟು ಆರಾಮು ನೀಡುವುದಾದರೆ 
ಅಷ್ಟೇ ಸಾಕೆನಿಸುವಷ್ಟು ಉದಾರಿ ಆಗುವಾಸೆ 

ಕಾಲ್ಬೆರಳು ನೆಲವ ಗೀಚಿ 
ನಿಂತಲ್ಲೇ ಹೊಂಡವಾಗಿಸುವಾಲೋಚನೆಯಲ್ಲಿರಲು   
ಅಂಗೈಯ್ಯ ಚಾಚಿ ಗೀಚಿಸಿಕೊಂಡು 
ಮೃದು ಬೆರಳ ಕಾಲ್ಗಿಚ್ಚ ಕೆನ್ನೆಗೆ ಸವರುತ 
ಹಠದಿ ಒಪ್ಪದ ಮನಕೆ ವಾದ ಮಂಡಿಸುವಾಸೆ 

ಗಾಳಿಗೆ  ಹಾರುವ ದಾವಣಿಯ ಅಂಚಿಗೆ 
ನೀ ಉಡುವ ಮೊದಲೇ ನನ್ನ ಪರಿಚಯ ಮಾಡಿಸಿ 
ಅಪರಿಚಿತನಂತೆ ನಿನ್ನ ಹಾದಾಗ 
ಗುರುತು ಹಿಡಿದು ನನ್ನ ಮುಖಕೆ ಹಾರುವ ವೇಳೆ 
ಉನ್ಮತ್ತನಾಗಿ ಸಾಯುವ ಆಸೆ 

ಒಮ್ಮೆ ಸಿಕ್ಕಿ, ಮತ್ತೊಮ್ಮೆ ಸಿಗದ ನಿನ್ನ 
ಸಿಕ್ಕಲ್ಲಿಯೇ ಸಿಗುವೆ ಎಂಬ ಭ್ರಾಂತಿಯ ಹಿಡಿದು 
ಇದ್ದ ಕೆಲಸಗಳೆಲ್ಲವನು ತೊರೆದು 
ನೆನ್ನೆ ಕೊಂಡ ಮೊಗ್ಗಿಗೆ ನೀರು ಚಿಮುಕಿಸಿ ಹಿಡಿದು 
ದಿನ ಮುಳುಗುವವರೆಗೆ ಕಾಯುವ ಆಸೆ  

ಪ್ರೇಮ ನಿವೇದನೆ ಗುಟ್ಟಾಗಿ ನಡೆಸಿ 
ಬೇಟಿಗೆಂದು ನೀ ಹೇಳಿ ಕಳಿಸುವ ವೇಳೆ 
ಕಿವಿಗೆ ಹತ್ತಿಯ ತುರುಕಿ, ಬಾಯಿ ಹೊಲಿದು 
ನಿನ್ನ ಬೈಗುಳಗಳಿಗೆ ಸಮ್ಮತಿಯ ಉಡುಪು ತೊಡಿಸಿ 
ನಾನೂ ಪ್ರೆಮಿಯೆಂದು ಬೀಗುವಾಸೆ ....
                                       
                                          --ರತ್ನಸುತ 

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...