Thursday, 8 August 2013

ಹೀಗೇ ತೋಚಿದ್ದ ಗೀಚಿ.....

ಹಗಲುಗನಸಿಗೆ ಮುಗುಳು
ಇರುಳುಗನಸಿಗೆ ದಿಗಿಲು
ರೆಪ್ಪೆ ಒಂದಾಗಿಸಲೆಂತೋ ಕಾಣೆ
ಆಡು ಬೆರಳಿನ ತೊದಲು
ತಂತಿ ಹರಿದಿಹ ಮಡಿಲು
ಮೀಟಿದರೂ ಮೌನ ವಹಿಸಿದೆ ವೀಣೆ

ವೇಷ ಹಿಂದಿನ ಚಹರೆ
ಚಹರೆ ಹಿಂದಿನ ವೇಷ
ಬಣ್ಣ ಮೆತ್ತಿದ ಕೈಯ್ಯಿ ದೋಷಿ ಕಾಣೋ
ಕಲ್ಲು ದೇವರ ಕೆತ್ತಿ
ಹುಲ್ಲು ಗರಿಕೆಯ ಎರೆದು
ಕಲ್ಲಾಗಿ ಕೈ ಮುಗಿದು ನಿಲ್ಲಲೇನು ??!!

ಹೊತ್ತ ಭಾರದ ಸರಕು
ಬಿಟ್ಟು ಕೊಟ್ಟ ಬಳಿಕ
ಹತ್ತು ಹಲವುದ್ಭವಿಸಿದವು ಗೊಂದಲ
ನನ್ನದಲ್ಲವುಗಳೂ
ನನ್ನೊಡನಿರ ಬಯಸಿರಲು
ನನ್ನವುಗಳೇ ಅವುಗಳಂದುಕೊಳಲಾ ??!!

ರಾಮನಾಗುವ ಮೊದಲು
ರಕ್ಕಸದ ರುಚಿಯುಂಡು
ರಾವಣನ ಅವತಾರ ತಾಳುವಾಸೆ
ನೆನ್ನೆಗಳ ತಪ್ಪೊಪ್ಪು
ನಾಳೆಗಳಿಗೆ ಬೇಕು
ಇಂದಿನಿಂದಲೇ ದಾರಿ ಹೂವ ಹಾಸೆ

ತಿಳಿದೆಲ್ಲದರ ತಳದಿ
ತಿಳಿಯದವುಗಳ ತುಳಿತ
ತಿಳುವಳಿಕೆ ಆದಷ್ಟೂ ತಿಳಿದವು ತಳಕೆ
ತಾಳ ತಪ್ಪುವ ಮುನ್ನ
ತಾಳಬೇಕಿದೆ
ಒಮ್ಮೆಯಾದರು ಹಾಡಿ ಮುಗಿಸಲು ತಾಳಕೆ

                                   --ರತ್ನಸುತ

1 comment:

  1. ಬೆಳಗಿಂದ ಇರುಳಿನವರೆಗೆನ ಬದುಕಿನ ಹೋರಾಟವಿಲ್ಲಿ
    ಅನಾವರಣ

    ReplyDelete

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...