ಅಗೋ ನೋಡ, ಬಿಳಿ-ಬಿಡಿ ಮೋಡ
ನೀಲಿಗಟ್ಟಿದ ಬಾನ ನಡುವೊಂದು ಜಾಡ
ಹಾಗೊಮ್ಮೆ ಕಣ್ಹೊರಳಿ ದಣಿವೆದ್ದು ಬರಲಿ
ವಿರಮಿಸಲು ಜೋಡಿ ರೆಪ್ಪೆಯ ನೆರಳು ಸಿಗಲಿ
ಕೂಡಲೇ ಹಾರಲಿ ಅಪರಿಚಿತ ಹಕ್ಕಿ
ಗುರುತಿಗೆ ಹೆಸರಿನ ಅರಿವೊಂದೇ ಬಾಕಿ
ಮಗ್ನತೆಯ ಮಜಲಿನಲಿ ಒಂದೊಂದು ಸಾಲು
ಏಕಾಂಗಿಯ ತೆಕ್ಕೆಗೆ ಹಸಿರ ತೋಳು
ಇಂಪಿಸಲಿ ಕೊರಳು ಆಲಿಸುವ ಕಿವಿಗೆ
ದೂರದಿ ಮದವೇರಲಿ ಸುಡುವ ರವಿಗೆ
ಆಗಲೇ ಕಾತರಿಸಿ ಮೂಡಲಿ ಚಂದ್ರ
ಚುಕ್ಕಿ-ರೇಖೆಯ ಜೊತೆಗೆ ಹಿಡಿದೊಂದು ಲಾಂದ್ರ
ಗಾಳಿ ಬಳುಕುತ ಬರಲಿ ಎದೆ ಕದವ ಕದಡಿ
ಬೇಸರಿಕೆಯ ಬನದಿ ಹೂವೊಂದು ಅರಳಿ
ಮಸಿ ಬೆರಳು ಮತ್ತೊಮ್ಮೆ ಹಿಡಿಯಲಿ ಮಸಿಯ
ಖಾಲಿ ಹಾಳೆಯ ಎದೆಗೆ ಅಕ್ಷರವೇ ಇನಿಯ
ಸುತ್ತ ಮುತ್ತಲೂ ಕೆತ್ತಿಕೊಂಡ ಕಲ್ಲು ಬಂಡೆ
ಕಾವ್ಯಕಾರಣಕೊಂದು ಕೈಲಾಸವಾಗಲಿ
ಕುಪ್ಪಳಿ ಅಂದೊಡನೆ ಕುಪ್ಪಳಿಸುವ ಮನಕೆ
ಕು.ವೆಂ.ಪುತನವೆಂಬ ಸ್ಪೂರ್ತಿ ತಾ ಇರಲಿ !!
-- ರತ್ನಸುತ
No comments:
Post a Comment