Saturday, 16 November 2013

ಸಾಂದರ್ಭಿಕ ಸೋಪಾನ !!!

ಆಕೆ ಮುನಿಸಿಕೊಂಡಾಗ
ಮೂಗು, ಕೆಂಡ ಸಂಪಿಗೆ 
ಕಣ್ಣು, ಕಿಡಿ ಕಾರುವ ಕುಂಡ 
ಕೆನ್ನೆ, ಲಾವಾ ರಸ ಹರಿದ ಹಾದಿ 
ತುಟಿ, ಕಚ್ಚಿದ ಹಲ್ಲಿಗೆ ಬೆಚ್ಚಿದ ಬಳ್ಳಿ 
ನುಡಿ, ಅಪಶೃತಿಯ ಹಾಡು
ನಡೆ, ಭೂ ಕಂಪನಕೆ ಕಂಪನ 
ಮೈ, ಕಾಡ್ಗಿಚ್ಚ ಕಾನನ 
ಕೈ, ಅದರಿದ ಆಯುಧ 
 
ಆಕೆ ನಾಚಿಕೊಂಡಾಗ 
ಮೂಗು, ಅರಳು ಮಲ್ಲಿಗೆ 
ಕಣ್ಣು, ರಾತ್ರಿಯ ಮಿನುಗು ಚುಕ್ಕಿ
ಕೆನ್ನೆ, ಮುಸ್ಸಂಜೆ ಬಾನು 
ತುಟಿ, ಸುರಪಾನದ ಉಚಿತ ಮಳಿಗೆ 
ನುಡಿ, ನೊರೆ ಹಾಲಿನ ಪೇಯ 
ನಡೆ, ತಾಳಕೆ ಬೆರಗು ವೈಖರಿ 
ಮೈ-ಸೂರಿನ ತುಪ್ಪದ ಪಾಕ 
ಕೈ ಸೋಕಲು ಕಾಣ್ವುದು ನಾಕ 
 
ಆಕೆ ಅಚ್ಚರಿಗೊಂಡಾಗ 
ಮೂಗು, ಮೂರ್ಸುತ್ತು ಮಲ್ಲಿಗೆ 
ಕಣ್ಣು, ಬತ್ತಿ ಏರಿಸಿದ ಉರಿ ದೀಪ 
ಕೆನ್ನೆ, ಅಂಕು ಡೊಂಕು ಮಣ್ಣ ಜಾಡು 
ತುಟಿ, ಕುತೂಹಲದ ಕೂಸು 
ನುಡಿ, ಬರೀ ತೊದಲು 
ನಡೆ, ಮೋಹಕ ಮಜಲು 
ಮೈ, ಶಿಲೆಯ ನಿಲುವು 
ಕೈ, ಕೆನ್ನೆ ಸಲುವು 
 
ಆಕೆ ನಟಿಸುವಾಗ 
ಮೂಗು, ನಟನೆಯ ಸುಳುವು 
ಕಣ್ಣು, ಕಾಡಿಗೆ ಗೂಡು 
ಕೆನ್ನೆ, ಕೃತಕ ಹೂಬನ 
ತುಟಿ, ಒತ್ತಾಯದ ನಗೆ ಸಿಂಚನ 
ನುಡಿ, ತಾತ್ಕಾಲಿಕ ಸದ್ದು 
ನಡೆ, ಬೇಕನಿಸದ ಮುಗಿಲು 
ಮೈ, ನನ್ನದಲ್ಲದ ಆಸ್ತಿ 
ಕೈ-ಕೊಡುಗೈಯ್ಯ ಕುಸ್ತಿ  
 
ಆಕೆ ಅಳುವಾಗ 
ಮೂಗು, ಉಸಿರಿಗಿಕ್ಕಟ್ಟು ಮೂಸೆ
ಕಣ್ಣು, ಉಕ್ಕಿದ ಕಡಲು 
ಕೆನ್ನೆ, ಮಳೆಗಾಲದ ನೆಲ 
ತುಟಿ, ಕಂಬನಿಗೆ ಜಾರು ಸ್ಥಳ 
ನುಡಿ, ಬಿಕ್ಕಳಿಕೆ ಬಂಧು 
ನಡೆ, ನುಡಿಯಂತೆ ನೊಂದು 
ಮೈ- ಮನಸಿಗೆ ಘಾಸಿ 
ಕೈ ಬಯಸಿತು ಪ್ರೀತಿ 

ಆಕೆ ನಾನಾದಾಗ 
ಮೂಗು, ದಾರಿಗೊಂದು ದಿಕ್ಸೂಚಿ 
ಕಣ್ಣು, ಬದುಕಿಗೆ ಕಾವಲು 
ಕೆನ್ನೆ, ಕಾವ್ಯ ಫಲಕ 
ತುಟಿ, ಆಮ್ಲಜನಕ 
ನುಡಿ, ಶಬ್ಧಕೋಶ 
ನಡೆ, ವೀರಾವೇಶ 
ಮೈ, ಗೋಪುರ ಕಳಶ 
ಕೈ, ಕುಸುರಿ ವಿಳ್ಹಾಸ 

                    -- ರತ್ನಸುತ

1 comment:

  1. ಹೊಸತನದ ಕವನಗಳು :)...ಬರೆಯುತ್ತಿರಿ ಸಾರ್

    ReplyDelete

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...