Monday, 4 November 2013

ಹೊಸ ಒಗ್ಗರಣೆ !!

ಇಷ್ಟು ದಿನ ಕಳೆದರೂ, 
ಎಷ್ಟು ಮಾತಾಡಿಕೊಂಡರೂ, 
ಇಷ್ಟಿಷ್ಟೇ ಉಳಿದು ಬಿಡುತ್ತಲ್ಲ 
ಎಷ್ಟೇ ಕೊನೆಗಾಣಿಸಲೆತ್ನಿಸಿದರೂ !! 
ನಾಳೆಗಷ್ಟೂ ಮಾತಾಡೋಣ 
ಎಳ್ಳಿನ ತುದಿಯಷ್ಟೂ ಉಳಿಸದೆ 
ಕಷ್ಟವಾಗಬಹುದು ಚೂರು 
ಇಷ್ಟವಾಗಿಸಿಕೊಳ್ಳೋಣ 

ಕೊಂಡರಾಯ್ತು ಕಡಲೇಕಾಯಿ 
ನೀ ಸುಲಿ, ನಾನೂ ಸುಲಿವೆ 
ಹೊಟ್ಟೆ ಕೆಟ್ಟರೂ ಚಿಂತೆಯಿಲ್ಲ 
ಮಾತು ಮುಂದೋ, ಕಾಳು ಮುಂದೋ
ನೋಡಿಯೇ ಬಿಡೋಣ 
ಒಟ್ಟಾರೆ ಮುಗಿಸಬೇಕು ಇವತ್ತಿಗೆ 
ನಾಳೆಗೇನೂ ಉಳಿಸದಂತೆ "ಮಾತನ್ನು"
"ಕಾಳನ್ನಲ್ಲ"!! 

ಹಾಗೆ ಮೌನ ವಹಿಸಿ ನೀ 
ವ್ಯರ್ಥ ಮಾಡುವುದೇಕೆ ಸಮಯ?
ಮತ್ತೆ ನೆನ್ನೆಯ ಹಾಗೆ ತೆಗೆಯದಿರು ರಾಗ 
ಸಾಕಾಗಿದೆ ನನಗೀ ತಗಾದೆ!!
ಇಗೋ ನಿಲ್ಲಿಸಿದೆವು ನೆನ್ನೆಗೆ 
ಇಷ್ಟರ ವರೆಗೆ ಮಾತ್ರ 
ಇನ್ನೂ ಬಾಕಿ ಉಳಿದವುಗಳ ಕಕ್ಕಲು ಬಿಡು, 
ನೀನೂ ಕಕ್ಕು
ನಿನ್ನ ಮೌನವ ಪಕ್ಕಕ್ಕೆ ಕುಕ್ಕು 

ಮತ್ತೆ ಕಣ್ಣೀರೇ ಮೊದಲಾಯ್ತು 
ನನ್ನ ಬೆರಳೇನು ಟಿಶ್ಯೂ ಪೇಪರ್ರೇ?
ನಿನ್ನ ಕೆನ್ನೆಗೆ ನನ್ನ ತುಟಿಗಿಂತ 
ಬೆರಳಿನ ಪರಿಚಯವೇ ಹೆಚ್ಚಿದೆ!!
ಸಾಕು ಮಾಡು ಮಾರಾಯ್ತಿ 
ಮಾತಿಗೆ ಮುಂದಾಗು ಈಗಲಾದರೂ 
ಮನಸಿಗೆ ಸಹಿಸಲಾಗುತ್ತಿಲ್ಲ ಈ 
ಪರಿಚಿತ ದೊಂಬರಾಟ  

ಅಬ್ಬಾ ಕೊನೆಗೂ ನಕ್ಕೆಯಲ್ಲ!! 
ಹಿಂದೆಯೇ ಅನ್ನುತ್ತೀಯ 
"ಅವಸರ ಏಕೆ ನಲ್ಲ, 
ಮಾತನಾಡಲು ಇದೆಯಲ್ಲ ಜೀವಮಾನವೆಲ್ಲ!!"
ಅಯ್ಯೋ ನನ್ನವ್ವ 
"ದೂರಾಗೋಣ ನಾಲ್ಕು ಮಾತಾಡಿ,
ಹಂಚಲಾಗದ ವಿಷಯಗಳ ಹಂಚಿಕೊಂಡು" ಅಂದಿದ್ದೆ 
ಈಗ ನಿನ್ನ ಮಾತಿನರ್ಥ?? // ದ್ವಂದ್ವ 

ಕೊನೆಗೂ ಮತ್ತದೇ ಹಳೇ ಸಾರಿಗೆ 
ಸುರಿದೆ ಹೊಸ ಒಗ್ಗರಣೆ 
ಮತ್ತೊಮ್ಮೆ ಕುದಿಸಿ ಬಡಿಸಿದೆ 
ಒಲ್ಲದ ಮನಸಿನ ಹೊಟ್ಟೆಗೆ 
ಇನ್ನು ನೀನಲ್ಲ ಎಂದು ಗೊತ್ತಾಗಿ 
ಹೊಸ ಅರ್ಜಿ ಹಾಕಲು ಮುಂದಾಗಿತ್ತು
ಈ ಹಾಳು ಹೃದಯ-
-ಕ್ಕೆ ಏನು ಕಾರಣ ಕೊಡಲಿ 




ಮಾತು......  ಮುಂದುವರೆಯಲಿ !!

                                           --ರತ್ನಸುತ 

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...