Wednesday, 6 November 2013

ಸ್ವ(ಅ)ತಂತ್ರ ಭಾರತದಲ್ಲಿ !!

ಇಬ್ಬರು ಜಗಳಕ್ಕೆ ನಿಂತಾಗ 
ಗುಂಪು ಕಟ್ಟಿದವರಲ್ಲಿ ನಾನೂ ಒಬ್ಬ 
ಆ ರೋಮಾಂಚಿತ ದೃಶ್ಯಾವಳಿಯಲ್ಲಿ 
ನನಗೆಲ್ಲಿಲ್ಲದ ಖುಷಿ 
ನಾನಿರದಂತೆ ಲೋಕ ಇದ್ದಾಗ 
ನನಗೆ ನನ್ನ ಮೇಲೆ ಅನನ್ಯ ಭಾವ 
ನಾಗರಿಕನಂತೆ ನಟಿಸಿ 
ಅಲ್ಲಿಂದ ಜಾರಿಕೊಂಡೆ 

ಜಗಿದ ಬಬ್ಬಲ್ ಗಮ್ಮನು 
ಮೇಜಿನಡಿ, ಕುರ್ಚಿಯಡಿ 
ಅಂಟಿಸಿದವರಲ್ಲಿ ನಾನು ಹೊರತಲ್ಲ  
ನಿರ್ಜನ ಪ್ರದೇಶದ ಗೋಡೆಗಳ ಮೇಲೆ 
ಚಿತ್ತಾರ ಬಿಡಿಸುವಾಗ, ಅಪರಿಚಿತರ- 
-ಕಣ್ಣಿಗೆ ಬಿದ್ದು ನಾಚುವ ಅಸಹಾಯಕ ನಾನು 
ಸಮರ್ಥನೆಗೆ ಇದ್ದೇ ಇದೆ ನನ್ನ ಬಳಿ 
ಅಭಿವ್ಯಕ್ತಿ ಸ್ವಾತಂತ್ರದ ವಿತಂಡತನ

ನನ್ನದಲ್ಲದ ಹುಳುಕು ಹುಡುಕುವಾಗ 
ಮೈಯ್ಯೆಲ್ಲ ಕಣ್ಣು 
ನಿಂದನೆಗೆ ಸಿಕ್ಕವರ ಪಾಲಿಗೆ ಈ ನಾಲಿಗೆ 
ಹರಿತವಾದ ಕತ್ತಿ 
ಒಳ ಬಿರುಕುಗಳೆಷ್ಟೋ ಲೆಕ್ಕವೇ ಇಲ್ಲ 
ಲೆಕ್ಕ ಹಾಕಲು ನನಗೆ ಒಳಗಣ್ಣಿಲ್ಲ 
ನನ್ನ ತಪ್ಪುಗಳಿಗೆ ನನ್ನ ಮಾಫಿ 
ಅನ್ಯರಿಗೆ ನಾ ಘಡಾಫಿ 

ದೇಶ ಹೀಗಿರುವುದೇ ಅನುಕೂಲಕರ 
ಇಲ್ಲವೆ, ಬೂಟಾಟಿಕೆಗೆಲ್ಲಿ ಬೆಲೆ ?
ತೋರ್ಬೆರಳಿಗೆ ಕೆಲಸವಿಲ್ಲದೆ 
ಕಚ್ಚಿಕೊಳ್ಳಲಷ್ಟೇ ಬಳಸಬೇಕಿತ್ತು
ನೆರಳಿಗೂ ತಲೆ ಮರೆಸಿಕೊಳ್ಳಲು 
ಕಾರಣವಿದೆ ನನ್ನಿಂದ 
ಇನ್ನು ನನ್ನ ಪುಂಡತನಕ್ಕೋ,  
ಎಲ್ಲಿ ಲಂಗು-ಲಗಾಮು ??

ಜೇಬು ಜಣಗುಡಲು ತೇಗು ಹೊಟ್ಟೆ 
ಇಲ್ಲದಿದ್ದರೆ ತಣ್ಣೀರು ಬಟ್ಟೆ 
ಸಂಗ್ರಾಮದಲಿ ನನ್ನದೂ ಒಂದು ಕಲ್ಲು 
ಬಸ್ಸಿಗೋ, ಸರ್ಕಾರಿ ಕಚೇರಿಗೋ!!
ನೆನ್ನೆ ಮುಗಿದವು ಇಂದು ಮುಗಿದವು 
ಪತ್ರಿಕೆಗಳಲ್ಲಿ ಮುಖ್ಯಾಂಶಗಳಾಗಿ 
ಇಂದಿನ ಬಗ್ಗೆ ಚಿಂತೆ ನನಗಿಲ್ಲ 
ನಾಳೆಗೆ ಬಂದೇ ಬರುತ್ತವೆ
ಸ್ವಾರಸ್ಯಕರ ಸುದ್ದಿಗಳಾಗಿ !!

                                 -- ರತ್ನಸುತ

1 comment:

  1. 'ನಾಗರಿಕನಂತೆ ನಟಿಸಿ' ನುಣಿಚಿಕೊಳ್ಳುವ ಪ್ರಭೂತಿಗಳ ಬಗ್ಗೆ ನೀರಿಳಿಸುವ ಕವನ.
    ಶೀರ್ಷಿಕೆಗೆ ಪೂರ್ಣ ಅಂಕಗಳು.

    ReplyDelete

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...