Friday, 29 November 2013

ಓದ್ಕೊಂಡ್ರಿ.... ಅನುಭವ್ಸಿ!!

ನದಿಯೊಂದು ನನ್ನರಸಿ 
ಬಂದಿರಲು ಬಳಿಸಾರಿ
ಅಡ್ಡಗಟ್ಟಿದ ಮೂರ್ಖ ಕಡಲು ನಾನು 
ತಾನಾಗೇ ಹಣತೆಯಲಿ 
ಬೆಳಕೊಂದು ಹೊಮ್ಮಿರಲು 
ಅಡಿಯಲ್ಲಿ ಅರಸಿದೆ ಕತ್ತಲನ್ನು 

ನಗುವಲ್ಲಿ ನನಗೊಂದು 
ಬಿಲ್ಲೆಯಷ್ಟಿದೆ ನೋವು 
ಎದ್ದು ಕಂಡಿತು ಅದುವೇ ಮೆಟ್ಟಿ ನಗುವ 
ಸುತ್ತ ಕೆಂಡದ ಸಾಲು 
ಕೀಳಬೇಕಿದೆ ಕಾಲು 
ನನ್ನ ನೆರಳೇ ಕಸಿಯಿತೆನ್ನ ಬಲವ 

ಗುಡ್ಡವೇರಿದೆ ಈಗ 
ಇಳಿಜಾರುವ ಸರದಿ 
ಹಿಂದೆ ಅನುಭವ, ಮುಂದೆ ಹೊಸ ಪರೀಕ್ಷೆ 
ತುದಿಗಾಲಿನ ಬೆವರು 
ಹಿಂಜರಿಕೆಯ ಒಡಲು 
ಇಂದೇಕೋ ಈ ರೀತಿ ಹೊಸ ತಮಾಷೆ 

ಬಿಸಿಲು, ಶೀತಲ ಗಾಳಿ 
ಮಳೆ, ಮಂಜಿಗೆ ಅಂಜಿ 
ಕುಸಿತ ಕಂಡತು ಬಂಡೆ ತುಸು ತಳದಲಿ 
ದೇವರಿದ್ದರೂ ತಾನೇ 
ಏನು ಮಾಡುತ್ತಾನೆ 
ಬಂಡೆಯೊಳಗೆ ಬೆಚ್ಚಗೆ ಮಲಗಲಿ 

ನಾನಿಟ್ಟ ಗುರಿಯಲ್ಲಿ 
ಹಲವರ ಗುರಿಯಿತ್ತು 
ಅದಕೆ ತಪ್ಪಿತು ನನ್ನ ಡೊಂಕು ಬಾಣ 
ನನ್ನ ಬಗ್ಗೆ ನನಗೆ 
ಕೊಲ್ಲುವಷ್ಟಿದೆ ಕೋಪ 
ಆದರೂ ನನಗೆ ನಾ ಪಂಚಪ್ರಾಣ 

ಕಥೆಗೊಂದು ಹೆಸರಿಲ್ಲ 
ಪುಟವೊಂದೂ ಉಳಿದಿಲ್ಲ 
ದಿಕ್ಕು ದಿಕ್ಕಿಗೆ ಹಾರಿ ಹೋದೆ ನಾನು 
ಕೊಸರು ಜೀವನದಲ್ಲಿ 
ಕುಸುರಿಯೆಂಬುವ ಪದಕೆ 
ಜಾಗ ಮೀಸಲು ಇಡದೆ ನಷ್ಟವೇನು?

ಸ್ಪರ್ಧೆ ಮುಗಿಯುವ ಹೊತ್ತು 
ಈಗ ಓಟ ಬೆಳೆಸಿ 
ಯಾರ ಗೆಲ್ಲಲಿ ಹೇಳಿ ಈ ಜಗದಲಿ 
ನಿಮ್ಮ ಕೋಪಕೆ ನಾನು 
ಗುರಿಯಾಗುವ ಮುನ್ನ 
ಈ ಪಯಣ ಇಲ್ಲಿಗೆ ಅಂತ್ಯಗೊಳಲಿ !!

                                   -- ರತ್ನಸುತ 

1 comment:

  1. ಮೊದಲಿಗೆ ಶೀರ್ಷಿಕೆಯಲ್ಲೇ ಕೆಡವಿ ಹಾಕುವ ಕಲೆ ನಿಮಗೆ ಸಿದ್ದಿಸಿದೆ ಭರತ ಮುನಿಗಳೇ. ಭೇಷ್!
    ಅಸಲು ಮನಸೇ ಗಣಕ, ಅದು ಏನೇನೋ ಸೂತ್ರಗಳೊಡ್ಡಿ ಕೆಣಕುತ್ತದೆ ಹೀಗೆ!

    ReplyDelete

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...