Thursday, 21 November 2013

ಗೊಂದಲ ನೂರು, ಯಾರು ಕೇಳೋರು?!!

ಜೇಬಲಿ ಬಳಪದ ಚೂರು 
ಗೀಚುವ ಹಂಬಲ ನೂರು 
ನಾಲ್ಕು ಗೋಡೆಯ ಬರಹ ನನ್ನದು 
ಇಣುಕಿ ಓದೋರ್ಯಾರು?
 
ಬಾನಲಿ ಹುಣ್ಣಿಮೆ ತೇರು 
ನಕ್ಷತ್ರಗಳೂ ಸುಮಾರು 
ಚಂದಿರ ತಪ್ಪಿದ ಲೆಕ್ಕವ ಹಿಡಿದು  
ಎಣಿಸಿ ಕೊಡುವವರಾರು?
 
ನಿಲ್ಲುವ ತಾಣವೇ ಊರು 
ಸೋರುವುಪ್ಪರಿಗೆ ಸೂರು 
ಆಸೆ ಬಿತ್ತುವ ಕನಸಿನ ಕನಸನು 
ಪೋಷಿಸಿ ಬೆಳೆಸೋರ್ಯಾರು?
 
ನಡೆದರೆ ಬೀಳಿಸುವವರು  
ಬಿದ್ದರೆ ಮೆಟ್ಟುವವರು 
ಚಾಚಿವೆ ಸಾವಿರ ಕೈಗಳು ಆದರೆ 
ಒಲಿತನು ಮಾಡೋರ್ಯಾರು?

ನೆನಪಾದರು ನನ್ನವರು 
ಭ್ರಮೆಯಾದರು ಉಳಿದವರು 
ನಂಬಿಕೆಗಳ ಮೂಡಿಸುತಲೇ ಹಿಂದೆ 
ಹುಸಿಯಾದರು ಹಲವಾರು 

ಆ ದಡ ನನ್ನ ತವರು 
ಈ ತೀರದಿ ಯಾರಿಹರು?
ಹಿಂದಿರುಗುವ ಆಲೋಚನೆಗಳಿಗೆ 
ನಡೆಸ ಬೇಕೆ ತಯಾರು?

ನಾನೆಂಬುದು ನನ್ನ ಪೊಗರು 
ಪೊಗರಿಲ್ಲದೆ ನಾ ಯಾರು ?
ಒಗಟಲ್ಲದ ಈ ನೇರ ಪ್ರಶ್ನೆಗೆ 
ಉತ್ತರಕ್ಕೆಲ್ಲಿದೆ ಬೇರು?

ಮನಸಿದು ಮುಪ್ಪಿನ ಬಿದಿರು 
ಖಾಲಿತನದ ಪೊದರು 
ಹೂ ಅರಳಿದ ಬಿದಿರಿನ ಒಡಲೊಳಗೆ 
ತುಂಬುವರ್ಯಾರು ಉಸಿರು?

ನೆನ್ನೆಗಳಲ್ಲ ನವಿರು 
ಇಂದಿಗೆ ಈ ಉರಿ ಬೆವರು 
ಕಾರ್ಮುಗಿಲಿಚ್ಛಿಸುವ ಮರುಭೂಮಿಯ 
ಮರುಳನ್ನದವರು ಯಾರು?

                            -- ರತ್ನಸುತ 

No comments:

Post a Comment

ಹೃದಯವ ನೀಡಲೇ

ಹೃದಯವ ನೀಡಲೇ ಹೇಳದ ಮಾತಿವೆ ನೂರಾರು ಆಲಿಸು ಈಗಲೇ ಪಾಲಿಸಿ ನಿನ್ನಯ ನೆರಳನು ಹೃದಯವ ನೀಡಲೇ ಹೊಂಗನಸ ಅಂಗಳದಿ ಅರಳಿರುವ ಚಂದಿರ ನೀ  ಯಾರಿರದ ತೀರದಲಿ ಅಲೆಗಳಲೂ ನಿನ್ನ ದನಿ  ...