Wednesday, 20 November 2013

ಕಗ್ಗತ್ತಲ ಸುತ್ತ !!

ತಲೆದಿಂಬಿನೋಳಗೊಂದು ತುತ್ತೂರಿ ಸದ್ದು
ನಿದ್ದೆಗೊಡದೆ ಎಬ್ಬಿಸುತ್ತಿದೆ ಒದ್ದು 
ಸರಿಹೊತ್ತಲಿ ಎಚ್ಚರಾಗೋದು ಏನು ?
ಕತ್ತಲೊಡನೊಂದಿಷ್ಟು  ಮಾತಾಡಲೇನು ?

ಕಿಟಕಿ ಆಚೆ ಚಂದ್ರ ನೋಡಿಹನು ಕದ್ದು
ಹೊರಗೆ ಬೀದಿ ನಾಯಿಗಳ ಬೊಗಳು ಸದ್ದು 
ಆರಿಸಿದ ದೀಪವನು ಮರು ಬೆಳಗಲೇನು ?
ಪೆದ್ದನನಿಸಿಕೊಳ್ಳದೆ ಮಲಗಲೇನು ?

ಎಲ್ಲಿ ಹೋಯಿತೋ ಜಾರಿ ಹೊದ್ದಿದ್ದ ರಗ್ಗು ?
ಹಾಸಿಗೆಯೂ ಸರಿಯಿಲ್ಲ, ಬರೀ ಉಬ್ಬು ತಗ್ಗು 
ಎದೆಯ ತಟ್ಟುವ ಕೈ ಇರಬಾರದೇನು ?
ಹೀಗೇಕೆ ನಾನಾದೆ ಮರುಭೂಮಿ ಮೀನು ?

ತಾಪ ಹೆಚ್ಚಿದೆ ಗಂಟಲಾಯಿತೊಣ ಹುಲ್ಲು 
ಸೊಳ್ಳೆ ಎರಡು ಸತ್ತಿವೆ ಲೋಟದಲ್ಲೂ 
ದಾಹ ನೀಗಲು ನೀರ ನೇರ ಕುಡಿದೇನು ?
ನಿಷ್ಠೂರ ಮಾಡುವುದೇ ನಾಲಿಗೆ ತಾನು ?

ನಾನೊಬ್ಬನೇ ಇದ್ದು ಮಲಗಿದ್ದು ಸುಳ್ಳು 
ಜೊತೆಗೆ ಇದ್ದರಲ್ಲ ಆಜು-ಬಾಜಿನಲ್ಲೂ !!
ನಾನಿರುವ ಈ ಜಾಗ ನಿಜದ ಸೂರೇನು ?
ಭಯದಲ್ಲಿ ಅದುರುತ್ತ ಬೆವೆತು ಹೋದೇನು !!

ಬಿಟ್ಟ ಕಣ್ಣನು ಮುಚ್ಚೆ ಎಚ್ಚರಾದೀತೇ ?
ಎಚ್ಚರದಿ ನಿಜವೆಂಬುದು ಕಂಡೀತೇ ?
ಅಷ್ಟರಲೆ ಅಪ್ಪಳಿಸಿತೊಂದು ಕತ್ತಲ ಅಲೆ 
ಹೊತ್ತಾಯಿತು ಮೊಳಗಿತು ಬೆಳಕ ಶಾಲೆ !!

                                   -- ರತ್ನಸುತ 

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...