Thursday, 16 October 2025

ಈ ಬಿರು ಬಿಸಿಲಲ್ಲೂ ಕಂಗೊಳಿಸುವೆಯಲ್ಲ

ಈ ಬಿರು ಬಿಸಿಲಲ್ಲೂ ಕಂಗೊಳಿಸುವೆಯಲ್ಲ

ನೀ ಖಂಡಿತ ಈ ಗ್ರಹದವಳಲ್ಲ
ನಕ್ಷತ್ರಗಳ ಊರು? ಬಂಗಾರದ ಸೂರು?
ಅಷ್ಟಲ್ಲದೆ ನಿನ್ನ ಹಾಗೆ ಕಾಣುವವರಿಲ್ಲ

ಆಗೋ ಆ ಹಣೆಯಲ್ಲಿ ಬೆವರು ಜಿನುಗೆ
ಎಷ್ಟು ನಳನಳಿಸುತ್ತಿದೆ
ತಂಗಾಳಿ ನಿನ್ನತ್ತ ಬೀಸಿ ಬಂದಿದೆ ತಾಳು
ನೀ ಒರೆಸುವ ಪ್ರಯಾಸ ಪಡಬೇಕಿಲ್ಲ

ಕಣ್ಣಂಚಿಗೆ ತೀಡಿದ ಕಾಡಿಗೆಯಿದೆಯಲ್ಲ
ಅದರ ಒಂದಂಶ ಇನ್ನೂ ಕಿರುಬೆರಳ ಅಂಚಿನಲಿ 
ಪಾಲು ಕೇಳುತ ಮಿಕ್ಕ ಬೆರಳುಗಳು
ತಹತಹಿಸಿದಂತೆ ಕುಣಿದಿವೆಯಲ್ಲ!

ಎಲ್ಲಿ, ಒಮ್ಮೆ ನಗದಂತೆ ಮೊಗವೊಡ್ಡು
ಇಲ್ಲ, ಅದು ಸಾಧ್ಯವೇ ಇಲ್ಲ
ನೀನೇ ಬೇಕೆಂದು ಕೇಳಿ ಪಡೆದಂತಿದೆ
ನಗುವು ನಿನ್ನ ಸಹಜ ನಗ, ಹೌದಲ್ಲ?!

ಬಿಡು, ನಿನ್ನ ಹೊಗಳದ ದಿನವಿಲ್ಲ
ಶುರುವಾಗಿಸಲು ಕೊನೆಯಿಲ್ಲ
ಹಸಿವಿಲ್ಲ, ಕಸುವಿಲ್ಲ, ಕಸುಬಿಲ್ಲ
ಮತ್ತೇನಿಲ್ಲ, ನೀನಿರದೆ ನಾನಿಲ್ಲ!

ಏನನ್ನೂ ಹೇಳದೆಲೆ

ಏನನ್ನೂ ಹೇಳದೆಲೆ 

ಯಾವ ಮಾತು ಆಡದೆಲೆ
ನೋಡುತ್ತ ನಿಲ್ಲುತಲೇ
ಹಾಡಲೇನು ನಿನ್ನ ಮೇಲೆ
ಆ ನಿನ್ನ ನೋಟದಲೇ
ಮಾಯ ಬಲೆ ಬೀಸುತಲೇ 
ಗೀಚಿಟ್ಟೆ ಒಂದು ಓಲೆ
ಪ್ರೀತಿಯಲ್ಲಿ ಬೀಳೋ ವೇಳೆ
ಇದ್ದ ಕಡೆಯೇ ಮನಸು ಕೋಟ್ಟೆ ನಾ.. ಆ ಆ ಆ
ಹಾದು ಹೋದೆ ನೀನು ಸೋಕುತ್ತ ನನ್ನನೇ
ನೀ ಬೀಸಿ ಹೋದ ಗಾಳಿಯಲ್ಲೇ
ತೇಲಿ ಹಾರೋ ಆಸೆ ಬಂತು
ಏನು ಮಾಡಲಿ, ಹೇಗೆ ತಾಳಲಿ
ನೀ ಬೀಸಿ ಹೋದ ಗಾಳಿಯಲ್ಲೇ
ತೇಲಿ ಹಾರೋ ಆಸೆ ಬಂತು
ಹಾರ ಬೇಕು ನಾ, ನಿನ್ನ ಜೊತೆಯಲಿ...

ಏನೋ ಹೇಳ ಬಂದೆ ನೀನು ನನ್ನಲಿ

ಏನೋ ಹೇಳ ಬಂದೆ ನೀನು ನನ್ನಲಿ 

ಎಲ್ಲ ಬಿಡಿಸಿ ಹೇಳು ಅರ್ಥವಾಗಲಿ 
ಇದೇ ಹೊಸ ಥರ, ಎದೆ ಸುಡೋ ಜ್ವರ 
ನೀನಾಗೇ ಹೇಳು ಹೇಗೆ ಎಲ್ಲ ತಾಳಲಿ 
ಊರಿನೊಂದಿಗೆ ಎದುರಾಗುವೆ 
ನಿನ್ನ ಗೆಲ್ಲಲು ಹೋರಾಡುವೆ 
ಏನಾದರೇನು ನಾ ನಿನ್ನ ಕಾಪಾಡುವೆ 

ಮೇಣದಂತೆ ಕರಗಿ ಹೋಗಲೇನು 
ಕೋಪದಿ ನೀ ನೋಡುವಾಗ 
ತ್ರಾಣವನ್ನೇ ಕಳೆದುಕೊಂಡ ಹಾಗೆ 
ಮೆಲ್ಲನೆ ನೀ ಸೋಕಿದಾಗ 
ಬರಿ ಸನ್ನೆಯಲ್ಲೆ ಕರೆವಾಗ ಬಾಲೆ 
ವಾಲಬೇಕು ತೋಳಿನಲ್ಲಿ ಕೂಡಲೇ 
ಕೂಡು ಬಾ ಕೂಡಲೇ 
ಯಾರೇ ಬಂದರೂ ನಿನ್ನ ಸಮ 
ಆಗಲಾರರು ನೀನೇ ರಮಾ 
ಕೊಂಡಾಡಲೇನು ನಾ ನಿನ್ನನು ಓ ಸುಮ..

ಒಮ್ಮೆ ನಿನ್ನ ಹೆಸರ ಕೂಗಿದಾಗ 
ದೊರೆಯಿತು ಹಗುರಾದ ಭಾವ 
ನಗೆಯ ಬಲೆಗೆ ನಾ ಜಾರಿದಾಗ 
ಖುಷಿಯಲಿ ಹೋದಂತೆ ಜೀವ 
ಬೆರಗಾಗುವಂತೆ ಪ್ರತಿಯೊಂದು ವೇಳೆ 
ಕಣ್ಣ ಮುಂದೆ ನಿನ್ನ ರೂಪ ತಾಳಲು 
ಮರೆತೆ ಮಾತಾಡಲು 
ನಿನ್ನ ಧ್ಯಾನವೇ ಎಲ್ಲ ಕ್ಷಣ 
ಎದುರುಗೊಳ್ಳುತ ನೀ ತಕ್ಷಣ 
ಬಾ ಪಟ್ಟವೇರಿಕೋ, ನಿನದೇ ಜೀವನ..

ನನ್ನ ತುಂಬೆಲ್ಲಾ ಬರಿ ನೀನೇ ನೀನು

ನನ್ನ ತುಂಬೆಲ್ಲಾ ಬರಿ ನೀನೇ ನೀನು 

ನನ್ನ ತುಂಬೆಲ್ಲಾ ಬರಿ ನೀನೇ ನೀನು 
ಹೀಗೆ ಬಂದು ಹಾಗೆ ಹೋಗೋ ಆಟ ಬೇಡ (೨)
ನನ್ನ ತುಂಬಾ.. ನನ್ನ ತುಂಬಾ 
ನಿನ್ನ ಬಿಂಬ.. ಓ..

ನಿದ್ದೆಗಣ್ಣಲ್ಲೂ ನಿನ್ನದೇನೇ ಧ್ಯಾನ 
ಬಿಟ್ಟು ಹೋದಾಗ ತಾಳೋದಿಲ್ಲ ಪ್ರಾಣ 
ನಿನ್ನ ಮಾತಲ್ಲಿ ನನ್ನದೊಂದು ಮೌನ 
ಕೇಳಬೇಕು ನೀನು ಮಾಯವಾಗೋ ಮುನ್ನ 

ಒಂದು ಮಾಡೋದು ದೂರವಾಗಿಸೋಕಾ?
ಕಾಲ ನೀನಿಷ್ಟು ಕ್ರೂರಿಯಾಗಬೇಕಾ?
ಪ್ರೀತಿ ಮಾಡೋಕೆ ಒಂದೇ ಜನ್ಮ ಸಾಕಾ?
ಇನ್ನೂ ಒಂದು ನೂರು ಜನ್ಮವಾದ್ರೂ ಬೇಕಾ?

ಹುಡುಕಿ ನಾ ಹುಡುಕಿ

ಹುಡುಕಿ ನಾ ಹುಡುಕಿ 

ಬಂದಿರುವೆ ನಿನ್ನುಡುಕುತ್ತಾ 
ಏನೂ ಹೇಳದೆ ಹೋದೆ 
ಮಾಯವಾಗುತ್ತಾ 
ಬುದ್ಧಿ ಇಲ್ಲದ ಹಾಗೆ 
ನಾ ನಿಂತೇ ಹೀಗೆ 
ಹೃದಯಕ್ಕೆ ಗಾಯಾನಾ 
ಮಾಡಬೇಕಿತ್ತಾ?
ಬೇಕಾ ಬೇಕಾ ಈ ಪ್ರೀತಿ ಬೇಕಾ?
ಸಾಕಾ ಸಾಕಾ ಈ ಪಾಡು ಸಾಕಾ?

ಇದ್ದೆ ಹೇಗೋ ನನ್ನಷ್ಟಕ್ಕೆ ನಾ ನೆನ್ನೆ 
ಭೇಟಿಯಾಗಿ ದೋಚಿದೆ ಮನಸನ್ನೇ 
ಒಂದು ಬಾರಿ ಬಂದು ನೋಡೆ, ಮಾತನಾಡೆ 
ಮುತ್ತನೊಮ್ಮೆ ನೀಡಿ ನೋಡೆ 
ಒಂದುಗೂಡಿ 
ನಾವೆಲ್ಲ ಕಡೆ ಸುತ್ತಿ ಬರುವ 
ಸಂತೆಯಲ್ಲೂ ಕೈಯ್ಯ ಹಿಡಿವ 
ಯಾರು ನೋಡಿದರೆ ಏನು ಪ್ರೀತಿಸುವ..

ಏನೆಂದು ಹೇಳಲಿ ಈಗ

ಏನೆಂದು ಹೇಳಲಿ ಈಗ

ಮಾತೆಲ್ಲ ಮಾಯವಾದಂತೆ 
ಹೀಗೆಂದೂ ಆಗಿಯೇ ಇಲ್ಲ 
ಈಗೀಗ ಎಲ್ಲ ನಿನ್ನಂತೆ 
ನಿನ್ನಿಂದ ಆದೆ ಬಲಹೀನ 
ಹೃದಯಕ್ಕೆ ಗಾಯವಾದಂತೆ 

ಇರುವ ಕಡೆಯಲ್ಲೇ ನಾ ಮೈಯ್ಯ ಮರೆಯುವೆ 
ಯಾಕೆಂದು ತಿಳಿಯದೆ
ನಾ ತಿಳಿಯದೆ ನಿಲ್ಲುವೆ 
ಇರುವ ಕಡೆಯಲ್ಲೇ ನಾ ಮೈಯ್ಯ ಮರೆಯುವೆ 
ಆ ಅರಳಿದ ಕೆಂದಾವರೆ ನಗುವಲಿ 
ಹುಡುಕೋಕೂ ಮುನ್ನ ನೀನಿರು..

ನದಿಗಳನು ಯಾರೂ ತಡೆಯೋಕೆ ಆಗದು 
ಹಾಗೆ ಈ ಒಲವಿದು
ನಮ್ಮೋಲವಿದು ಸೋಲದು 
ನದಿಗಳನು ಯಾರೂ ತಡೆಯೋಕೆ ಆಗದು 
ಬಾ ಮುಗಿಲಾಚೆ ಹಾರೋಣ ಈ ಕ್ಷಣದಲ್ಲಿ 
ಮರಳೋದು ಬೇಡ ಎಂದಿಗೂ…

ಮರೆಯಲಿ ಹೇಗೆ ಪ್ರಿಯೆ

ಮರೆಯಲಿ ಹೇಗೆ ಪ್ರಿಯೆ 

ಮನದಾಳ ನಿನ್ನ 
ರೂಪ ತಾಳಿರುವೆ 
ಬರೆಯುವ ಬಾ ಬೇಗನೆ 
ಹೊಸ ಸಂಚಿಕೆ 
ಏಕೆ ಕಾಯಿಸುವೆ?
ಮನದನ್ನೆ.. ಬಿಟ್ಟಿರಲಾರೆನು ನಾನು 
ಕ್ಷಣವೂ ನಿನ್ನನು 
ಒಲವನ್ನೇ.. ಬೇಡಿದೆ ಜೀವವು ಬೇರೆ 
ಬಯಸದೇನನೂ 
ಕಳುವಾಗಿ ಹೋಗಿರುವೆ 
ನೀನಾಗೇ ದಾರಿ ತೋರು…

ಹೆಚ್ಚಾಗಿದೆ ಹಂಬಲ 
ಹೇಳು ಏನು ಮಾಡಲಿ ನಾನೀಗ 
ನಿವಾರಿಸು ಗೊಂದಲ 
ನೇರ ನೇರ ಭೇಟಿ ಯಾವಾಗ?
ಆಸೆಗೆ ರೆಕ್ಕೆ ಬಂದು 
ಹಾರುವುದ ಕಲಿತೆ ನೋಡು 
ನಿನ್ನಾಸೆಗೂ ಹಾರಾಡಲು 
ಅನುಮತಿ ಬೇಗನೆ ಕೊಡು.. ಕೊಡು..

ನಿರಂತರ ಓಡುವ 
ಕಾಲವನ್ನು ಒಮ್ಮೆ ಕೇಳೋಣ
ಈ ದೂರವು ಇನ್ನಾದರೂ 
ದೂರ ಮಾಡದಂತೆ ಕೋರೋಣ 
ಲೋಕದ ನಿಯಮವ 
ಮುರಿವುದೇ ಪ್ರೀತಿಯ ನೇಮ 
ಅನುಗಾಲಕೂ ಅರಳಲಿ 
ನಮ್ಮ ಪಾಲಿಗೊಲಿದ ಪ್ರೇಮ.. ಪ್ರೇಮ..

ದುಃಖದಲಿ ಒಮ್ಮೊಮ್ಮೆ ಕಣ್ಣೀರು ಬರದಿರಲು

ದುಃಖದಲಿ ಒಮ್ಮೊಮ್ಮೆ ಕಣ್ಣೀರು ಬರದಿರಲು 

ಅತಿಯಾದ ದುಃಖವೇ ಕಾರಣವಿರಬೇಕು 
ಸುಲಭಕ್ಕೆ ಕಣ್ಣೀರು ಬರುವುದು ಹೆಚ್ಚಲ್ಲ 
ಬಾರದಾಗಿನ ನೋವ ನುಂಗುವುದ ಅರಿಬೇಕು 

ಬಿಟ್ಟುಕೊಡುವುದರಲ್ಲಿ ಹೆಚ್ಚು ಖುಷಿ ಪಡುವವರು 
ಸ್ವಾರ್ಥಿಗಳಾಗಿ ತಮ್ಮನ್ನು ತಾವ್ ವಿಮರ್ಶಿಸಿಕೊಳ್ಳಬೇಕು 

ಅತ್ತ ಆಕಾಶ ಮಡಿಲನ್ನು ಸವರಿದ ಗುಬ್ಬಿ

ಅತ್ತ ಆಕಾಶ ಮಡಿಲನ್ನು ಸವರಿದ ಗುಬ್ಬಿ

ಎರಗಿ ಬಂತು ಕಣ್ಣಲ್ಲಿ ಕನಸನು ತುಂಬಿ
ಎಲೆಯ ಅಂಚಲ್ಲಿ ಹಿಮದ ಹನಿಯೊಂದು
ಜಾರೋ ಕ್ಷಣವನ್ನೇ ನೋಡುತ ಕಾದು
ಇದ್ದಲ್ಲೇ ಇಂಗಿದರೆ ನೀಗದು ದಾಹ
ಗುಬ್ಬಿ ಮರುಗಿತು ಕುಂತಲ್ಲೇ!

ಗುಬ್ಬಿ ತನ್ನ ರೆಕ್ಕೆಯ ಬಡಿಯಿತು ಒಮ್ಮೆ
ಜಡದ ಬಲೆಯ ಮುರಿವಂತೆ ಒಮ್ಮೆಲೆಗೆ
ನೂರಾರು ಕಷ್ಟಗಳ ದಾಟಿ
ಹೋರಾಡೋ ಶಕ್ತಿಯನು ಕಟ್ಟಿ
ಭೂಲೋಕದ ಸೌಂದರ್ಯ ಸಾರಿತು ನದಿಗೆ
ಅಪ್ಪಟ ಚಿನ್ನವೇ ನಮ್ಮ ಗುಬ್ಬಿ....

ಊರಿಗೂರೇ ನಿಂತು ನೋಡೋ

ಊರಿಗೂರೇ ನಿಂತು ನೋಡೋ

ಮೋಡಿಗಾರ
ಎಲ್ಲರಲ್ಲೂ ಕೂಡಿ ಬಾಳೋ
ಸಾಹುಕಾರ
ಇನ್ನೇನೂ ಬೇಡ
ನೀನಿರಲು ಸಾಕೆಂದ
ಜೀವ ನಮದಾಗಿದೆ...

ಕರಿ ಮೋಡಕ್ಕೆ ಕರೆ ಬಂದು
ಕರೆಗಿದ ಹಾಗೆ
ಬರಿದಾದಂಥ ನದಿಯೊಂದು 
ಬಿರಿಯಿತು ಹೀಗೆ
ಕಡಲ ಸೇರೋಕೆ
ತುಡಿದ ಹೂವೊಂದು
ಹರಿವ ದೂರಕ್ಕೆ
ಹೆದರಲು ಹೇಗೆ?
ಒಳಗೊಂದು ಹನಿ ಜೇನು
ಯಾರಿಗೆ ಸ್ವಂತ?
ಏನೋ ಹೂವಿನ ಇಂಗಿತ!

ಆ ನೂರಾರು ಅಲೆಯನ್ನು
ದಾಟಿ ಬಂದೂ
ತಾ ಯಾರನ್ನೂ ಈ ವರೆಗೆ ಕಂಡಿಲ್ಲ
ಹಲವಾರು ಕಥೆಯನ್ನು ಕೇಳಿ
ನಿಜವೇನೋ ಸುಳ್ಳೇನೋ ಇಲ್ಲಿ
ಒಳತಳೆದಿರೋ ವಿಷಯ
ತಾನು ತಿಳಿಸಲು ಮಳೆಗೆ
ಅಲೆಯೊಳಗಿನ ಗೆಳೆಯ
ಸಿಗುವ ನೋಡು.. 

ಹೂವನ್ನು ಯಾರಿಗೋ
ನೀಡುವ ಹಂಬಲ
ದಡವಿನ್ನೂ ಹಸಿವಲ್ಲೇ ಕಾದಿದೆ
ಮುಳ್ಳನ್ನು ಎಲ್ಲಕೂ
ದೂರಲು ಆಗದು
ಅತಿಯಾದ ಒಲವನ್ನು ಕೇಳು
ನಡುವೆ ದೋಣಿ ಸಿಗಲು
ಮುಳುಗೋ ಆಸೆ ಇರಲು
ಹೂವು ತಾ ಕೈ ಚಾಚಿ ಕೂಗೀತೇ?!

ಬೆಳಕಾದರೂ, ನಸುಕಾದರೂ

ಬೆಳಕಾದರೂ, ನಸುಕಾದರೂ

ನೆರಳಾಗುವೆ, ಜೊತೆಯಾಗಿರು
ಚಿತ್ತದಲಿ ಮೂಡಿದ
ಸೆರೆ ಮಾಡಿದ
ಮನದಾಳದಲ್ಲಿ ಮೊದಲಾದ
ಸವಿ ಲಯದೊಳಗೆ
ಲಯದೊಳಗೆ
ಕುಡಿಯೊಡೆಯುವ ಸ್ವರವೇ

ನದಿಯೇ, ಓಡೋ ನದಿಯೇ
ನಾ ಕಾದೆ ನೋಡು ನಿನ್ನ ಸಲುವೇ...
ನದಿಯೇ, ಓಡೋ ನದಿಯೇ
ಕೂಡೋದೇ ನೀ ಕಂಡ ಕ್ಷಣವೇ..

ಶಿಲೆಗೆ ಉಳಿ ಪೆಟ್ಟಿಲ್ಲದೆ
ಕಲೆಯ ರೂಪ ಸಿಕ್ಕಂತೆಯೇ
ಸೆರಗನುಟ್ಟ ಬೆಳದಿಂಗಳಂತೆ ಬಂದೆ ನೀನು, ಹಾಗೇನೇ!
ಜೊತೆಗೆ ಇಡುವ ಹೆಜ್ಜೆಗೆ
ಗುರುತುಗಳು ನೂರಾರಿವೆ
ಎಟುಕದಿರೋ ಆಸೆಗಳ ಅನುಭವಿಸುವ ಒಡನೇ..

ಬೆರೆಯುತ ಸಾಗುವ
ಬರೆದ ಕತೆ
ಬಲು ದೂರ ಸಾಗಿ ಬಿಡುವಾಗ 
ಸವಿ ಲಯದೊಳಗೆ
ಲಯದೊಳಗೆ
ಇಣುಕಿ ಬರೋ ಪದವೇ
ನದಿಯೇ, ಓಡೋ ನದಿಯೇ
ನಾ ಕಾದೆ ನೋಡು ನಿನ್ನ ಸಲುವೇ...
ನದಿಯೇ, ಓಡೋ ನದಿಯೇ
ಕೂಡೋದೇ  ನೀ ಕಂಡ ಕ್ಷಣವೇ..

ಇರುವಂತೆ ಇರುವಾಗ

ಹೃದಯವೇ ಹಗುರವಾದೆ

ಹೃದಯವೇ ಹಗುರವಾದೆ

ಹೀಗೇ ಇರು, ನೀ ಇನ್ನೂ ಮುಂದೆ
ಉದುರಿದ ನೆನಪಿನ ಎಲೆಗಳೇನೇ
ಈ ದಾರಿಯ ತುಂಬ
ಅಡಿಯಿಡುವಲ್ಲಿ ಮೂಡಿ ಬಂತೇನೋ
ನನ್ನೆದೆಯ ಪ್ರತಿಬಿಂಬ
ನಡೆದು ಎಲ್ಲವೂ ಸರಾಗ
ಮೂಡೋ ಮಂದಹಾಸ
ಹಗುರ ಆದ ಹೃದಯದೊಳಗೆ ನಾ
ಇರಿಸುವೆನು ನೆನಪನ್ನೇ

(ನೆಮ್ಮದಿ ಹಳೆಯ ಸಂಬಂಧಿ
ಅದರೊಳಗೆ ನಾ ಆಗಿರುವೆ ಬಂದಿ)
ಹೃದಯವೆ ಮಗುವಿನಂತಾದೆ
ಹೀಗೇ ಇರು, ನೀ ಇನ್ನೂ ಮುಂದೆ

ದಾಟಲು ಎಲ್ಲ ಸೀಮೆಯ
ತುಡಿಯುವ ಆ ಹರಿವೆಲ್ಲಿದೆ?
ಅಲೆಯ ಕಾಣೋ ಕಣ್ಣಿಗೆ
ಕಡಲಿನ ಆಳದರಿವೆಲ್ಲಿದೆ?
ನಾ ಹುಡುಕಲೇ ಬೇಕಿದೆ
ನನ್ನೊಳಗೆ ಇದಕುತ್ತರ
ಎದೆಗೊಪ್ಪುವ ಬಡಿತವೇ
ಬೆರಗು ಮೂಡಿಸೋ ಸುಸ್ವರ

ತೇಲೋದಾ ಇಲ್ಲ ಮುಳುಗೋದಾ
ನಾ ಅನಿಸಿದಂತಲ್ಲ
ಎಣಿಸುತ ಬೆರಳ ಓಡೋ ಸಮಯ
ಹಾಗೇ ಕೂರಬೇಕಿಲ್ಲ
ಪ್ರೀತಿ ಮಾಡಬೇಕೀಗ 
ಚೂರು ಹೆಚ್ಚೇ ನನ್ನನ್ನು
ಸಿಕ್ಕ ಹಾಗೆ ನಾ 
ನನಗೇನೇ ಮತ್ತೆ 
ಹುಡುಕಿ ಹೊರಟಂತೆ 

ನೆಮ್ಮದಿ ಹಳೆಯ ಸಂಬಂಧಿ
ಅದರೊಳಗೆ ನಾ ಆಗಿರುವೆ ಬಂದಿ..

ಒಲವಿನ ಆರಂಭಕೆ

ಒಲವಿನ ಆರಂಭಕೆ

ಇದೋ ವೇದಿಕೆ
ನಾನು ರೂಪಿಸುವೆ 
ಕೊಡುವೆಯಾ ನೀನೀಗಲೇ 
ನಗೆ ಸೂಚನೆ 
ತುಂಬ ಕಾದಿರುವೆ 
ಸಂಗಾತಿ 
ನನ್ನಲ್ಲಿ ನಿನ್ನ ತುಂಬಿಕೊಳ್ಳೋ ಹಂಬಲದೊಂದಿಗೆ 
ನಿನ್ನನ್ನೇ 
ನೋಡುತ್ತಾ ನಿಲ್ಲುವೆನು ಹಾಗೆ ಒಲವಿನೊಂದಿಗೆ 
ಬಹಳಾನೇ ಕಾಡಿರುವೆ 
ಇನ್ನೆಷ್ಟು ತಾಳಲಿ ಹೇಳು 

ನಿನ್ನಿಂದಲೇ ಬಾಳಿಗೆ 
ಬೆಳ್ಳಿ ರೇಖೆ ಮೂಡೋ ಹಾಗಂತೆ 
ನೀನಾಡುವ ಮಾತದು 
ಹೊಂಸಲೇಖ ಗೀಚೋ ಸಾಲಂತೆ 
ಆಗಲೇ ಹೋಗಬೇಕೆ 
ಸಂಜೆಗೆಂಪು ಮೂಡೋ ಹೊತ್ತೇ 
ಈ ಬಾನಿಗೂ ಬೇಜಾರಿದೆ 
ಬಣ್ಣ ತಂದು ತೊಡಿಸುವ ಮತ್ತೆ.. ಮತ್ತೆ..

ನಿರಂತರ ಮೂಡಲಿ
ಮಂದಹಾಸ ಹೀಗೇ ಬಾಳಲ್ಲಿ
ನಿರುತ್ತರ ತಾಳುವೆ
ನಿನ್ನ ಮೌನ ಬಿಡಿಸುತ ನನ್ನಲ್ಲಿ
ನೆಮ್ಮದಿ ತಾಣದಂತೆ
ಮುಂಗುರುಳು ತಾಕೋ ವೇಳೆ
ನಿನ್ನತ್ತಲೇ ಬೀಸಿ ಬಂತು
ನನ್ನ ಕೊರಿಕೆಯನೊಮ್ಮೆ ಕೇಳೇ.. ಕೇಳೇ...


ಯಾರಾದರೂ ಸೋತರೆ 
ಗೆದ್ದ ಹಾಗೆ ಆಡುವ ಆಟನೇ 
ನಾವಾಡುವ ಈಗಲೇ 
ಕೇಳುತ ಮನಸಿನ ಮಾತನ್ನೇ 
ದೂರದ 

ದಾಳಿ ಸತತ ದಾಳಿ

ದಾಳಿ ಸತತ ದಾಳಿ

ದಾಳಿ, ಪೀತಿಯು ಮಾಡಿ ಬಿಡಲಿ
ದಾಳಿ ಒಲವ ದಾಳಿ
ದಾಳಿ, ಆರದ ಗಾಯ 
ಇರಲಿ ಇಷ್ಟು ದೂರ 
ಸಿಗೋಣ ಕೈ ಚಾಚಿ
ನಾವಿರುವ ಕಡೆ
ಯಾರಿಗೇನು ಅಂಜೋದು
ಮುಲಾಜು ಎಲ್ಲಿದೆ ನಮಗೆ...

ಇದೇ ಮೊದಲು ಸುಡೋ ವಿರಹ
ಕರೆಯದೇನೇ ಬಡಿದು ಎದೆಗೆ
ಇದೋ ಬಿರಿದ ಹೃದಯದಲ್ಲಿ
ಹೊಕ್ಕಿರೋ ಬೇರು ಆಳದೊಳಗೆ
ಚಿಗುರಿ ಬಂದ ಮಲ್ಲೆ ಹೂವ
ನೀನೇನಾ, ನೀನೇನಾ
ಆಗಮಿಸುತಲೇ
ಘಮಿಸಿದವಳು ನೀನೇನಾ
ಈ ಬಾಳ ತಿದ್ದಿಸಿದವಳು

ಒಂದೇ ಒಂದು ಕಣ್ಣ ಹನಿಯ
ತಾಳೋದಿಲ್ಲ ನಿನ್ನ ಕೆನ್ನೆ
ಹಾಗಾಗಿ ನಾ ಜೊತೆ ಇದ್ದು
ಕಾಯೋದು ನಿನ್ನ ಕಣ್ಣನ್ನೇ
ಅರೆಗಣ್ಣ ತೆರೆಯುವಾಗ
ಅದೇಕೋ ಸಮೀಪ
ನೀ ಬರುವಂತಿದೆ
ಅದೇ ನಾನು 
ಪೂರ್ತಿಯಾಗಿ ತೆರೆದು
ಕಾಯೋಕೆ ನಿಂತಾಗ
ನೀ ಬರದಾದೆಯೇ...

ಬಲು ದೂರ ಸಾಗೋ ಆಶೆಯ

ಬಲು ದೂರ ಸಾಗೋ ಆಶೆಯ 

ಆಕಾಶ ಮುಟ್ಟೋ ಆಸೆಯಾ? 
ಹಾರಾಡು.. ಹಾರಾಡು..
ಬದುಕನ್ನು ಹೆಚ್ಚು ಪ್ರೀತಿಸು 
ಕನಸ ಬಿಡದೆ ಹಿಂಬಾಲಿಸು
ಹಾರಾಡು.. ಹಾರಾಡು..
ಎಲ್ಲೇ ನೀನಿದ್ದರೂ
ಗೆಲುವ ಕಣ್ಮುಂದಿಡು
ಹಾರಾಡು ಇದೇ ಸಮಯ
ಗೆಲುವಲ್ಲೇ ಇದೆ ವಿಷಯ

ಮುತ್ತು ಮಳೆ ಎಷ್ಟು ಹೊತ್ತು ಹೊಯ್ಯಬೇಕು

ಮುತ್ತು ಮಳೆ ಎಷ್ಟು

ಹೊತ್ತು ಹೊಯ್ಯಬೇಕು
ಕತ್ತಲಿನ್ನೂ ಎಷ್ಟು
ದೂರ ಕಾಯಬೇಕು
ಬಾ ತೋರುವೆ ಮಾರ್ಗ
ಅಂಗೈಯ್ಯಲೇ ಸ್ವರ್ಗ
ಕತ್ತಿ ಮಸೆವ
ಕಣ್ಣು ತೋಯದೇನು
ಕದ್ದು ಮುಚ್ಚಿ
ಕನಸಾಗಿ ಹೋಗು ನೀನು
ಸರದಾರ, ಹಮ್ಮೀರ
ಸುಕುಮಾರ
ಇನ್ನೇನಿದೆ ಹೇಳೋದಕೆ, ಕೇಳೊದಕೆ 
ಇನ್ನೇನಿದೆ ಹೇಳೋದಕೆ, ಕೇಳೊದಕೆ 

ಕಣ್ಣೆತ್ತಿ ನೋಡಲು ಮಾಯವಾದೆ
ಮನಸಲ್ಲಿ ಮಾಯದ ಗಾಯವಾದೆ (೨)
ಹಾ.. ಎಲ್ಲೇ ನಾ ಹೋಗಲಿ ಅಲ್ಲೇ
ಕಂಡೂ ಕಾಣದ ಹಾಗೆ ನೀ ಇದ್ದು ಬಿಟ್ಟೆ

ಇನ್ನೂ ಏಕೆ ಹೇಳು ಈ ದೂರ 
ನೀ ಇಟ್ಟೆ ಏಕೆ ಹೇಳು ಈ ದೂರ (Chorus)

ಅರೆ.. ನಿನ್ನತ್ತ ಕಂಗೆಟ್ಟು ಕಾದಿಟ್ಟ ಪ್ರೀತಿನ 
ಹೇಳ ಬೇಕು ಇನ್ನೂ ಮನಸಾರ..

ಅರೆ.. ನಾನೇನು ಮಾಡಲಿ ಈ ಪ್ರೇಮವೇ ಮಾಯೇ!


ಓ.. ಹುಣ್ಣಿಮೆಯು ಜೊನ್ನು ಸೂಸಿದಂತೆ
ನೀನ್ನ ಪ್ರೀತಿಸುವೆ, ನಾ ಪ್ರೀತಿಸುವೆ
ಮಿಂದ ಎಲೆಗೆ ಇಬ್ಬನಿಯ ಪೂಸಿ
ಪ್ರೀತಿಸುವೆ, ನಾ ಪ್ರೀತಿಸುವೆ





ಮತ್ತು ಬರಿಸಲು 
ಬಿತ್ತಿ ಹರಿಬೇಕು 
ಶುರುವಾಗಿದೆ ಒಲವು 
ನಿನಗೆಂದಲೇ ಉಳಿವು 
ಕತ್ತಿ ಮಸೆದರೆ 
ಕಣ್ಣು ಹೊಳೆದೀತು 
ಅಂಗಾಂಗ 

ಒಮ್ಮೆ ಕರೆ ಬಂದರೆ

ಒಮ್ಮೆ ಕರೆ ಬಂದರೆ 

ಓಡುವೆ ನಿನ್ನೆಡೆ 
ನಿನ್ನ ನೆರಳಿದ್ದೆಡೆ 
ಆಗುವೆ ಕೈ ಸೆರೆ 
ಕಾರಣ ಇಲ್ಲದೆ
ಮೂಡುವ ನೆನಪಿಗೆ 

ಯಾರೊಂದಿಗೂ ನಾ ಹೇಳಲು ಆಗದ ವಿಷಯ

ಯಾರೊಂದಿಗೂ

ನಾ ಹೇಳಲು ಆಗದ ವಿಷಯ 
ನಿನ್ನೊಂದಿಗೆ 
ನಿವೇದನೆ ಮಾಡುವ ಸಮಯ 
ಬಾ ಬೇಗ ನೀ ವಾಲು ಈ ತೋಳಲಿ 
ಅಭ್ಯಾಸವಾಗಿರುವೆ ನೀ ಬಾಳಲಿ 
ರಂಗೇರಿದ ಓ ಗೊಂಬೆಯೇ 
ಕಣ್ಣಂಚಲೇ ಮಾತಾಡಿಸು 

ಇನ್ನೂ ಸತಾಯಸು ನನ್ನ 
ಹೀಗೇಕೆ ಆತುರ?
ಪ್ರೀತಿ ಮಳೆಲಿ ನೆನೆದಾಗ 
ಎದೆ ಉಕ್ಕೋ ಸಾಗರ 
ತಿಂಗಳ ಬೆಳಕು ನೀನಾದೆಯೇ
ಹಂಬಲ ತಣಿಸೋ ಸಂಗಾತಿಯೇ 
ನಾ ಮೌನಕೆ ಶರಣಾಗುವೆ 
ನಿನ್ನಿಷ್ಟಕೆ ಆರಂಭಿಸು 

ನಮ್ಮ ಈ ದೂರ ಹೀಗೇನೇ ಇರಬೇಕು ಗೆಳತಿ

ನಮ್ಮ ಈ ದೂರ ಹೀಗೇನೇ ಇರಬೇಕು ಗೆಳತಿ

ನೆನಪಲ್ಲೇ ಮಾತಾಡುವಾಸೆ
ನಮ್ಮ ಈ ದೂರ ಹೀಗೇನೇ ಇರಬೇಕು ಗೆಳತಿ
ಪರದಾಟ ಹೆಚ್ಚಾಗುವಾಸೆ
ನನ್ನ ಉಸಿರಾಟ ನಿಲ್ಲೋದು ನಿನ್ನಿಂದಲೇ
ನಿನ್ನ ಕೈಲಾದರೆ ಉಳಿಸು
ನನ್ನ ಮಾತೆಲ್ಲ ಮರೆತೋಯ್ತು ನಿನ್ನಿಂದಲೇ
ಮತ್ತೆ ನೀನಾಗಿಯೇ ನುಡಿಸು
ಪ್ರೇಮಕ್ಕೆ ಸೀಮೆ ಯಾರು ಎಳೆದವರು
ಗೆಲ್ಲುವ ಸೂತ್ರ ಯಾರು ತಿಳಿದವರು
ಒಂದಾದ ನಾವು ದೂರವೇ ಆದರೂ
ಪ್ರೇಮಕ್ಕೆ ಹಿಂದಿನಿಂದಲೂ ಹಳಬರು..

ನಿನ್ನದೇ ಧ್ಯಾನಕೆ ಸೀಮಿತ ನಾನು
ಒಮ್ಮೆ ನೀ ಎದುರಲಿ ಬರುವೆಯಾ ಏನು?
ಎಲ್ಲ ಹೇಳಲು ಆಗದು ಮಾತಲಿ 
ಎದೆಗೆ ನೀ ಒರಗುತ ಆಲಿಸು ನೀನು.. ಆಲಿಸು ನೀನು 
ಕಂಡ ಕನಸಲ್ಲಿಯೂ ಬಂದು ಬೇಕಂತಲೇ 
ನನ್ನ ಮಗುವಂತೆ ನೇವರಿಸು 
ಯಾವ ಕತೆಯಲ್ಲಿ ನೀ ನನ್ನ ಎದುರಾದೆಯೋ 
ಆ ಕತೆಯನ್ನು ಬಾ ಬಿಡಿಸು 

ಸಣ್ಣಗೆ ನಗೆಯನು ಚೆಲ್ಲುತಿರು ಚೆಲುವೇ

ಸಣ್ಣಗೆ ನಗೆಯನು ಚೆಲ್ಲುತಿರು ಚೆಲುವೇ

ನಿನ್ನ ಜೊತೆಗಿರುವೆ
ಇಗೋ.. ನಿನ್ನ ಜೊತೆಗಿರುವೆ
ತಣ್ಣಗೆ ಇಳಿದಿರೋ ಸುರಿಮಳೆಯೊಳಗೂ 
ನಿನ್ನ ಗುರುತಿಡುವೆ
ಸಖಿ.. ನಿನ್ನ ಗುರುತಿಡುವೆ
ಆಸೆ ಕಡಲ ಅಲೆಗಳ ಮಡಿಲ
ಕೇಳಿ ಪಡೆದ ದಡದಲಿ ಮರಳ
ಕೂಡಿ ಇರಿಸಿರುವೆ
ಹೊಸ ಗೂಡು ಕಟ್ಟಿರುವೆ

ಸಮ್ಮತಿಸು, ಸಮ್ಮತಿಸು
ಉನ್ನತ ಮಾತೊಂದಿದೆ
ಆಡದೆಲೆ ಕೇಳುವೆಯಾ
ನಾಚಿಕೆ ಸಾಕಾಗಿದೆ
ಇದೇ ಮೊದಲ ಒಲವು
ಎದೆ ಬಡಿದು ನಲಿವು
ಮಿಂದು ಕಾದಿರಲೇ  ಹೇಳು, ಹೇಳು
ನಿನ್ನ ಸೋಂಕಿನಲಿ ಇನ್ನು ಮಾಗಲೇ..
ಸಮ್ಮತಿಸು, ಸಮ್ಮತಿಸು.. 

ಅಚ್ಚೆಯಂತೆ ಮೂಡಿ ಬಂದೆ ಕಣ್ಣಲಿ
ನಾ ಕಣ್ಣು ಮುಚ್ಚಿ ಕೂಡ ನಿನ್ನ ಕಾಣುವೆ
ಚಂದಿರ ನೀ ಅಲ್ಲವೇ?
ನೆಚ್ಚಿಕೊಂಡು ನಿನ್ನ ಕಿವಿ ಕಚ್ಚಲೇ
ನಾ ಎಚ್ಚರವೇ ಆಗದಂತೆ ಬೆಚ್ಚಲೇ
ಮತ್ತೆ ಮತ್ತೆ ಸೋಲುವೆ
ಕನಿಕರವಿರದ ಕನವರಿಕೆಗಳ ಎದುರಿಸಿದೆ ಸತತ.. ಆಆಆ
ಕವಿತೆಯ ಕೊನೆಗೆ ಹೆಸರಿಗೆ ಬದಲು ನಾನಿರುವೆ ಖಚಿತ.. ಆಆಆ

ದೂರದಿಂದ ಬೀಸಿ ಬಂದಿದೆ

ದೂರದಿಂದ ಬೀಸಿ ಬಂದಿದೆ 

ಒಂದು ಚೇತನ 
ಎಲ್ಲವನ್ನೂ ದಾಟಿದಾಗಲೇ 
ಪೂರ್ತಿ ಜೀವನ 
ಏನಾದರೂ ನೀ ಸಾಧಿಸು
ಈ ಬಾಳನು ರಂಗಾಗಿಸು

ಇತಿ ಮಿತಿ ಇಲ್ಲದೆ ಕಲಿತು
ಕನಸನ ಕಾಣುವುದನ್ನು
ಜಗವಿದು ನಮ್ಮದು ಎಂದು
ವ್ಯಾಪಿಸ ಬೇಕಿದೆ ಕಣ್ಣು
ಪ್ರೀತಿಯ ಹಂಚಿ
ಬಾಳಿದರೇನೇ
ಖುಷಿಯನು ಕಣುವೆ ನೀನು

ಈ ಕತ್ತಲ ಆಚೆ ಇದೆ
ಬೆಳದಿಂಗಳ ಹೊಸ 

ನನ್ನಲ್ಲಿ ನೀನು ಒಂದಾಗು ಸಾಕು

ನನ್ನಲ್ಲಿ ನೀನು ಒಂದಾಗು ಸಾಕು

ನೀನಿದ್ದ ಮೇಲೆ ಬೇರೇನು ಬೇಕು
ಈ ಜೀವ ಸೋತು ಒದ್ದಾಡುವಾಗ
ಉಸಿರಾಗಿ ನೀನು ಕಾಪಾಡಬೇಕು

ನೀ ಗೀಚಿ ನೀಡು ನಿನ್ನೆಲ್ಲ ಪಾಲು
ಜೊತೆಯಾಗಲೀಗ ನಂದೊಂದು ಸಾಲು
ಏನಾಗಬೇಕು ಹೃದಯಕ್ಕೆ ನೀನು? 
ಮಾತಾಡದೇನೇ ಜವಾಬು ಹೇಳು

ಆಗಾಗ ಬಂದು ಹೋಗು
ಕನಸಲ್ಲೂ ನಿಂದೇ ಕೂಗು
ನನ್ನೆಲ್ಲ ದಾರಿಲೂ ನೆರಳಂತೆ ಸಾಗು
ಒಂದೊಂದೂ ಕ್ಷಣವ ನಾನು
ಕೂಡಿಟ್ಟುಕೊಳ್ಳಬೇಕು
ನಿನ್ನೊಂದಿಗೇ ಇರುವೆ ನಾ ಕೊನೆಯವರೆಗೂ...

ಕೈಯ್ಯಾರೆ ಬಂದು ಬಾಗೀನ ನೀಡು
ಕೂಡಿಟ್ಟು ಕೊಡುವೆ ನನ್ನೆಲ್ಲ ಹಾಡು... 

Saffire...

 (ಏನೇ ಆದರೂನು ನಕ್ಕು ಕುಣಿ ಜೊತೆಗೆ 

ಎಲ್ಲ ಬಣ್ಣ ಕೂಡಿದಂತೆ ಒಂದೇ ಸರ್ತಿಗೆ
ಸದ್ದು ಮಾಡಬೇಕು ಎಲ್ಲ ಒಳ್ಳೆ ಕೆಲಸ
ಗಾಳಿ, ನೀರು, ಭೂಮಿ ಇಲ್ಲಿ ಎಲ್ಲರದ್ದೂ.. Saffire)

ಒಂದುಗೂಡಿ ಬನ್ನಿ ಎಲ್ಲ ಎಲ್ಲೇ ಇದ್ದರೂ
ನಾಳೆ ಹೇಗೋ ಏನೋ ಎಂದು ಯಾರು ಬಲ್ಲರು
ನೂರು ರಾಗ ಕೂಡಿದಾಗ ಹುಟ್ಟೋ ಹಾಡಿದು
ಬಣ್ಣ ಬಣ್ಣ ಸೇರಿಲು ವಿಭಿನ್ನ ಬಣ್ಣ.. Saffire
ಸದ್ದು ಮಾಡಬೇಕು ನಮ್ಮ ಒಳ್ಳೆ ಕೆಲಸ
ಹಂಚಿಕೊಂಡು ಬಾಳಿದಾಗ ಇಲ್ಲ ವಿರಸ
ಬಿನ್ನ ಬಿನ್ನವಾದ ನಮ್ಮ ವೇಷ ಭೂಷಣ 
ಬಣ್ಣ ಬಣ್ಣ ಸೇರಿಲು ವಿಭಿನ್ನ ಬಣ್ಣ.. Saffire

ಕತೆ ಶುರು ಇದೋ
ಹೊಸ ಹಾಳೆ-
-ಯ ತುರುವಿಗೆ.. Saffire
ಇದೇ ಥರ ನಗು
ಸಿಗೋ ನಾಳೆ-
-ಯ ವಿಷೇಶವೇ.. Saffire

ಬಂತು ಬಂತು ನೋಡಿ ಮತ್ತೆ ಹಬ್ಬದ ಕಳೆ
ರೆಕ್ಕಿ ಬಿಚ್ಚಿ ಹಾರೊದಕ್ಕೆ ವೇಳೆ ಈಗಲೇ
ಎಲ್ಲ ರುಚಿ ಸೇರಿ ಆದ ಸವಿ ರುಚಿಗೆ
ಬಣ್ಣ ಬಣ್ಣ ಸೇರಿಲು ವಿಭಿನ್ನ ಬಣ್ಣ.. Saffire

ಧರೆಗಿಳಿಯುವ ಕುಣಿಸುವ ಮಳೆ ಹನಿ ಹನಿಯೇ

ಧರೆಗಿಳಿಯುವ ಕುಣಿಸುವ ಮಳೆ ಹನಿ ಹನಿಯೇ

ಕನವರಿಕೆಯ ಕದ ತರೆಯುವ ಸವಿ ಗಳಿಗೆ
ಈ ವೇಳೆ ಇಬ್ಬರದೂ ಒಂದೇ ಪಯಣ, ಅನಿಸುವುದು ಏಕೋ
ಚಲಿಸುವೆನು ಸ್ಥಿರವಾಗಿ ನಡೆಸಲು ನೀ ಪ್ರತಿ ನಡಿಗೆಯನು
ಏನೋ ಖುಷಿಯಿದೆ, ಏನೋ ಖುಷಿಯಿದೆ
ನೀನು ಇರಲು ಬಳಿಯೇ
ಏನೋ ಖುಷಿಯಿದೆ, ಏನೋ ಖುಷಿಯಿದೆ
ಮನಸೇ ನಿನಗೂ ಖುಷಿಯೇ..

ಸ್ವೀಕರಿಸುವೆಯೇನು ಈ ಹೃದಯವ ನೀನು
ಕರೆದಾಗ ಬಳಿ ಬಂದು ಓ ಸಖ
ಕಾತರಿಸುವೆ ನಾ ಹೀಗೇ, ನೀ ಬರೋ ದಾರಿಯ ಕಾದು
ನೀ ಕಾಣೋ ಮರು ಕ್ಷಣವೇ ಅರಳಿತು ನನ್ನ ಮುಖ
ಇರುವುದು ಇಷ್ಟೇ ಮಾತು
ಬೆರೆಸುವ ಮೌನವ ಕೂತು
ಮುಗಿಯದಿರೋ ಪದಗಳಿಗೆ
ಕೊಡುತಲಿ ಕವಿತೆಯ ಮೆರವಣಿಗೆ

ಏನೋ ಖುಷಿಯಿದೆ
ನೀನು ಇರಲು ಬಳಿಯೇ
ಏನೋ ಖುಷಿಯಿದೆ
ಮನಸೇ ನಿನಗೂ ಖುಷಿಯೇ..

ಮಲ್ಲೆ ಹೂವೆ.. ಎಷ್ಟು ಚಂದ ನೀನು ಮುದ್ದು ನಲ್ಲೆ

ಮಲ್ಲೆ ಹೂವೆ

ಎಷ್ಟು ಚಂದ ನೀನು ಮುದ್ದು ನಲ್ಲೆ
ಮಲ್ಲೆ ಹೂವೆ
ನಿನ್ನ ನೋಡಿದ ಕೂಡಲೇ ಸೊಲುವೆನಲ್ಲೇ
ಸಿಹಿ ಜೇನೇ
ನೀ ಗೆದ್ದೆ ನನ್ನ ಮಾತಿನಲ್ಲೇ
ಸಿಹಿ ಜೇನೇ
ಆಹಾ ಕನ್ನಡ ಸೊಗಡ ಕವಿತೆ ಸಾಲೇ
ಜೀವ ಉಳಿಸೋದು ನೀ ನೀಡೋ ಉಸಿರೇನೇ
ಹೃದಯ ಮಿಡಿಯೋಕೆ ನೆಪವೆಂದೂ ನೀನೇನೇ
ಇತರೆ ವಿಷಯ ಯಾಕೆ
ಚತುರೆ ನೀ ನನ್ನಾಕೆ 
ಬದುಕು ತರಾತುರಿ ಬದಲಾಗಿ ಹೋಗಿಹುದೇ.. 
ಬೆಳಕು ಬೆರಗಾಗಿ ನಿಂತಿದ್ದ ಕ್ಷಣದಲ್ಲಿ
ಕನಸು ಕನವರಿಸಿ ಕಾದಿದ್ದು ನಿನ್ನನ್ನೇ
ಕೆನ್ನೆ ಹಿಡಿದು ಚಿವುಟು
ಬಿಡಿಸು ಮನದ ಒಗಟು
ಬಂದೆ ನೊಡು ನಾನು ನಿನ್ನ ಬೆನ್ನ ಹಿಂದಿಂದೆ...

ಮಲ್ಲೆ ಹೂವೆ
ಎಷ್ಟು ಚಂದ ನೀನು ಮುದ್ದು ನಲ್ಲೆ
ಮಲ್ಲೆ ಹೂವೆ
ನಿನ್ನ ನೋಡಿದ ಕೂಡಲೇ ಸೊಲುವೆನಲ್ಲೇ


ಎಷ್ಟು ಹೊತ್ತು ಅಂತ ನಾ
ಧ್ಯಾನ ಮಾಡಿಕೊಂಡು ಕೂರೋದು
ವರವನು ನೀಡುವ ದೇವತೆಗಾಗಿ..
ಆದೆ ನೀನು ಪ್ರತ್ಯಕ್ಷ
ಏನು ಬೇಕೋ ಕೇಳು ಅನ್ನುತ್ತಾ
ಇದ್ದು ಬಿಡು ನೀ ಜೊತೆ ಅನಲೇನೇ...
ಬುಗುರಿ ಆಟಕ್ಕೆ ಕೂಗುವೆ ಏತಕ್ಕೆ
ನನ್ನನ್ನೇ ತಿರುಗಿಸು ಬಾ ನಿನ್ನಿಷ್ಟಕ್ಕೆ
ಕಳೆದೋದೆ, ಕಳೆದೋದೆ
ಹುಡುಕಿ ಕೊಡುವೆಯಾ ನನ್ನೇ.. 
ವರಸೆ ಬದಲಾಗಿ ಹೋದಂತೆ ನಾನಿರುವೆ
ಏನೂ ಆಗಿಲ್ಲ ಎಂಬಂತೆ ನೀನಿರುವೆ
ಕಾಲ ಕೆಟ್ಟಿದೆ ನೋಡು
ಒಳ್ಳೆ ಹುಡುಗನ ಪಾಡು
ಕೇಳಿ ಹೋಗು ದೂರ ಏಕೆ ನಿಂತಿರುವೆ?

ಹಸಿವನು ನೀಗಿಸೋ

ಹಸಿವನು ನೀಗಿಸೋ 

ಕಿರು ನಗೆ ನಿನ್ನದು 
ಹೊಸ ಥರ ಭಾವನೆ 
ವಿವರಿಸಲಾಗದು 
ನೂರು ಬಾರಿ ಹೇಳಿವೆನು ಆಲಿಸೆಯಾ 
ಪ್ರೀತಿ ಮಾತು ಆಡದೆಯೂ ಕೇಳುವೆಯಾ 
ಮತ್ತೆ ಮತ್ತೆ ನನ್ನ ಹೀಗೇ ಕಾಡಿಸಲು 
ಸುತ್ತ ಮುತ್ತ ಎಲ್ಲ ನೀನೇ ಕಾಣಿಸೆಯಾ 
(ಎಲ್ಲೇ ಹೋದರಲ್ಲಿ ನೀನೇ ಸಿಗುವೆಯಾ?)

(ನಿನಗಿದೋ ಉಡುಗೊರೆ
ಈ ಜನುಮ
ಮರೆತರೆ ಬದುಕೆಲ್ಲಿ
ಕುಣಿಸಿದೆ ಮನಸನು
ಈ ಸನಿಹ
ಒಲಿದಿರೋ ಖಿಷಿಯಲ್ಲಿ)
ಜನುಮಕೆ ಉಡುಗೊರೆ 
ನಿನ್ನಿರುವಿಕೆ
ಮರೆಯುವ ಮಾತೆಲ್ಲಿ 
ಮನದಲೇ ಕುಣಿಯುವೆ 
ಈ ಸನಿಹಕೆ 
ಒಲಿದಿರೋ ಖುಷಿಯಲ್ಲಿ 
ಒಂದು ಗುಟ್ಟು ನಿನ್ನ ಮುಂದೆ ಬಿಚ್ಚಿಡಲೇ 
ರೆಪ್ಪೆಯಲ್ಲಿ ನಿನ್ನನಿಟ್ಟು ಬಚ್ಚಿಡಲೇ 
ಕದ್ದು ಮುಚ್ಚಿ ಓಡಾಡೋದು ಇನ್ನೇತಕೆ 
ಯಾರಿಗೂ ಗೊತ್ತಾಗದಂತೆ ಮುತ್ತಿಡಲೇ…

ನೂರು ಬಾರಿ ಹೇಳಿವೆನು ಆಲಿಸೆಯಾ 
ಪ್ರೀತಿ ಮಾತು ಆಡದೆಯೂ ಕೇಳುವೆಯಾ 
ಮತ್ತೆ ಮತ್ತೆ ನನ್ನ ಹೀಗೇ ಕಾಡಿಸಲು 
ಸುತ್ತ ಮುತ್ತ ಎಲ್ಲ ನೀನೇ ಕಾಣಿಸೆಯಾ 

ತಂದಿಟ್ಟರೂ, ಮಾಡಿಟ್ಟರೂ

ತಂದಿಟ್ಟರೂ, ಮಾಡಿಟ್ಟರೂ

ಮುಂದಿಟ್ಟರೂ, ತುತ್ತಿಟ್ಟರೂ
ಕೈಗಿಟ್ಟರೂ, ಬಾಯ್ಗಿಟ್ಟರೂ ಬೇಡ ಊಟ
ಮುಚ್ಚಿಟ್ಟರೂ, ಬಚ್ಚಿಟ್ಟರೂ
ಕಟ್ಟಿಟ್ಟರೂ, ಎತ್ತಿಟ್ಟರೂ
ಬಿಚ್ಚಿಟ್ಟರೆ, ಬುಕ್ಕುತ್ತವೆ ಕುರ್ಕು ಮಾತ್ರ
ಟಿವಿ ಮುಂದೆ ಘಂಟೆಗಟ್ಲೆ
ಬೇಡ ಏನೂ ಚಾಕ್ಲೇಟ್ ಬಿಟ್ರೆ
ಚೀರಾಡ್ತವೆ, ಗೋಳಾಡ್ತವೆ, ಹಾರಾಡ್ತವೆ
ಇಷ್ಟೆಲ್ಲಾ ಆಗಿ ಸುಸ್ತಾಗಿ ಹೋಗಿ
ದೇವ್ರಂತೆ ಮಲ್ಗೋ ಮಕ್ಳನ್ನ ನೋಡಿ 
ಕಾರ್ಗೋಯ್ತು ಜೀವ, ಮರ್ತೊದೆ ನೋವ

ಕಂದ ನಿನ್ನಿಂದ ಸಿಕ್ಕ ಆನಂದ
ಹೇಳೋಕೆ ಮಾತೆಲ್ಲಿದೆ

ನಿನ್ನ ಕಣ್ಣ ನೂರು ಬಣ್ಣ

ನಿನ್ನ ಕಣ್ಣ 

ನೂರು ಬಣ್ಣ 
ನನ್ನಲ್ಲಿ ಮೂಡೋದು 
ಎಷ್ಟು ಚನ್ನ 
ಹೇಳಿ ನೋಡು 
ಪ್ರೀತಿಯನ್ನ
ನಾನಾಗಿ ನಿನ್ನಲ್ಲಿ
ಹೇಳೋ ಮುನ್ನ

ಪುಟ್ಟ ಪುಟ್ಟ ಆಸೆ
ನೀ ಕೊಟ್ಟು ಹೋದೆಯಲ್ಲ
ಕದ್ದು ಬಿಟ್ಟೆ ನೀನು
ನನ್ನ ಕನಸನ್ನೆಲ್ಲ 
ಕೈಯ್ಯ ಕಟ್ಟಿ ನಿಂತು
ನೀನಾಡೋ ಮಾತಿಗೆಲ್ಲ
ಮತ್ತೆ ಮತ್ತೆ ಹೀಗೇ
ನಾ ಸೋಲುವೆನಲ್ಲ

ನಿನ್ನಲ್ಲಿ ನಾ
ನನ್ನಲ್ಲಿ ನೀ
ಇನ್ನಿಲ್ಲ ಬೇರೆ ಸಂಗತಿ
ನಿನ್ನೊಂದಿಗೆ
ಈ ಜೀವನ
ರೋಮಾಂಚನ...

ಮುಂದೋಡೋ ಕಾಲಾನ
ನಿಂತಲ್ಲೇ ನಿಲ್ಲಿಸೋಣ
ನಿಂತಲ್ಲೇ ನಿಲ್ಲಿಸೋಣ ಎಲ್ಲ ಖುಷಿಗಳ
ಒಂದೊಂದು ಕ್ಷಣನೂ
ಕೂಡಿಟ್ಟು ಪ್ರೀತಿಸೋಣ
ಕೂಡಿಟ್ಟು ಪ್ರೀತಿಸೋಣ ಮನದ ಅಂಗಳ
ನೀ ಕೇಳೋ ಕೂಡಲೇ
ಹೃದಯಾನ ನೀಡುವೆ
ನೀನಿಲ್ಲವಾದರೆ ಆತಂಕಗೊಳ್ಳುವೆ
ಅನಂತವನ್ನು ನಾ
ಹಂತಂತವಾಗೆಯೇ
ಹೆಜ್ಜೆಗೆ ಹೆಜ್ಜೆಯ ಹಾಕಿ ದಾಟುವೆ

ಮಾತಿಗೆ ಮುಂದಾಗಿ

ಮಾತಿಗೆ ಮುಂದಾಗಿ

ಕಣ್ಣಲಿ ಒಂದಾಗಿ
ಹೇಳದ ಮಾತೆಲ್ಲ 
ಸುಮ್ಮನೆ ನಿಂತಾಗಿದೆ
ಆಸೆಯು ಬಾನಾಗಿ
ಒಮ್ಮೆಲೆ ತಾನಾಗಿ
ಹಾರಿದ ಜೀವಕ್ಕೆ
ಜೀವವು ಬಂದಾಗಿದೆ
ಜ್ಞಾಪಿಸು ಇನ್ನೊಮ್ಮೆ ನೀ
ಸೋತಿದೆ ನನ್ನ ದನಿ
ನೀನಾಗೇ ನನ್ನನ್ನು ಸಂಬಾಳಿಸು
ಈ ಬಾಳ ಇನ್ನಷ್ಟು ರಂಗೇರಿಸು

ಇದೋ ಬಂದೆ ನಿನ್ನ ಹಿಂದೆ
ಅದೇನೆಂದು ಹೇಳು ಮುಂದೆ
ನಿಧಾನಾನೇ ಪ್ರೀತಿಲಿ ಅಪಘಾತವು
ಇರೋದೊಂದು ಗುಂಡಿಗೆಲಿ
ಇರೋಬರೋ ಜಾಗಾನೆಲ್ಲ
ಅತಿಕ್ರಮ ಮಾಡೋದೇ ಅನುರಾಗವು
ಓ.. ಮನಸಿಗೆ ಒದ್ದಾಡುವಂತ ಸಜೆ ನೀಡಿದೆ
ಕನಸಲ್ಲಿ ಮುದ್ದಾಡಿ ಹೋಗಿ ನಿದ್ದೆ ಬಾರದೇ
ಸರಿ ಈಗ ಸಮೀಪವಾಗು ತಡ ಮಾಡದೆ..

ಅದೇ ಗುಂಗು ಮತ್ತೆ ಮತ್ತೆ
ಮರೆತಂಗೆ ನನ್ನ ಸುತ್ತಿ
ಬರೋ ಥರ ಆಗೋದು ರೂಢಿಯಾಗಿದೆ
ಕರೆ ನೀಡಿ ನೋಡು ಈಗ
ತಡೆದಂತೆ ಇನ್ನೂ ಬೇಗ
ಸಿಗೋ ವೇಘ ನೀಡೋದು ಪ್ರೀತಿಯಾಗಿದೆ
ಓ.. ಜಪ ತಪ ಮಾಡೋದೇ ಬೇಡ ವರ ದಕ್ಕಿದೆ 
ನೆಪ ಗಿಪ ಏತಕ್ಕೆ ಅಂತ ಸೆರೆ ಸಿಕ್ಕಿದೆ
ಅಡೆ ತಡೆ ಎಲ್ಲಕ್ಕೂ ಊಫಿ ಬಿಡು ಅಂತಿದೆ..

ನಿಲ್ಲದೆ ಮಿಂಚುವ ತಾರೆಯೇ

ನಿಲ್ಲದೆ ಮಿಂಚುವ ತಾರೆಯೇ

ನೀರಲ್ಲಿ ನಾಚುವ ತಾವರೆ
ಇನ್ನೊಮ್ಮೆ ಹೇಳುವೆ ಆಲಿಸು
ಪ್ರೀತಿಯ ಸಂಗತಿ.. ಓ..
ನೀನೊಂದು ಸುಂದರ ಅಚ್ಚರಿ
ಕಾಮನ ಬಿಲ್ಲಿನ ಮಾದರಿ
ನಿನ್ನಂತೆ ನನ್ನನು ಆಗಿಸು
ಪ್ರೀತಿಯ ಸಾರತಿ..
ಹೂವಾಗು ನಿನ್ನ ಸುತ್ತಾನೇ
ಸುತ್ತೋದು ಇನ್ನೂ ನಾನೇನೇ
ನೀನೊಮ್ಮೆ ನೋಡಿ ನಕ್ಕಾಗ
ಇರುಳಲ್ಲೂ ಬಿರಿದ ಮುಂಜಾನೆ...

ಉತ್ತರಿವೇ ಇಲ್ಲದಂತೆ
ತತ್ತರಿಸಿ ನಿಂತರೇನು
ಕಟ್ಟ ಕಡೆ ಉಸಿರಿನಲ್ಲೂ
ಬಿಟ್ಟು ಕೊಡೋದಿಲ್ಲ ನಾನು
ಹತ್ತೂರ ತಿರುಗುತ್ತಾ
ನಾನಿತ್ತ ಬರುವಾಗ
ಕಿತ್ತಾಳೆ ಹಣ್ಣಂತೆ
ನೀ ಮಾಗಿ ತೊನೆವಾಗ
ಮುಚ್ಚು ಮರೆ ಏಕೆ ಇನ್ನು 
ಬಿಚ್ಚಿಡುವೆ ಆಸೆಯನ್ನು

ಮನದನ್ನೆ ನಿನ್ನೇ ನಾ ಮೆಚ್ಚಿ
ಒಲವನ್ನೇ ಕೊಡುವೆ ಕೈ ಚಾಚಿ
ಮನಸಾರೆ ಹೇಳುವೆ ಕೇಳು
ಹೃದಯನ ಕೊಡುವೆನು ಮಡಚಿ

ಹಂಬಲದ ಹಾಡು ನಾನು
ಬೆಂಬಲಿಸೋ ರಾಗ ನೀನು
ಚುಂಬಿಸಲೇ ಹೇಳು ಬೇಗ
ನಿನ್ನಧರ ಸಿಹಿಯ ಜೇನು
ಒಲವಾದ ಮೇಲೇನೇ
ಬಲಹೀನ ಆಗೋದಾ?
ಬರೆದ ಓಲೆ ಕೂಡ
ಭಾರ ಅಂತನಿಸೋದಾ?
ಬಂಧನದ ಭೀತಿಯಲ್ಲೇ
ಉಂಗುರವ ತೊಡಿಸಲೇನು

ಆಕಾಶ ದಿಟ್ಟಿಸೋ ವೇಳೆ
ನಕ್ಷತ್ರ ಆಗುವೆ ಕೇಳೆ
ನಾ ಬೀಳೋವಾಗ ನೀ ಅಲ್ಲಿ 
ಬಯಸಿದ್ದನ್ನೆಲ್ಲ ನಾ ಬಲ್ಲೆ

ಕರೆದಾಗ ಬರುವೆಯಾ?

ಕರೆದಾಗ ಬರುವೆಯಾ?

ಕಳುವಾಗಿ ಬಿಡುವೆಯಾ?
ಕದವನ್ನು ತೆರೆದರೆ
ತಿರುವಲ್ಲೆ ನಿಂತೆಯಾ?
ಹಲವಾರು ಕವಿತಯ
ಓದ್ದುತ್ತಾ ಕುಳಿತೆಯಾ
ಬಳಿ ಬಂದು ಸೇರಲಾರೆಯಾ?

ಸಣ್ಣದೊಂದು ವಿನಂತಿಯ 
ಹೇಳುವೆನು ಕೇಳುವೆಯಾ?
ನಿನಗಿಂತ ವಿಷೇಶವು 
ಏನಿಹುದೋ ತಿಳಿಸುವೆಯಾ?
ನೆನ್ನೆ ತಂದ ಉಡುಗೊರೆಗಳಲಿ 
ಏನನು ನಾ ನೀಡುವುದು?
ನಿನ್ನ ಜೊತೆ ಉರುಳುವ ಸಮಯ
ಎಲ್ಲದಕೂ ಹಿಡಿಸುವುದು
ಸರಸದಲಿ ಸಮಪಾಲು
ಇರಿಸುತಲಿರು ನಿನ್ನಲ್ಲಿ ಬೆರೆತರೆ..

ಅಪರೂಪದ ಸವಾರಿಯೇ
ಕೈ ಹಿಡಿದು ಸಾಗಿರಲು
ಅನುರಾಗದ ಹಾಡಲ್ಲಿ ನಾ
ಬಣ್ಣಿಸಲೇ ಈ ಅಮಲು
ತವಕದ ಸುರಿ ಮಳೆಯೆದುರು
ನಿಲ್ಲುವುದು ಚಂದವಿದೆ
ನಡುಕದ ನುಡಿ ಆಡದೆಯೂ
ಎಲ್ಲದಕೂ ಅರ್ಥವಿದೆ
ಗಮನಿಸುವೆ ನಿನ್ನ ಗಮನ
ನನ್ನ ಮೇಲೆ ಇಟ್ಟು ಮುದ್ದಾಗಿ ಗಮನಿಸು..

ಮೊದಮೊದಲ ಮಳೆ ಹನಿಗೆ

ಮೊದಮೊದಲ ಮಳೆ ಹನಿಗೆ

ಮುಗುಳು ನಗೆ ಮನದೊಳಗೆ
ಮಳೆಯಾಗಿ ನೀನು
ಬಳಿ ಬಂದರೆ
ಇಳೆಯಾಗುವೆ ಈಗಲೇ

ನದಿಗಡಲ ಸಂಗಮಿಸೋ
ಸವಿ ಗಳಿಗೆ ಎದುರಲಿದೆ
ಗಡಿಬಿಡಿಯ ಗಡಿಯಿಡದೆ
ಎದೆಗೊರಗು ಗುರಿಗೆಡದೆ
ಗೇಲಿ ಮಾಡುವ ನಿನ್ನ ನೋಟಕೆ
ನನ್ನ ಉತ್ತರ ಮೌನ ಪೀಟಿಕೆ
ಪರಿಗಣಿಸು ಪ್ರಣಯದ ಈ ಪರಿಚಯವ..

ಸರಿಸುವೆನು ಪರದೆಯನು
ಇಣುಕುತ ನಾ ನಿನ್ನೆಡೆಗೆ
ಕವಿತೆಗಳೇ ಕವಿದಿರಲು
ಬೆಳಕಿನ ಹಾಡು ನಸುಕೊಳಗೆ
ದಾರಿಯುದ್ದಕೂ ಹೂವ ಚಾದರ
ನೆತ್ತಿ ಮೇಲಿದೆ ತೆಂಗು ಚಪ್ಪರ
ಉಲಿಯುತ ನೀ, ಒಲಿಯಲು ನಾ ನಲಿಯುವೆನು..

ಕನಸೇ ಮುಗಿದ ಹಾಗೆ

ಕನಸೇ ಮುಗಿದ ಹಾಗೆ 

ಮನಸು ಮುರಿದು ಹೋದೆ 
ಕೈ ಚಾಚಿದ ಮೇಲೆ ಕೂಡ 
ಸನಿಹ ಬರದೆ ಹೋದೆ 
ನ್ಯಾಯವೇ…. ನ್ಯಾಯವೇ..
ಹೇಳಲು ಆಗದ 
ತೀರದ ಸಂಕಟ 
ಕಾಡಿದೆ ಈಗಲೂ 
ಸುತ್ತಲೂ ಮುತ್ತಲೂ 
ಕೊನೆಯಿರದ ಸಾಗರ 
ಮುಳುಗಿಸಿದೆ ಈ ಥರ 

ಕಡೆಗೆ ಉಳಿದೆ ಹೀಗೆ 
ಉಸಿರ ತೊರೆದ ಹಾಗೆ 
ಜೀವಂತ ಅನಿಸೋದೇ ಸುಳ್ಳು 
ಬದುಕು ಹರಿದ ಹಾಳೆ 
ನ್ಯಾಯವೇ…. ನ್ಯಾಯವೇ..
ಹೇಳಲು ಆಗದ 
ತೀರದ ಸಂಕಟ 
ಕಾಡಿದೆ ಈಗಲೂ 
ಸುತ್ತಲೂ ಮುತ್ತಲೂ 
ಕೊನೆಯಿರದ ಸಾಗರ 
ಮುಳುಗಿಸಿದೆ ಈ ಥರ 

ಅಳಿದು ಉಳಿದಿರೋ ಕತೆಯನೊಮ್ಮೆ 
ಮರಳಿ ಜೋಡಿಸಿ ಓದುವೆ 
ಬಳಿದು ನಿನ್ನದೇ ನೆನಪ ಬಣ್ಣ 
ಹೊಸತು ರೂಪವ ನೀಡುವೆ 

ಹನಿ ಹನಿ ಕಥೆ ಹೇಳಿದೆ ಕೇಳೆಯಾ

ಹನಿ ಹನಿ ಕಥೆ ಹೇಳಿದೆ ಕೇಳೆಯಾ 

ಇನಿ ದನಿಯಲಿ ನನ್ನನು ಕಂಡೆಯ 
ಹರಿಯುವ ಹಾಡಲಿ ದೋಣಿ ನಾನಾಗುವೆ 
ನನ್ನ ಸಹಜ ಸಮದ ಜೋಡಿ 
ಪಯಣ ನಿನ್ನದಾಗಿದೆ..
ಕರೆದರೆ ತಿರುಗದೆ ಹೋದರೆ ಮರುಗುವೆ 
ಬೆನ್ನಿಗೂ ಬೆರಗಿದೆ ಎನ್ನುತ ತೊಡಗುವೆ 
ಕಮರಿದ ಕಾರಣ ಗುರುತಿಗೆ ಸಿಗದಿರೆ
ನಿನ್ನ ಒಲವು ಸವರಿ ಅರಳುವಂತೆ 
ಮಾಡಿ ಹೊರಟಿದೆ…

ಜೀವ ಸಖಿ... ಜೀವ ಸಖಿ

ಜೀವ ಸಖಿ... ಜೀವ ಸಖಿ

ದಿನವೆಲ್ಲ ನಿನ್ನ, ಹುಡುಕಾಡಿ ಸೋತೆ
ಉಸಿರಾಟದಲ್ಲಿ, ನೀ ಭಾಗಿಯಾದೆ
ಜೀವ ಸಖಿ... ಜೀವ ಸಖಿ.. 

ತಂತಿಯಿಲ್ಲ, ತಾಳವಿಲ್ಲ ಈ ರಾಗಕೆ ಹಾಯ್.. ಅನುರಾಗಕೆ
ಅಂತರಂಗದಲ್ಲೇ ಹಾಡು ಆರಂಭಕೆ...
ತಂಗಾಳಿಯಂತೆ
ನೀ ಬಂದೆ ಸೋಕಿ
ಆಗಿರಲು ಒಲವು 
ಇನ್ನೇನು ಬಾಕಿ

ಕದ್ದು ಮುಚ್ಚಿ ಮಾಡೊದಲ್ಲ ಈ ಪ್ರೇಮವು.. ಈ ಪ್ರೇಮವು
ಹದ್ದು ಮೀರಿ ಹಾರುವಂತೆ ಆಹ್ಲಾದವು...
ಸಾಗರದ ಆಳ 
ಅರಿತಿರುವ ಹಾಗೆ
ಹೂ ದಳವು ಉದುರಿ 
ಈಜಾಡಿದಂತೆ..

ಆಲಿಸು

ಆಲಿಸು

ಮನದ ಮಾತನು
ಪಿಸು ನುಡಿ ನೀ ಆದರೆ ಬದಲಿಗೆ
ಯಾರಿಗೂ ಕೇಳಿಸಲಾರೆನು 
ಒಲವ ಸಂಗತಿ ಇದು ಹಾಡೋ ಬಗೆ..

ಇದೀಗ ಬಂದೆ ನೋಡು
ಅದೇನೋ ಮತ್ತೆ ಹಾಡು
ನಾ ಕಾದೆ ನಿನಗಾಗಿ ತುದಿಗಾಲಿನಲ್ಲಿ
ಒದ್ದಾಟ ಕಾಣದೇನು
ಸಮೀಪ ಬಂದೆ ಇನ್ನೂ
ನಾ ಕಾದೆ ನಿನಗಾಗಿ ತುದಿಗಾಲಿನಲ್ಲಿ

ನೇರ ನಿನ್ನಲ್ಲಿ ಒಂದು ಒಗಟು
ಹೇಗೆ ಇರಲಿ ನಾ ನಿನ್ನ ಹೊರತು
ನಿನ್ನ ಬಾಳ ಖುಷಿಗಳಲ್ಲಿ
ಇರಲೇ ಬೇಕು ನನ್ನ ಗುರುತು

ಈ ಎದೆಯಾಳದಲ್ಲಿ
ಬೇರೂರಿದಂತೆ ನೀನು
ನಾ ಕಾದೆ ನಿನಗಾಗಿ ತುದಿಗಾಲಿನಲ್ಲಿ... 

ಏನು ಅವರಸ ಕಾಲದ ಮುಳ್ಳೇ
ಪ್ರೀತಿ ಉಣಿಸುವೆ ನಿನಗೂ ನಿಲ್ಲೇ
ನಾ ಕಾದೆ ನಿನಗಾಗಿ ತುದಿಗಾಲಿನಲ್ಲಿ... 
ಸುಪ್ತವಾಗಿರೋ ಭಾವನೆಗಳನು
ಎಚ್ಚರಿಸಿರುವೆ ಗಡಿಬಿಡಿಯಲ್ಲಿ
ನಾ ಕಾದೆ ನಿನಗಾಗಿ ತುದಿಗಾಲಿನಲ್ಲಿ... 

ನಕ್ಷೆ ಗೀಚುತ ಕುಳಿತವಳನ್ನು
ದಿಕ್ಕು-ದೆಸೆ ಇರದ ಸಡಗರವು
ಪತ್ತೆ ಹಚ್ಚಿದೆ, ಬಣ್ಣ ಹಚ್ಚಿದೆ
ಅಚ್ಚು ಮೆಚ್ಚಿನ ಕನಸಾದಂತೆ

ಓ ಬರಗಾಲದಲ್ಲಿ
ಧರೆಗಿಳಿದ ಸೋನೆಯಂತೆ
ನಾ ಕಾದೆ ನಿನಗಾಗಿ ತುದಿಗಾಲಿನಲ್ಲಿ... 
ಅರೆ ಬರೆ ಬಿರಿದ ಹೂವು
ಇಬ್ಬನಿಯ ಕಾಯುವಂತೆ
ನಾ ಕಾದೆ ನಿನಗಾಗಿ ತುದಿಗಾಲಿನಲ್ಲಿ... 

ಈ ಬಿರು ಬಿಸಿಲಲ್ಲೂ ಕಂಗೊಳಿಸುವೆಯಲ್ಲ

ಈ ಬಿರು ಬಿಸಿಲಲ್ಲೂ ಕಂಗೊಳಿಸುವೆಯಲ್ಲ ನೀ ಖಂಡಿತ ಈ ಗ್ರಹದವಳಲ್ಲ ನಕ್ಷತ್ರಗಳ ಊರು? ಬಂಗಾರದ ಸೂರು? ಅಷ್ಟಲ್ಲದೆ ನಿನ್ನ ಹಾಗೆ ಕಾಣುವವರಿಲ್ಲ ಆಗೋ ಆ ಹಣೆಯಲ್ಲಿ ಬೆವರು ಜಿನು...