ಈ ಬಿರು ಬಿಸಿಲಲ್ಲೂ ಕಂಗೊಳಿಸುವೆಯಲ್ಲ
ನೀ ಖಂಡಿತ ಈ ಗ್ರಹದವಳಲ್ಲ
ನಕ್ಷತ್ರಗಳ ಊರು? ಬಂಗಾರದ ಸೂರು?
ಅಷ್ಟಲ್ಲದೆ ನಿನ್ನ ಹಾಗೆ ಕಾಣುವವರಿಲ್ಲ
ಆಗೋ ಆ ಹಣೆಯಲ್ಲಿ ಬೆವರು ಜಿನುಗೆ
ಎಷ್ಟು ನಳನಳಿಸುತ್ತಿದೆ
ತಂಗಾಳಿ ನಿನ್ನತ್ತ ಬೀಸಿ ಬಂದಿದೆ ತಾಳು
ನೀ ಒರೆಸುವ ಪ್ರಯಾಸ ಪಡಬೇಕಿಲ್ಲ
ಕಣ್ಣಂಚಿಗೆ ತೀಡಿದ ಕಾಡಿಗೆಯಿದೆಯಲ್ಲ
ಅದರ ಒಂದಂಶ ಇನ್ನೂ ಕಿರುಬೆರಳ ಅಂಚಿನಲಿ
ಪಾಲು ಕೇಳುತ ಮಿಕ್ಕ ಬೆರಳುಗಳು
ತಹತಹಿಸಿದಂತೆ ಕುಣಿದಿವೆಯಲ್ಲ!
ಎಲ್ಲಿ, ಒಮ್ಮೆ ನಗದಂತೆ ಮೊಗವೊಡ್ಡು
ಇಲ್ಲ, ಅದು ಸಾಧ್ಯವೇ ಇಲ್ಲ
ನೀನೇ ಬೇಕೆಂದು ಕೇಳಿ ಪಡೆದಂತಿದೆ
ನಗುವು ನಿನ್ನ ಸಹಜ ನಗ, ಹೌದಲ್ಲ?!
ಬಿಡು, ನಿನ್ನ ಹೊಗಳದ ದಿನವಿಲ್ಲ
ಶುರುವಾಗಿಸಲು ಕೊನೆಯಿಲ್ಲ
ಹಸಿವಿಲ್ಲ, ಕಸುವಿಲ್ಲ, ಕಸುಬಿಲ್ಲ
ಮತ್ತೇನಿಲ್ಲ, ನೀನಿರದೆ ನಾನಿಲ್ಲ!
No comments:
Post a Comment